ADVERTISEMENT

ಶೃಂಗೇರಿಯಲ್ಲಿ ಭರ್ಜರಿ ಮಳೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 13:47 IST
Last Updated 7 ಜುಲೈ 2018, 13:47 IST
ಶೃಂಗೇರಿಯ ಗಾಂಧೀ ಮೈದಾನದ ಪರ್ಯಾಯ ರಸ್ತೆ ಜಲಾವೃತಗೊಂಡಿರುವುದು.
ಶೃಂಗೇರಿಯ ಗಾಂಧೀ ಮೈದಾನದ ಪರ್ಯಾಯ ರಸ್ತೆ ಜಲಾವೃತಗೊಂಡಿರುವುದು.   

ಶೃಂಗೇರಿ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಎಡೆಬಿಡದ ಮಳೆ ಸುರಿದಿದ್ದು ಶನಿವಾರವು ಮುಂದುವರಿಯಿತು. ಕೆರೆಕಟ್ಟೆಯಲ್ಲಿ 240 ಮಿ.ಮೀ, ಕಿಗ್ಗಾದಲ್ಲಿ 123.5 ಮಿ.ಮೀ., ಶೃಂಗೇರಿಯಲ್ಲಿ 147 ಮಿ.ಮೀ. ಮಳೆಯಾಗಿದೆ.

ತುಂಗೆ ತುಂಬಿ ಹರಿಯುತ್ತಿದ್ದು ಗಾಂಧಿಮೈದಾನದ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲಾಗಿದೆ. ಅಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಪರ್ಯಾಯ ರಸ್ತೆ ಜಲಾವೃತ್ತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶೃಂಗೇರಿಗೆ ಬಂದ ಪ್ರವಾಸಿಗರ ವಾಹನಗಳು, ಖಾಸಗಿ ಬಸ್‌ ಹಾಗೂ ಇತರ ವಾಹನ ಚಾಲಕರು ಹರಸಾಹಸದಿಂದ ವಾಹನ ಚಲಾಯಿಸುವ ಸ್ಥಿತಿ ಉಂಟಾಗಿತ್ತು. ರಸ್ತೆಯಲ್ಲಿ ಪಾದಚಾರಿಗಳು ನಡೆದುಕೊಂಡು ಹೋಗಲು ಪರದಾಡುವಂತಾಯಿತು.

ಶೃಂಗೇರಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸಹಕಾರ ಸಾರಿಗೆ ಭಾರಿ ಮಳೆಯ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಾಲ್ಲೂಕಿನ ತೊರೆಹಡ್ಲು ಸಮೀಪ ಹೊಂಡಕ್ಕೆ ಉರುಳಿದೆ. ಅದೃಷ್ಟವಶಾತ್‌ ಬಸ್‌ನಲ್ಲಿದ್ದ 22 ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಲಿಲ್ಲ.

ADVERTISEMENT

ಮಳೆಯಿಂದಾಗಿ ತಾಲ್ಲೂಕಿನ ಹಳ್ಳಕೊಳ್ಳಗಳು ಭರ್ತಿಯಾಗಿವೆ. ಕೆರೆಮನೆ‌, ಕಿಕ್ರೆ ರಸ್ತೆ ಜಲಾವೃತ್ತಗೊಂಡಿದ್ದು ಜನಸಂಚಾರ ಸ್ಥಗಿತಗೊಂಡಿತ್ತು. ಎಡೆಬಿಡದೇ ಮಳೆ ಸುರಿಯುತ್ತಿರುವುದರಿಂದ ಕೃಷಿ ಕಾಯಕಕ್ಕೆ ಅಡ್ಡಿಯಾಗಿ ರೈತರು ಮನೆಯಲ್ಲಿ ಕಾಲ ಕಳೆಯುವಂತಾಯಿತು. ತಾಲ್ಲೂಕಿನ ಶೇ 75ರಷ್ಟು ರೈತರು ತೋಟಗಳ ಜೌಷಧಿ ಸಿಂಪಡಣೆಯನ್ನು ಮುಗಿಸಿದ್ದಾರೆ. ಹಲವು ರೈತರು ಸಸಿಮುಡಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಕೆರೆಕಟ್ಟೆಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ.

ಕಪ್ಪೆಶಂಕರ ದೇವಾಲಯ ಜಲಾವೃತಗೊಂಡಿದೆ. ಶಾರದ ಮಠದಲ್ಲಿ ಶನಿವಾರ ಪರವೂರಿನಿಂದ ಬಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಶ್ರೀ ಶಾರದಾಂಬೆಗೆ ವಿಶೇಷಪೂಜೆ ಸಲ್ಲಿಸಿದರು. ಮಳೆಯಿಂದಾಗಿ ತೊಂದರೆಯನ್ನೂ ಎದುರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.