ADVERTISEMENT

ಅಗತ್ಯ ಮೇವು ಸಂಗ್ರಹಿಸಿಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 4:50 IST
Last Updated 6 ಫೆಬ್ರುವರಿ 2017, 4:50 IST

ಹಿರಿಯೂರು: ‘ಗೋಶಾಲೆ ಆರಂಭಿಸುವುದು ದೊಡ್ಡ ಸಂಗತಿಯಲ್ಲ. ಆದರೆ, ಗೋಶಾಲೆಗೆ ಬರುವ ರಾಸುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡುವುದು ದೊಡ್ಡ ಸವಾಲಾಗಿದೆ’ ಎಂದು ಶಾಸಕ ಡಿ.ಸುಧಾಕರ್ ಹೇಳಿದರು.

ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದೀಗೆರೆ ಗ್ರಾಮಲ್ಲಿ ಶನಿವಾರ ಗೋಶಾಲೆಗೆ ಚಾಲನೆ ನೀಡಿ ಅವರು ಮಾತನಾಡಿದರು.‘ರಾಜ್ಯದ 162 ತಾಲ್ಲೂಕುಗಳು ಮಳೆಯ ಕೊರತೆಯಿಂದ ಬರಪೀಡಿತವಾಗಿವೆ. ಒಣ ಹುಲ್ಲು ಸಿಗುವುದೂ ಕಷ್ಟವಾಗಿದೆ. ಗೋಶಾಲೆ ಆರಂಭಿಸುವ ಮೊದಲು ಕನಿಷ್ಠ ಒಂದು ತಿಂಗಳಿನ ಮೇವನ್ನಾದರೂ ಸಂಗ್ರಹಿಸಿ ಇಟ್ಟುಕೊಳ್ಳಬೇಕಿದೆ. ಹೀಗಾಗಿ ಗೋಶಾಲೆ ಆರಂಭಿಸಲು ತಡವಾಗಿದೆ.

ತಾಲ್ಲೂಕಿನಲ್ಲಿ ಆರಂಭವಾಗಿರುವ ಮೂರನೇ ಗೋಶಾಲೆ ಇದಾಗಿದ್ದು, ತಾಲ್ಲೂಕಿನ ಕೆರೆ ಅಂಗಳಗಳಲ್ಲಿ, ನೀರಿನ ಲಭ್ಯತೆ ಇರುವ ರೈತರ ಜಮೀನುಗಳಲ್ಲಿ ಮೇವಿನ ಬೀಜ ಬಿತ್ತನೆಗೆ ಚಾಲನೆ ನೀಡಿದ್ದು, ಒಂದು, ಒಂದೂವರೆ ತಿಂಗಳಲ್ಲಿ ಹಸಿ ಮೇವು ಸಿಗಲಿದೆ’ ಎಂದು ಅವರು ತಿಳಿಸಿದರು.

ಐಮಂಗಲ ಹೋಬಳಿ ತಾಲ್ಲೂಕಿನಲ್ಲೇ ಕನಿಷ್ಠ ಮಳೆಯಾಗುವ ಪ್ರದೇಶ. ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಇದೆ. ಹೋಬಳಿಯ 72  ಹಳ್ಳಿಗಳಿಗೆ ವಾಣಿವಿಲಾಸ ಜಲಾಶಯದ ನೀರು ಪೂರೈಸಲು ಯೋಜನೆ ಜಾರಿಗೊಳಿಸಲಾಗಿದೆ. ಜಾನುವಾರು ರಕ್ಷಣೆಗೆ ಈಗ ಗೋಶಾಲೆ ಆರಂಭಿಸಲಾಗಿದೆ. ರೈತರು ತಮ್ಮ ಜಾನುವಾರನ್ನು ಗೋಶಾಲೆಗೆ ಬಿಟ್ಟು ರಕ್ಷಣೆ ಮಾಡಿಕೊಳ್ಳಬೇಕು ಎಂದು ಸುಧಾಕರ್ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶ್ರೀಧರ ಬಾರಿಕೇರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹಾದೇವಮ್ಮ, ಸದಸ್ಯರಾದ ಶ್ರೀನಿವಾಸ್, ಸಿದ್ದೇಶ್, ಚಿತ್ರಾವತಿ, ಅನ್ನಪೂರ್ಣಮ್ಮ, ಗುತ್ತಿಗೆದಾರ ಚಂದ್ರಪ್ಪ, ಚಂದ್ರಪ್ಪ ಸ್ವಾಮಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಲಕ್ಷ್ಮಿದೇವಿ ಮಹಾಂತೇಶ್, ತಿಪ್ಪೇಸ್ವಾಮಿ, ಚಂದ್ರಪ್ಪ, ಕಂದಿಕೆರೆ ಸುರೇಶ್‌ಬಾಬು,  ಉಮಾಪತಿ, ಕಲ್ಲಹಟ್ಟಿ ಸಿ.ತಿಪ್ಪೇಸ್ವಾಮಿ, ಕಲ್ಲಹಟ್ಟಿ ಹರೀಶ್, ಆನಂದ್,  ಶಾಂತಣ್ಣ, ಪಶು ಇಲಾಖೆ ಸಹಾಯಕ ನಿರ್ದೇಶಕ
ಡಾ.ರವಿ, ಪಶು ವೈದ್ಯಾಧಿಕಾರಿ ಎನ್.ಕುಮಾರ್, ಸದಾಶಿವಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT