ADVERTISEMENT

ಆಂಬುಲೆನ್ಸ್‌ ರೂಪದಲ್ಲಿ ಬಂದ ಜವರಾಯ!

ಕೊಂಡ್ಲಹಳ್ಳಿ ಜಯಪ್ರಕಾಶ
Published 18 ಮಾರ್ಚ್ 2017, 6:56 IST
Last Updated 18 ಮಾರ್ಚ್ 2017, 6:56 IST
. ಅಪಘಾತದಲ್ಲಿ ನಜ್ಜುಗುಜ್ಜಾದ ಆಂಬುಲೆನ್ಸ್‌.
. ಅಪಘಾತದಲ್ಲಿ ನಜ್ಜುಗುಜ್ಜಾದ ಆಂಬುಲೆನ್ಸ್‌.   

ಮೊಳಕಾಲ್ಮುರು: ತಳಕು ಹೋಬಳಿಯ  ಮನ್ನೇಕೋಟೆ ಬಳಿಯ ಕಾವಲುರಹಿತ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಬಳಿ ಗುರುವಾರ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟ ನಾಲ್ವರ ಪಾಲಿಗೆ ಆಂಬುಲೆನ್ಸ್‌ ರೂಪದಲ್ಲಿ ಜವರಾಯ ಬಂದಂತಾಗಿದೆ. ಇವರಲ್ಲಿ ಮೂವರು ಸಾಯಲೆಂದೇ ಆಂಬುಲೆನ್ಸ್‌ ಏರಿದರೇ ಎಂದು ಗ್ರಾಮಸ್ಥರು ಶೋಕಿಸಿದರು.

ಆಂಬುಲೆನ್ಸ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ತಳಕು ಹೋಬಳಿಯ ಬಂಡೆ ತಿಮ್ಲಾಪುರದ ಗಂಗಮ್ಮ (35) ಹಾಗೂ ಬೇಡರೆಡ್ಡಿಹಳ್ಳಿಯ ಚಂದ್ರಕಲಾ (40), ಆಕೆಯ ತಾಯಿ ಲಕ್ಷ್ಮಮ್ಮ (65) ಹಾಗೂ ಶಂಕರಮ್ಮ (60) ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಲಕ್ಷ್ಮಮ್ಮ ಅವರ ತಾಯಿ ಕದರಮ್ಮ ಹಾಗೂ ಗಂಗಮ್ಮ ಅವರ ಒಂದು ತಿಂಗಳ ಗಂಡು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹಸುಗೂಸನ್ನು ಗಂಗಮ್ಮ ಅವರು ಬೇಡರೆಡ್ಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ವೈದ್ಯರ ಸೂಚನೆ ಮೇರೆಗೆ ತಳಕಿಗೆ ರಕ್ತಪರೀಕ್ಷೆ ಮಾಡಿಸಲು ಗುರುವಾರ ಸಂಜೆ ಆಂಬುಲೆನ್ಸ್‌ನಲ್ಲಿ ಬಂದು ಬೇಡರೆಡ್ಡಿ ಹಳ್ಳಿಗೆ ವಾಪಸ್‌ ಹೊರಟಿದ್ದರು.

ADVERTISEMENT

ಇನ್ನೊಂದೆಡೆ ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯಲು ತಳಕಿಗೆ ಬಂದಿದ್ದ ಬೇಡರೆಡ್ಡಿಹಳ್ಳಿಯ ಚಂದ್ರಕಲಾ, ಲಕ್ಷ್ಮಮ್ಮ ಹಾಗೂ ಶಂಕರಮ್ಮ ಅವರು ಊರಿಗೆ ಹೋಗಲು ಬಾಡಿಗೆ ಮಾತನಾಡಿ ಆಟೊದಲ್ಲಿ ಕುಳಿತಿದ್ದರು. ಅದೇ ವೇಳೆ ಅಲ್ಲಿಗೆ ಬಂದ ಆಂಬುಲೆನ್ಸ್‌ನ ಸಿಬ್ಬಂದಿ ತಾವೂ ಬೇಡರೆಡ್ಡಿಹಳ್ಳಿಗೇ ಹೊಗುತ್ತಿರು ವುದಾಗಿ ಮೂವರನ್ನೂ ಹತ್ತಿಸಿಕೊಂಡಿ ದ್ದಾರೆ. ಸುಮಾರು ನಾಲ್ಕು ಕಿ.ಮೀ ದೂರ ಕ್ರಮಿಸಿದ ಬಳಿಕ ಅಪಘಾತ ಸಂಭವಿಸಿದೆ.

