ADVERTISEMENT

ಉತ್ಪಾದನಾ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 9:48 IST
Last Updated 30 ಸೆಪ್ಟೆಂಬರ್ 2014, 9:48 IST

ಚಿತ್ರದುರ್ಗ: ‘ಮುಂದಿನ ಎರಡು ದಶಕಗಳಲ್ಲಿ ಉತ್ಪಾದನಾ ಕ್ಷೇತ್ರದಲ್ಲಿ ಸಾವಿರ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ಅಂಥ ಉದ್ಯೋಗಕ್ಕೆ ಸರಿ ಹೊಂದುವಂತಹ ಮಾನವ ಸಂಪನ್ಮೂಲ ಸಿದ್ಧವಾಗಬೇಕಿದೆ’ ಎಂದು ಬೆಂಗಳೂರಿನ ಏಸ್ ಮೈಕ್ರೋಮ್ಯಾಟಿಕ್ಸ್ ಸಂಸ್ಥೆಯ ಸಿಇಒ ಕಾಶೀನಾಥ್ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ‘ಉದ್ಯೋಗ ಮೇಳ’ದಲ್ಲಿ ಮಾತನಾಡಿದ ಅವರು, ‘ಮೆಕಾನಿಕಲ್ ಕ್ಷೇತ್ರಕ್ಕೆ ಬೇಕಾಗುವ ಮಾನವ ಸಂಪನ್ಮೂಲವನ್ನು ನಮ್ಮ ಸಂಸ್ಥೆ ತಯಾರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಮುರುಘಾ ಮಠದ ಸಹಯೋಗದಲ್ಲಿ ಅಂತಹದೊಂದು ತರಬೇತಿ ಕೇಂದ್ರವನ್ನು ಆರಂಭಿಸುವ ಯೋಚನೆ ಇದೆ’ ಎಂದು ಹೇಳಿದರು.

‘ನಾನು ಚಿತ್ರದುರ್ಗ ಜಿಲ್ಲೆಯ ಲಕ್ಷ್ಮೀಸಾಗರದವನು. ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಕೃಷಿ ಮಾಡುತ್ತಲೇ ಓದಿ, ಎಂಜಿನಿಯರಿಂಗ್ ಮುಗಿಸಿ, ಕಂಪೆನಿ­ಯೊಂ­ದರಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ. ನನ್ನಂತೆಯೇ ನಮ್ಮ ಹಳ್ಳಿಗಳ ಯುವಕರು ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕು. ಈ ಉದ್ದೇಶ­ದೊಂದಿಗೆ ನಮ್ಮ ಕಂಪೆನಿಯಲ್ಲಿ ಪ್ರತಿ ವರ್ಷ 8ನೇ ತರಗತಿ, ಹತ್ತನೇ ತರಗತಿ ಓದಿದ 70 ಗ್ರಾಮೀಣ ಯುವಕರಿಗೆ ತರಬೇತಿ ನೀಡುತ್ತಿದ್ದೇವೆ. ಒಂದು ವರ್ಷದ ಅವಧಿಯ ತರಬೇತಿಯನ್ನು ಕನ್ನಡದಲ್ಲೇ ನೀಡುತ್ತೇವೆ. ತರಬೇತಿ ಮುಗಿದ ನಂತರ ಐಟಿಐ ತತ್ಸಮಾನ ಪ್ರಮಾಣ ಪತ್ರ ನೀಡುತ್ತೇವೆ. ನಮ್ಮ ಒಡನಾಡಿ ಕಂಪೆನಿಗಳಲ್ಲಿ ಉದ್ಯೋಗವನ್ನು ಕೊಡಿಸುತ್ತಿದ್ದೇವೆ’ ಎಂದು ವಿವರಿಸಿದರು.

‘ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆದು 2 ವರ್ಷಗಳ ಕೋರ್ಸ್ ಆರಂಭಿಸುತ್ತಿದ್ದೇವೆ. ಅದು ಡಿಪ್ಲೊಮಾ ಕೋರ್ಸ್‌ಗೆ ಸಮಾನ. ಕಂಪೆನಿ ನೀಡುವ ಪ್ರಮಾಣ ಪತ್ರದೊಂದಿಗೆ ದೇಶದ ಯಾವುದೇ ಮೆಕಾನಿಕಲ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಹುದು’ ಎಂದರು.

