ADVERTISEMENT

‘ಆಂಜನೇಯರನ್ನು ಕ್ಷೇತ್ರಕ್ಕೆ ಪರಿಚಯಿಸಿದ್ದೇ ನಾನು’

ಉಮಾಪತಿ ಅಭಿಮಾನಿಗಳಿಂದ ಜನ ಜಾಗೃತಿ ಸಭೆ, ಸಚಿವರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 6:42 IST
Last Updated 11 ಜುಲೈ 2017, 6:42 IST

ಹೊಳಲ್ಕೆರೆ: ‘ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರನ್ನು ಕ್ಷೇತ್ರಕ್ಕೆ ಪರಿಚಯಿಸಿದ್ದೇ ನಾನು’ ಎಂದು ಕಾಂಗ್ರೆಸ್ ಮುಖಂಡ ಎ.ವಿ.ಉಮಾಪತಿ ಹೇಳಿದರು. ತಾಲ್ಲೂಕಿನ ರಾಮಗಿರಿಯಲ್ಲಿ ಸೋಮವಾರ ನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

‘ಆಂಜನೇಯ ಅವರು ನಮ್ಮ ಕ್ಷೇತ್ರಕ್ಕೆ ಬಂದಾಗ ಇಲ್ಲಿನ ಜನರ ಪರಿಚಯವೇ ಇರಲಿಲ್ಲ. ಆಗ ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಮುಖಂಡ ರನ್ನು ಪರಿಚಯಿಸಿದೆ.

ಕಾರ್ಯಕರ್ತರನ್ನು ಭೇಟಿ ಮಾಡಿಸಿದೆ. ನಾನು ಕಾಂಗ್ರೆಸ್ ಪಕ್ಷಕ್ಕೆ ಹಾಕಿದ ಬುನಾದಿಯ ಮೇಲೆ ಅವರು ಗೆದ್ದರೇ ಹೊರತು, ಸ್ವಸಾಮರ್ಥ್ಯದಿಂದ ಅಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ನನ್ನನ್ನೇ ಕಡೆಗಣಿಸಿದರು. ನಾನು ಪಕ್ಷದಲ್ಲಿದ್ದರೆ ತೊಂದರೆ ಆಗುತ್ತದೆ ಎಂದು ಪಕ್ಷದಿಂದ ಹೊರಹಾಕಿಸುವ ಪ್ರಯತ್ನ ನಡೆಸಿದರು. ನನ್ನ ಅಭಿಮಾನಿಗಳಿಗೆ ಆಂಜನೇಯ ಅವರನ್ನು ಕ್ಷೇತ್ರದಿಂದಲೇ ಹೊರಹಾಕುವ ತಾಕತ್ತು ಇದೆ’ ಎಂದರು.

ADVERTISEMENT

ಸಚಿವರಿಂದ ಕಾಂಗ್ರೆಸ್‌ಗೆ ಹಿನ್ನಡೆ: ‘ಆಂಜನೇಯ ಸಚಿವರಾದ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆಗಿದೆ. ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಎಪಿಎಂಸಿ ಚುನಾವಣೆಗಳಲ್ಲಿ ಪಕ್ಷಕ್ಕೆ ಮುಖಭಂಗ ಆಗಿದೆ. ನಾನು ಜಾಗೃತಿ ಸಭೆಗಳನ್ನು ನಡೆಸುತ್ತಿರುವುದು ಯಾವುದೇ ವ್ಯಕ್ತಿಯ ವಿರುದ್ಧ ಅಲ್ಲ. ಕಟ್ಟಿ ಬೆಳೆಸಿದ ಪಕ್ಷ ಶಿಥಿಲವಾಗಬಾರದು ಎಂಬುದು ನನ್ನ ಕಳಕಳಿ’ ಎಂದು ಉಮಾಪತಿ ಹೇಳಿದರು.

ಕೆಪಿಸಿಸಿ ಮುಖಂಡ ಜೆ.ಜೆ.ಹಟ್ಟಿ ಡಾ.ತಿಪ್ಪೇಸ್ವಾಮಿ ಮಾತನಾಡಿ, ‘ನಮ್ಮ ಕ್ಷೇತ್ರದವರು ದಾವಣಗೆರೆ, ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಂತು ಗೆಲ್ಲಲಾಗುವುದಿಲ್ಲ. ಆದರೆ, ಅಲ್ಲಿಂದ ಬಂದವರನ್ನು ಇಲ್ಲಿನ ಜನ ಗೆಲ್ಲಿಸಿರುವುದು ಜಿಲ್ಲೆಯ ದುರಂತ. ಸಂಸದ ಬಿ.ಎನ್.ಚಂದ್ರಪ್ಪ ಹೇಗಿದ್ದಾರೆ ಎಂದು ಇಲ್ಲಿನ ಜನ ನೋಡಿಲ್ಲ.