ಕೃಷಿಕರಾದ ಚಂದ್ರಕಲಾ ಕುಟುಂಬ ಘಟನೆಯಿಂದ ಕಂಗಾಲಾಗಿದೆ ಎಂದು ಗ್ರಾಮಸ್ಥರು ಮರುಗಿದರು.

'ಧೈರ್ಯ' ತಂದ ಆಪತ್ತು: ಕಾವಲುರಹಿತ ಲೆವೆಲ್‌ ಕ್ರಾಸಿಂಗ್‌ ಆಗಿದ್ದರೂ ದೂರದಿಂದ ರೈಲು ಬರುತ್ತಿರುವುದನ್ನು ಗಮನಿಸಿ ಕೆಲವು ಬೈಕ್‌ ಹಾಗೂ ಟಾಟಾ ಏಸ್‌ ವಾಹನಗಳು ಸಮೀಪದಲ್ಲಿ ನಿಂತಿದ್ದವು. ಆದರೆ, ಆಂಬುಲೆನ್ಸ್‌ ಬಂದರೆ ಎಲ್ಲರೂ ದಾರಿ ಬಿಡುತ್ತಾರೆ ಎಂಬ ಧೈರ್ಯ ಮಾಡಿದ ಚಾಲಕ, ರೈಲು ಬರುತ್ತಿರುವುದನ್ನೂ  ಲೆಕ್ಕಿಸದೇ ಮುಂದಕ್ಕೆ ಹೋಗಿದ್ದಾನೆ. ರೈಲು ಆಂಬು ಲೆನ್ಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಚಾಲಕನ ಅಜಾಗರೂಕತೆಗೆ ನಾಲ್ವರ ಬಡ ಜೀವ ಬಲಿಯಾದವು ಎಂದು ಗಂಗಮ್ಮನ ಸಂಬಂಧಿಕರು ದೂರಿದರು.

ಗಂಗಮ್ಮ ಅವರಿಗೆ ಮೂವರು ಚಿಕ್ಕ ಮಕ್ಕಳಿದ್ದಾರೆ. ಗಂಡ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಘಟನೆ ಯಿಂದಾಗಿ ಇಡೀ ಕುಟುಂಬ ಅಕ್ಷರಶಃ ಬೀದಿಗೆ ಬಿದ್ದಿದೆ. ಬದುಕಿರುವ ಮಗುವಿನ ಭವಿಷ್ಯಕ್ಕೆ ಹಾಗೂ ಮೃತರಿಗೆ ಸರ್ಕಾರ ದಿಂದ ಪರಿಹಾರ ನೀಡಬೇಕು ಎಂದು ಸಂಬಂಧಿಕರು ಮನವಿ ಮಾಡಿದ್ದಾರೆ.

**

ಪರಿಹಾರಕ್ಕೆ ಯಾರನ್ನು ಕೇಳಬೇಕು?
‘ಅಪಘಾತಕ್ಕೆ ಸಂಬಂಧಿಸಿದಂತೆ ಪರಿಹಾರಕ್ಕಾಗಿ ಯಾರನ್ನು ಸಂಪರ್ಕಿಸಬೇಕು ಎಂದು ತಿಳಿಯುತ್ತಿಲ್ಲ. ರೈಲ್ವೆ ಪೊಲೀಸರು, ರೈಲ್ವೆ ವಿಭಾಗೀಯ ಕಚೇರಿ ಕಡೆಗೆ ಕೈ ತೋರಿಸುತ್ತಿದ್ದಾರೆ. ಮೊದಲೇ ಸಂಕಷ್ಟದಲ್ಲಿರುವ ಬಡ ಕುಟುಂಬಕ್ಕೆ ಇವುಗಳನ್ನು ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ರೈಲ್ವೆ ಅಧಿಕಾರಿಗಳು ನೆರವಿಗೆ ಬರಬೇಕು’ ಎಂದು ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.