ಮುರುಘಾ ಶರಣರು ಮಾತನಾಡಿ, ‘ಜನಸಂಖ್ಯಾ ಸ್ಫೋಟ ಹಾಗೂ ನಿರುದ್ಯೋಗ ದೇಶದ ಬಹುದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಮತ್ತು ಕಂಪೆನಿಗಳು ಯುವಕರಿಗೆ ಹೆಚ್ಚಿನ ಉದ್ಯೋಗ ನೀಡುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

‘ನಿರುದ್ಯೋಗ ಎನ್ನುವುದು ಬದುಕಿನಲ್ಲಿ ಉದ್ವೇಗ ಸೃಷ್ಟಿಸಿ, ನೆಮ್ಮದಿ ಹಾಳುಮಾಡುತ್ತಿದೆ. ಅಂಥ ನಿರುದ್ಯೋಗ ನಿವಾರಣೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಸೋಮಾರಿಗಳು ದೇಶಕ್ಕೆ ಭಾರ. ಅಂಥ ಸೋಮಾರಿಗಳು ಸ್ವಾವಲಂಬಿ ಜೀವನ ನಡೆಸುವಂತಾದರೆ ಭವ್ಯ ಭಾರತ ನಿರ್ಮಾಣವಾಗುತ್ತದೆ. ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಯುವಶಕ್ತಿಯ ಕೈಗೆ ಉದ್ಯೋಗ ನೀಡುವ ಉದ್ದೇಶದೊಂದಿಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉದ್ಯಮಿ ಕೆ.ಎಸ್. ನವೀನ್. ‘ಮುರುಘಾ ಶರಣರ ಆಸಕ್ತಿ ಮೇರೆಗೆ ಈ ಬಾರಿ ಉದ್ಯೋಗ ಮೇಳ ಆರಂಭಿಸಿದ್ದೇವೆ. ಈ ಮೇಳದ ವಿಶೇಷವೆಂದರೆ, ಇಲ್ಲಿ ಭಾಗವಹಿಸಿರುವ ಕಂಪೆನಿಗಳ ಉದ್ಯೋಗಿಗಳಲ್ಲಿ ಬಹುತೇಕರು ಚಿತ್ರದುರ್ಗ ಜಿಲ್ಲೆಯ ಮೂಲದವರು. ಹಾಗಾಗಿ, ಜಿಲ್ಲೆಯ ಬಗ್ಗೆ ಕಾಳಜಿವಹಿಸಿ, ಇಲ್ಲಿನ ಯುವಕರಿಗೆ ಉದ್ಯೋಗ ನೀಡಲು ಮುಂದಾಗಿದ್ದಾರೆ’ ಎಂದರು.

‘ಈ ಎರಡು ದಿನದ ಉದ್ಯೋಗ ಮೇಳದಲ್ಲಿ ಕನಿಷ್ಠ 2 ಸಾವಿರ ಮಂದಿಗೆ ನೇಮಕಪತ್ರ ಸಿಗುವಂತೆ ಮಾಡಬೇಕು’ ಎಂಬುದು ಶರಣ ಆಶಯ. ಅವರ ಆಶಯದಂತೆ ಸಿನರ್ಜಿ, ಐಬಿಎಂ ಸೇರಿದಂತೆ ಒಟ್ಟು 56 ವಿವಿಧ ಕಂಪೆನಿಗಳು ಉದ್ಯೋಗ ನೀಡುವುದಕ್ಕಾಗಿ ಇಲ್ಲಿಗೆ ಬಂದಿವೆ’ ಎಂದು ವಿವರಿಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಅನಿತಾ ಬಸವರಾಜು ಮಾತನಾಡಿದರು.  ಕವಲೆತ್ತು ಬಸವಕೇಂದ್ರದ ಮಾತೆ ಮುಕ್ತಾಯಕ್ಕ ಮತ್ತು ಜಗದಾಳ ಕಕ್ಕಯ್ಯನವರ ಮಠದ ನಂದಾತಾಯಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶರಣ ಸಂಸ್ಕೃತಿ ಉತ್ಸವದ ಕಾರ್ಯಾಧ್ಯಕ್ಷೆ ದೇವಿಕುಮಾರಿ ವಿಶ್ವನಾಥ್, ಬೆಂಗಳೂರಿನ ಕೆ.ಎಸ್.ಎಫ್.ಸಿ. ಉಪ ಪ್ರಧಾನ ವ್ಯವಸ್ಥಾಪಕ  ಭರತ್‌ರಾಜ್, ಬೆಂಗಳೂರಿನ ಐ.ಬಿ.ಎಂ. ಕಂಪೆನಿಯ ರಾಜೇಶ್ ಹಿರೇಮಠ್, ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ಕಾರ್ಯನಿರ್ವಾಹಕ ನಿರ್ದೇಶಕ  ಪ್ರೊ.ಈ.ಚಿತ್ರಶೇಖರ್, ಸಲಹೆಗಾರ ಡಾ.ಜಿಎನ್. ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಜೆ.ಎಂ.ಐ.ಟಿ  ಸಹ ಪ್ರಾಧ್ಯಾಪಕ ಪ್ರೊ.ಎಸ್.ತಾರೇಶ್ ಕಾರ್ಯಕ್ರಮ ನಿರೂಪಿಸಿದರು. ಮೋಕ್ಷಾರುದ್ರಸ್ವಾಮಿ ಸ್ವಾಗತಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.