ADVERTISEMENT

ಒಂದೂವರೆ ವರ್ಷದಲ್ಲಿ ಭೂಸ್ವಾಧೀನ ಪೂರ್ಣ ಸಾಧ್ಯತೆ

ರೈಲ್ವೆ ಹೋರಾಟ ಸಮಿತಿ ಸಭೆಯಲ್ಲಿ ಕೋದಂಡರಾಮಯ್ಯ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2017, 4:29 IST
Last Updated 17 ಏಪ್ರಿಲ್ 2017, 4:29 IST
ಚಿತ್ರದುರ್ಗ: ‘ತುಮಕೂರು – ಚಿತ್ರದುರ್ಗ – ದಾವಣಗೆರೆ ನೇರ ರೈಲ್ವೆ ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಯು ಮುಂದಿನ ಒಂದೂವರೆ ವರ್ಷದಲ್ಲಿ ಮುಗಿಯುವ ವಿಶ್ವಾಸವಿದೆ’ ಎಂದು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮಯ್ಯ ತಿಳಿಸಿದರು.
 
ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ರೈಲ್ವೆ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿ, ಭೂಸ್ವಾಧೀನ ಪ್ರಕ್ರಿಯೆ ಮುಗಿದ ನಂತರ, ರೈಲ್ವೆ ಕಾಮ
ಗಾರಿ ಆರಂಭಿಸುವ ಕುರಿತು ಈಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
 
‘ತುಮಕೂರು ಜಿಲ್ಲಾಧಿಕಾರಿ ಮೋಹನ್‌ರಾಜ್ ತುಮಕೂರು ನಗರದಿಂದ ಊರು ಕೆರೆವರೆಗೂ ಸುಮಾರು 11 ಕಿ.ಮೀ.ವರೆಗಿನ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿ ಸಂಬಂಧಿಸಿದವರಿಗೆ ಪರಿಹಾರ ನೀಡಿದ್ದಾರೆ ಎಂಬ ಮಾಹಿತಿ ಇದೆ. ಅಲ್ಲದೆ, ಭೂಮಿಯನ್ನು ರೈಲ್ವೆ ಇಲಾಖೆಗೆ ವಹಿಸಿಕೊಟ್ಟಿದ್ದಾರೆ. ಊರು ಕೆರೆಯಿಂದ ಶಿರಾ ಮಾರ್ಗವಾಗಿ ತಿಮ್ಮರಾಜನ ಹಳ್ಳಿವರೆಗೂ ಸುಮಾರು 13 ಕಿ.ಮೀ. ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು, ಮೇ ತಿಂಗಳ ಒಳಗಾಗಿ ಪರಿಹಾರ ವಿತರಿಸಿ ಇಲಾಖೆಗೆ ವಹಿಸುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು. 
 
‘ತುಮಕೂರಿನಲ್ಲಿ ಉಳಿದ 13 ಕಿ.ಮೀ. ಭೂಮಿಯನ್ನು ಕೂಡ ತಮ್ಮ ವಶಕ್ಕೆ ಬಿಟ್ಟುಕೊಟ್ಟರೆ, ಜೂನ್ ತಿಂಗಳಲ್ಲಿ ಹೊಸ ಮಾರ್ಗ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದರು.
 
ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ ಭೂಮಿಯನ್ನು ಇನ್ನೂ ಒಂದೂವರೆ ವರ್ಷದೊಳಗೆ ಸ್ವಾಧೀನಪಡಿಸಿಕೊಂಡು ಇಲಾಖೆಗೆ ಹಸ್ತಾಂತ
ರಿಸಲಾಗುವುದು ಎಂದು ಇಲ್ಲಿನ ಉಪವಿಭಾಗಾಕಾರಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ದಾವಣಗೆರೆ ಜಿಲ್ಲೆಗೆ ಸಂಬಂಧಿಸಿದ ಭೂಮಿಯನ್ನು ಇದೇ ಅವಧಿಯೊಳಗೆ ಭೂಸ್ವಾಧೀನ ಪ್ರಕ್ರಿಯೆ ಮುಗಿಸಿಕೊಡುವುದಾಗಿ ಅಲ್ಲಿನ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.
 
