ADVERTISEMENT

ಆರೋಗ್ಯ ಕಾಳಜಿ ವಹಿಸಲು ಪೌರ ಕಾರ್ಮಿಕರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 10:02 IST
Last Updated 4 ಸೆಪ್ಟೆಂಬರ್ 2015, 10:02 IST

ಚಿತ್ರದುರ್ಗ: ‘ಅನೈರ್ಮಲ್ಯ ವಾತಾವರಣ ದಲ್ಲಿ ನಿರಂತರ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರ ಕಾರ್ಮಿಕರು ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅವರೆಲ್ಲರೂ ಆರೋಗ್ಯದ ಕುರಿತು ಹೆಚ್ಚು ಗಮನ ನೀಡಬೇಕು’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಸಲಹೆ ನೀಡಿದರು.

ನಗರದ ಅಂಬೇಡ್ಕರ್ ಕಲ್ಯಾಣ ಮಂಟಪದಲ್ಲಿ ಗುರುವಾರ ನಗರಸಭೆ, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಪೌರ ಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರು ಸೇರಿದಂತೆ ಕಾಯಂ ಪೌರಸೇವಾ ನೌಕರರ ಆರೋಗ್ಯ ಸುಧಾರಣೆ ದೃಷ್ಠಿಯಿಂದ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದ್ದು, ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಕೀಲು, ಮೂಳೆ, ಗಂಟಲು, ಚರ್ಮ ಹಾಗೂ ಇತರೆ ಸಾಮಾನ್ಯ ವಿಷಯಗಳಿಗೆ ಸಂಬಂಧಿಸಿದ ತಜ್ಞರು ತಪಾಸಣೆ ನಡೆಸುವರು ಎಂದು ಹೇಳಿದರು.

ಶಿಬಿರದಲ್ಲಿ ಪ್ರತಿಯೊಬ್ಬ ಪೌರ ಕಾರ್ಮಿಕರ ರಕ್ತ, ಮೂತ್ರ ಪರೀಕ್ಷೆ ನಡೆಸಲಾಗುವುದು. ರಕ್ತದ ಗುಂಪಿನ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಕಾಯಂ ಪೌರಸೇವಾ ನೌಕರರು ಹಾಗೂ ಗುತ್ತಿಗೆ ಆಧಾರದ ಕಾರ್ಮಿಕರು ಸೇರಿದಂತೆ ಒಟ್ಟು 225 ಮಂದಿ ಶಿಬಿರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ನಗರಸಭೆ ಉಪಾಧ್ಯಕ್ಷ ಖಾದರ್‌ಖಾನ್, ಪೌರಾಯುಕ್ತ ಎಂ.ಕೆ.ನಲವಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.