ರಾಮಗಿರಿಯ ಪಕ್ಕದಲ್ಲೇ ಇರುವ ಗಂಗಸಮುದ್ರವನ್ನು ಸಂಸದರ ಆದರ್ಶ ಗ್ರಾಮ ಎಂದು ಆಯ್ಕೆ ಮಾಡಿದ್ದು, ಯಾವುದೇ ಅಭಿವೃದ್ಧಿ ಕಂಡಿಲ್ಲ. ಹೊರಗಿನಿಂದ ಬಂದವರು ಇಲ್ಲಿ ಸಂತೆ ಮಾಡಿಕೊಂಡು ಹೋಗುತ್ತಾರೆ. ಸ್ಥಳೀಯರನ್ನು ಗೆಲ್ಲಿಸಿದರೆ ಮಾತ್ರ ಜನರ ಕಷ್ಟಗಳಿಗೆ ಸ್ಪಂದಿಸುತ್ತಾರೆ’ ಎಂದರು.

ವಿಐಪಿ ಅತಿಥಿ ಗೃಹಕ್ಕೆ ಕಲ್ಲು: ಸಚಿವ ಎಚ್.ಆಂಜನೇಯ ಅವರಿಗೆ ಮಾಜಿ ಶಾಸಕ ಎಂ.ಚಂದ್ರಪ್ಪ ಅವರು ನಿರ್ಮಿಸಿದ ಕಟ್ಟಡಗಳಿಗೆ ಸುಣ್ಣ ಬಳಿಸಲು ಆಗಿಲ್ಲ ಎಂದು ಉಮಾಪತಿ ದೂರಿದರು.

ಹನುಮಂತದೇವರ ಕಣಿವೆಯಲ್ಲಿ ನಿರ್ಮಿಸಿರುವ ವಿಐಪಿ ಅತಿಥಿಗೃಹದ ಕಟ್ಟಡಕ್ಕೆ ಕಲ್ಲು ಹೊಡೆದು ಗಾಜುಗಳನ್ನು ಪುಡಿ ಮಾಡಲಾಗಿದೆ. ಎಪಿಎಂಸಿ ಪ್ರಾಂಗಣವೂ ಹಾಳು ಬಿದ್ದಿದೆ ಎಂದು ಉಮಾಪತಿ ಆರೋಪಿಸಿದರು.

ಮುಖಂಡರಾದ ವೈಶಾಖ್ ಯಾದವ್, ನಾಗರಾಜಪ್ಪ, ನಿಜಾಮು ದ್ದೀನ್, ಅಬ್ದುಲ್ ಖಾಸಿಂ, ಸೈಫುಲ್ಲಾ ಮೌಲಾನ್, ನಿವೃತ್ತ ಡಿವೈಎಸ್ಪಿ ಅಬ್ದುಲ್ ರಹೀಮ್, ಹಯತ್ ಬಾಷಾ, ಗೌಡರ ಲೋಕಣ್ಣ, ತಾಳಿಕಟ್ಟೆ ರುದ್ರಪ್ಪ, ನುಲೇನೂರು ಶೇಖರ್, ಗ್ರಾಮ ಪಂಚಾಯ್ತಿ ಸದಸ್ಯೆ ರುದ್ರಮ್ಮ, ಲಕ್ಷ್ಮೀ, ಚಿತ್ತಮ್ಮ, ಜಯಕ್ಕ, ಕಲ್ಪನಾ, ಪುಟ್ಟಣ್ಣ, ಮಂಜು, ಮೂರ್ತಿ ನಾಯ್ಕ, ಹರೀಶ್, ಪಾಡಿಗಟ್ಟೆ ತಿಮ್ಮಣ್ಣ ಅವರೂ ಇದ್ದರು.

***

ಸಚಿವರ ಹುನ್ನಾರ
‘ಎಚ್.ಆಂಜನೇಯ ಹುನ್ನಾರದಿಂದ ನನಗೆ ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನ ಕೈತಪ್ಪಿತು ಎಂದು ಕೆಪಿಸಿಸಿ ಸದಸ್ಯ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಆರೋಪಿಸಿದರು.

‘ಅಧ್ಯಕ್ಷ ಸ್ಥಾನ ಕೊಡುವಂತೆ ರಾಹುಲ್ ಗಾಂಧಿಯವರೇ ಹೇಳಿದ್ದರು. ಆದರೆ, ಆಂಜನೇಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಅಧ್ಯಕ್ಷ ಸ್ಥಾನ ಕೈತಪ್ಪುವಂತೆ ಮಾಡಿದ್ದಾರೆ. ಜನ ಬಯಸಿದಂತೆ ವಿಧಾನಸಭೆ ಅಥವಾ ಸಂಸತ್ ಚುನಾವಣೆ ಯಲ್ಲಿ ಸ್ಪರ್ಧಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.