ADVERTISEMENT

ಒಡೆಯರ್‌ ವಂಶಸ್ಥರಿಂದ ಜಲಾಶಯಕ್ಕೆ ಪೂಜೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:36 IST
Last Updated 24 ಮೇ 2017, 5:36 IST
ಮಾರಿಕಣಿವೆ ಸಮೀಪದ ವಾಣಿ ವಿಲಾಸ ಜಲಾಶಯದ ನೋಟ.
ಮಾರಿಕಣಿವೆ ಸಮೀಪದ ವಾಣಿ ವಿಲಾಸ ಜಲಾಶಯದ ನೋಟ.   

ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ನಿರ್ಮಿಸಿ 108 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಒಮ್ಮೆ ಮಾತ್ರ ಇದು ತುಂಬಿದೆ ಎಂದರೆ ಜಲಾಶಯದ ಸ್ಥಿತಿ ಹೇಗಿರಬಹುದು ಎಂದು  ಊಹಿಸಬಹುದು.

ಚುನ್ನಿಲಾಲ್ ತಾರಾಚಂದ್ ದಲಾಲ್ ಹಾಗೂ ಅಂದಿನ ಮುಖ್ಯ ಎಂಜಿನಿಯರ್ ಆಗಿದ್ದ ಕರ್ನಲ್ ಮೆಕ್ ನೀಲ್ ಕ್ಯಾಂಪ್ ಬೆಲ್ ಜಲಾಶಯದ ವಿನ್ಯಾಸ ರೂಪಿಸಿದ್ದರು. ಕೇವಲ ₹ 45 ಲಕ್ಷದಲ್ಲಿ ಜಲಾಶಯ ನಿರ್ಮಿಸಲಾಗಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ತಮ್ಮ ತಾಯಿ ಕೆಂಪನಂಜಮ್ಮಣ್ಣಿ ಹೆಸರಿನಲ್ಲಿ 1897ರಲ್ಲಿ ನಿರ್ಮಿಸಲು ಹೊರಟ ಈ ಜಲಾಶಯ ಅಂದಿನ ದಿವಾನರಾಗಿದ್ದ ಕೆ. ಶೇಷಾದ್ರಿ ಐಯ್ಯರ್ ಅವರ ಪರಿಶ್ರಮದ ಫಲ. ಬಯಲು ಸೀಮೆ ಜನರ ನೀರಿನ ಬವಣೆ ಅರಿತು ಮಾರಿಕಣಿವೆ ಯೋಜನೆಯ ಬಗ್ಗೆ ಅಭಿಪ್ರಾಯ ನೀಡಲು ಕರ್ನಲ್ ಮೆಕ್ ನೀಲ್ ಕ್ಯಾಂಪ್ ಬೆಲ್ ನೇತೃತ್ವದಲ್ಲಿ ಒಂದು ಸಮಿತಿ ನೇಮಿಸುತ್ತಾರೆ.

ADVERTISEMENT

1898ರ ಆಗಸ್ಟ್ ತಿಂಗಳಲ್ಲಿ ಐಯ್ಯರ್ ಮಾರ್ಗದರ್ಶನದಂತೆ ಕ್ಯಾಂಪ್ ಬೆಲ್ ಹಾಗೂ ಲೋಕೋಪಯೋಗಿ ಇಲಾಖೆಯ ಚುನ್ನಿಲಾಲ್ ತಾರಾಚಂದ್ ದಲಾಲ್ ನೇತೃತ್ವದಲ್ಲಿ ಆರಂಭವಾದ ಕಾಮಗಾರಿ 11 ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ.

1909ರಲ್ಲಿ ಕಾಮಗಾರಿ ಪೂರ್ಣಗೊಂಡಾಗ ರಾಜ್ಯದ ಅತಿ ದೊಡ್ಡ ಅಣೆಕಟ್ಟು ಎಂದು ಗುರುತಿಸಿಕೊಂಡಿತ್ತು. ವಿಚಿತ್ರವೆಂದರೆ 1933ರಲ್ಲಿ ಒಮ್ಮೆ ಮಾತ್ರ ಈ ಜಲಾಶಯ ಭರ್ತಿಯಾಗಿದೆ. 2000ರಲ್ಲಿ 122 ಅಡಿ ನೀರು ಸಂಗ್ರಹಗೊಂಡಿರುವುದೇ ಈಚಿನ ದಾಖಲೆ. ನಂತರ ಜಲಾಶಯ ಖಾಲಿಯಾಗಿದ್ದುದ್ದೇ ಹೆಚ್ಚು.