ಕೆಲವರು ತಮ್ಮ ಪ್ರಭಾವ ಬೀರಿ ರೈಲ್ವೆ ಮಾರ್ಗದ ನಕ್ಷೆ ಬದಲಾಯಿಸಿದ್ದಾರೆ. ಆದರೆ, ಈ ಹಿಂದೆ ಇದ್ದ ನಕ್ಷೆಯಂತೆ ಕಾಮಗಾರಿ ನಡೆಸಬೇಕು ಎಂದು ಸಚಿವ ದೇಶಪಾಂಡೆ ಅವರಿಗೆ ಸಹ ಪತ್ರ ಬರೆಯಲಾಗಿದೆ. ಈ ಹಿಂದಿನ ನಕ್ಷೆಯಂತೆ ಜವನಗೊಂಡನಹಳ್ಳಿ, ಮೇಟಿಕುರ್ಕೆ ಮತ್ತು ಲಕ್ಕವ್ವನಹಳ್ಳಿಯಲ್ಲಿಯೇ ರೈಲು ನಿಲ್ದಾಣ ನಿರ್ಮಿಸಬೇಕು.
 
ಆದರೆ, ಈ ಮಾರ್ಗಗಳ ಬದಲಾಗಿ ಆನೆಸಿದ್ರಿ, ತವಂದಿ, ಹುಚ್ಚವ್ವನಹಳ್ಳಿಯಲ್ಲಿ ನಿಲ್ದಾಣ ಸ್ಥಾಪಿಸುವುದಾದರೆ, ಸಾರ್ವಜನಿಕರಿಗೆ ಉಪಯೋಗ ಆಗುವುದಿಲ್ಲ. ಆದ್ದರಿಂದ ಈ ಹಿಂದೆ ನಿಗದಿಪಡಿಸಿರುವ ಹಳೆಯ ಸ್ಥಳಗಳಲ್ಲೇ ನಿಲ್ದಾಣಗಳನ್ನು ಸ್ಥಾಪಿಸಬೇಕು ಎಂದು ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ. ಹೊಸ ನಕ್ಷೆಯಂತೆ ಕಾಮಗಾರಿ ಕೈಗೊಂಡರೆ ಹೋರಾಟ ರೂಪಿಸಲಾಗುತ್ತದೆ’ ಎಂದು ಎಚ್ಚರಿಸಿದರು. 
 
ಭೂಸ್ವಾಧೀನ ಪರಿಹಾರದ ಬಗ್ಗೆ ಕೆಲ ಮಧ್ಯವರ್ತಿಗಳು ಹೆಚ್ಚಿನ ಪರಿಹಾರ ಕೊಡಿಸುತ್ತೇವೆ ಎಂಬುದಾಗಿ ಭೂ ಮಾಲೀಕರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಭೂಮಿ ಕಳೆದುಕೊಳ್ಳುವ ಪ್ರತಿಯೊಬ್ಬರಿಗೂ ಹೊಸ ಮಾರ್ಗಸೂಚಿ ಅನ್ವಯ ಪರಿಹಾರ ಸಿಗಲಿದೆ. ಆದ್ದರಿಂದ ಯಾರೂ ಮಧ್ಯ
ವರ್ತಿಗಳ ಮಾತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.  
 
ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳಾದ ಮುರುಘಾ ರಾಜೇಂದ್ರ ಒಡೆಯರ್, ಎಂ.ಜಯಣ್ಣ, ಶಿವಣ್ಣ ಕುರುಬರಹಳ್ಳಿ, ರಮಾ ನಾಗರಾಜ್, ಮಹಡಿ ಶಿವಮೂರ್ತಿ, ಶಿವು ಯಾದವ್, ಜಿ.ಎಸ್.ಉಜ್ಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.