ADVERTISEMENT

ಆರ್‌ಟಿಇ ಮಕ್ಕಳಿಗೆ ಸಿಗದ ಪಠ್ಯಪುಸ್ತಕ

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 5:03 IST
Last Updated 6 ಜುಲೈ 2017, 5:03 IST

ಮೊಳಕಾಲ್ಮುರು: ಸರ್ವ ಶಿಕ್ಷಣ ಅಭಿಯಾನದ ಕಡ್ಡಾಯ ಶಿಕ್ಷಣ ಹಕ್ಕು ಯೋಜನೆ (ಆರ್‌ಟಿಇ) ಅಡಿ ತಾಲ್ಲೂಕಿನ ಖಾಸಗಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವರ್ಷ ಶಾಲೆ ಆರಂಭವಾಗಿ ಒಂದು ತಿಂಗಳು ಕಳೆದರೂ ಪಠ್ಯಪುಸ್ತಕ ವಿತರಣೆ ಆಗಿಲ್ಲ.

ಪ್ರತಿವರ್ಷ ಶಿಕ್ಷಣ ಇಲಾಖೆ ಆದೇಶದಂತೆ ಖಾಸಗಿ ಶಾಲೆಗಳು ಆರ್‌ಟಿಇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸುತ್ತಿದ್ದವು. ಬಳಿಕ ಅದರ ಹಣವನ್ನು ಪೋಷಕರಿಂದ ಪಡೆಯುತ್ತಿದ್ದವು. ಆದರೆ, ಆರ್‌ಟಿಇ ವಿದ್ಯಾರ್ಥಿಗಳಿಗೆ ಈ ವರ್ಷ ಉಚಿತವಾಗಿ ಪುಸ್ತಕ ನೀಡಲಾಗುವುದು ಮತ್ತು ಅನುದಾನವನ್ನೂ ಹೆಚ್ಚಳ ಮಾಡಲಾಗುವುದು ಎಂದು ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆ ಎನ್ನುವುದು ಗೊಂದಲ ಮೂಡಿಸಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ದೂರಿವೆ.

‘ಅಂಕಿ ಅಂಶಗಳ ಪ್ರಕಾರ ಈ ವರ್ಷ ಒಂದನೇ ತರಗತಿಯಲ್ಲಿ 161 ಮಕ್ಕಳಿದ್ದು, ಪ್ರತಿ ಸೆಟ್‌ ಪುಸ್ತಕ ಕೊಳ್ಳಲು ₹ 156ರಂತೆ ಒಟ್ಟು ₹ 25,164 ಅಗತ್ಯವಿದೆ. ಎರಡನೇ ತರಗತಿಯಲ್ಲಿ 181 ಮಕ್ಕಳಿದ್ದು, ಪುಸ್ತಕದ ಸೆಟ್‌ಗೆ₹ 152ರಂತೆ ಒಟ್ಟು ₹ 27,512 ಬೇಕು.

ADVERTISEMENT

ಮೂರನೇ ತರಗತಿಯಲ್ಲಿ 111 ವಿದ್ಯಾರ್ಥಿಗಳಿದ್ದು, ಪ್ರತಿ ಸೆಟ್‌ಗೆ ₹ 168ರಂತೆ ಒಟ್ಟು ₹18,648 ಅಗತ್ಯವಿದೆ. ಎರಡನೇ ತರಗತಿಯಲ್ಲಿ 93 ವಿದ್ಯಾರ್ಥಿಗಳಿದ್ದು, ₹ 320ರಂತೆ ಒಟ್ಟು ₹ 29,760 ಬೇಕು. ಎಲ್‌ಕೆಜಿ ಹಾಗೂ ಯುಕೆಜಿ ಪ್ರವೇಶ ಪಡೆದವರಿಗೆ ಇಲಾಖೆ ಪುಸ್ತಕ ನೀಡುವುದಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಬ್ದುಲ್‌ ರಷೀದ್‌ ಹೇಳಿದರು.

‘ಖಾಸಗಿ ಶಾಲೆಯವರು ಪಠ್ಯ ಪುಸ್ತಕ ನೀಡಬೇಕು. ಇದನ್ನು ಲೆಕ್ಕ ಪರಿಶೋಧನೆಯಲ್ಲಿ ತೋರಿಸಿದರೆ ಇಲಾಖೆ ಹಣ ಭರಿಸಲಿದೆ. ಸಚಿವರ ಆದೇಶದ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಶಾಲೆಯವರು ಗೊಂದಲ ಮೂಡಿಸದೆ ತಕ್ಷಣ ಪುಸ್ತಕ ವಿತರಣೆ ಮಾಡಬೇಕು. ಈವರೆಗೆ ಪುಸ್ತಕ ನೀಡಿಲ್ಲ ಎಂಬುದು ಗಮನಕ್ಕೆ ಬಂದಿದೆ’ ಎಂದು ಅವರು ಹೇಳಿದರು.

ಕೊಂಡ್ಲಹಳ್ಳಿ ಸರ್ವೋದಯ ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಟಿ. ನಾಗಭೂಷಣ ಮಾತನಾಡಿ, ‘ಮೇ ತಿಂಗಳಿನಲ್ಲಿ ಇಲಾಖೆ ನಡೆಸಿದ ಮುಖ್ಯ ಶಿಕ್ಷಕರ ಸಭೆಯಲ್ಲಿ ಈ ವರ್ಷ ಉಚಿತ
ವಾಗಿ ಪಠ್ಯಪುಸ್ತಕ ನೀಡಲಾಗುವುದು ಎಂದು ಹೇಳಲಾಗಿತ್ತು.

ಆದರೆ, ಈಚೆಗೆ ನಡೆಸಿದ ಸಭೆಯಲ್ಲಿ ಶಾಲೆಯವರು ಪುಸ್ತಕ ನೀಡಿ ಅದರ ಹಣವನ್ನು ಲೆಕ್ಕ ಪರಿಶೋಧನೆಯಲ್ಲಿ ತೋರಿಸಿದಲ್ಲಿ ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಲಿಖಿತ ಆದೇಶ ನೀಡದೇ ಮೌಖಿಕವಾಗಿ ಹೇಳುತ್ತಿದ್ದಾರೆ. ಇಲಾಖೆ ಅಧಿಕಾರಿಗಳ ತಪ್ಪಿನಿಂದಾಗಿ ಶಾಲೆ ಹಾಗೂ ಪೋಷಕರ ಮಧ್ಯೆ ಗೊಂದಲ ಏರ್ಪಟ್ಟಿದೆ’ ಎಂದು ಹೇಳಿದರು. ಇಲಾಖೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಲಿಖಿತ ಆದೇಶ ನೀಡಿದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.

* * 

ಇಲಾಖೆಯಲ್ಲಿ ಪುಸ್ತಕ ದಾಸ್ತಾನಿದ್ದು, ಹಣ ನೀಡಿ ಪಡೆದುಕೊಂಡು ವಿತರಿಸಬೇಕು. ಲೆಕ್ಕ ಪರಿಶೋಧನೆಯಲ್ಲಿ ತೋರಿಸಿ ಹಣ ವಾಪಸ್‌ ಪಡೆಯಬೇಕು.
ಅಬ್ದುಲ್‌ ಬಷೀರ್‌
ಬಿಇಒ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.