ಜಲಾಶಯದ ಮೇಲ್ಭಾಗದಲ್ಲಿ 88 ದೊಡ್ಡ ಹಾಗೂ 880 ಸಣ್ಣ ಕೆರೆಗಳಿರುವುದರಿಂದ ಹಾಗೂ ಹೊಲ, ಹಳ್ಳಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಚೆಕ್ ಡ್ಯಾಂ, ನಾಲಾ ಬದು ನಿರ್ಮಾಣದಿಂದ ನೀರಿನ ಹರಿವು ಮತ್ತಷ್ಟು ಕುಸಿದಿದೆ.
 

ಕೈಗೂಡದ ನದಿ ಜೋಡಣೆ
ವೇದಾವತಿ ಮತ್ತು ಯಗಚಿ ನದಿಗಳೆರಡೂ ಬಾಬಾಬುಡನ್ ಗಿರಿಯಲ್ಲಿ ಹುಟ್ಟುತ್ತವೆ. ಭವಿಷ್ಯದಲ್ಲಿ ವಾಣಿ ವಿಲಾಸ ಜಲಾಶಯವನ್ನು ಜೀವಂತವಾಗಿ ಇಡಬೇಕಾದರೆ ಮಳೆಗಾಲದಲ್ಲಿ ಯಗಚಿ ನದಿಯನ್ನು ವೇದಾವತಿಗೆ ಜೋಡಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದರು. ಆದರೆ, ಈ ಭಾಗದ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಯಗಚಿ ನದಿ ಹಾಸನದ ಪಾಲಾಯಿತು ಎಂದು ಹಿರಿಯರು ಬೇಸರ ವ್ಯಕ್ತಪಡಿಸುತ್ತಾರೆ.

2009ರಲ್ಲೂ ನಡೆದಿತ್ತು ಪೂಜೆ
2009ರಲ್ಲಿ ‘ವರುಣ’ನ ಕೃಪೆಗಾಗಿ ಪೂಜೆ ಸಲ್ಲಿಸಲಾಗಿತ್ತು. ನೀರಿಗಾಗಿ ಹತ್ತಾರು ಬಾರಿ ಗಂಗಾ ಪೂಜೆ ಮಾಡಿದ್ದರೂ ವರುಣ ಕೃಪೆ ತೋರಿರಲಿಲ್ಲ. ಜಲಾಶಯ ನಿರ್ಮಾಣಕ್ಕೆ ಕಾರಣರಾಗಿರುವ ಒಡೆಯರ್ ಕುಟುಂಬದವರನ್ನು ಕರೆಸಿ ಪೂಜೆ ಸಲ್ಲಿಸಿದರೆ ನೀರು ಬರಬಹುದು ಎಂದು ತಾಲ್ಲೂಕು ರೈತ ಸಂಘದ ಮುಖಂಡರು ಶಾಸಕ ಡಿ. ಸುಧಾಕರ್ ಅವರಿಗೆ ಸಲಹೆ ನೀಡಿದ್ದರು. ಹೀಗಾಗಿ ಒಡೆಯರ್‌ ಕುಟುಂಬದವರಿಂದ ಪೂಜೆ ನಡೆಸಲಾಗುತ್ತಿದೆ.

ಜಲಾಶಯದ ವಿಸ್ತೀರ್ಣ
1,330 ಅಡಿ ವಾಣಿ ವಿಲಾಸ ಸಾಗರ ಜಲಾಶಯದ ಉದ್ದ

142 ಅಡಿ ಜಲಾಶಯ ಕಟ್ಟೆಯ ಎತ್ತರ.

150 ಅಡಿ ಜಲಾಶಯ ಕಟ್ಟೆಯ ಅಗಲ.

₹45 ಲಕ್ಷ ಜಲಾಶಯ ಕಟ್ಟಲು ಖರ್ಚಾದ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.