ADVERTISEMENT

ಕಲಾವಿದರ ಬದುಕು ದಾಖಲಾದರೆ ಕಲೆಗೆ ಉಳಿವು

‘ಜೀವನ್ಮಾರ್ಗ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಜಾನಪದ ಪ್ರಾಧ್ಯಾಪಕ ಡಾ. ಕರಿಯಪ್ಪ ಮಾಳಿಗೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 5:27 IST
Last Updated 18 ಫೆಬ್ರುವರಿ 2017, 5:27 IST
ಚಿತ್ರದುರ್ಗ: ‘ಜ್ಞಾನ, ಅರಿವು, ಮೌಲ್ಯ, ಸಂಸ್ಕೃತಿ ಒಳಗೊಂಡ ಜನಪದ ಕಲಾವಿದರ ಬದುಕಿನ ಪುಟಗಳನ್ನು ದಾಖಲಿಸಿದಾಗ ಮಾತ್ರ, ಜನಪದ ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ಈ ಮಾತಿಗೆ ಪೂರಕವೆಂಬಂತೆ ಗಾಯಕ ದೂಪಂ ಅಂಜಿನಪ್ಪ ಅವರ ಕೃತಿ ಬಿಡುಗಡೆಯಾಗುತ್ತಿರುವುದು ಅರ್ಥಪೂರ್ಣವಾಗಿದೆ’ ಎಂದು ಜಾನಪದ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.
 
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಲೇಖಕ ಶಶಿಧರ ಉಬ್ಬಳಗುಂಡಿ ರಚಿತ ‘ಜೀವನ್ಮಾರ್ಗ – ಅಲೆಮಾರಿ ಸಮುದಾಯದ ಜನಪದ ಗಾಯಕ ದೂಪಂ ಅಂಜಿನಪ್ಪ ಜೀವನ ಚರಿತ್ರೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಕುರಿತು ಮಾತನಾಡಿದರು. ಈ ಕೃತಿಯನ್ನು ಸೃಷ್ಟಿಸಾಗರ ಪ್ರಕಾಶನ ಪ್ರಕಟಿಸಿದೆ.
 
‘ದೂಪಂ ಅಂಜಿನಪ್ಪ ಅಲೆಮಾರಿ ಸಮುದಾಯಕ್ಕೆ ಸೇರಿದ ಅದ್ಭುತ ಜನಪದ ಗಾಯಕ. ಇದೇ ಸಮುದಾಯಕ್ಕೆ ಸೇರಿದ ದರೋಜಿ ಈರಮ್ಮ ನಾಡೋಜ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಂಜಿನಪ್ಪ ಹಾಡುವ ಕಥನ, ಕಾವ್ಯ, ಜನಪದ ಹಾಡುಗಳು ದಾಖಲಾಗಬೇಕು. ಮೌಖಿಕ ಕಾವ್ಯಗಳು ಶೈಕ್ಷಣಿಕ ಶಿಸ್ತಿಗೆ ಒಳಪಟ್ಟು ಸಮಾಜದ ಮುಖ್ಯವಾಹಿನಿಗೆ ಪರಿಚಯವಾಗುತ್ತಿರುವುದರಿಂದಲೇ ಕಲೆ ಕಾವ್ಯವಿನ್ನೂ ಉಳಿದುಕೊಂಡಿದೆ’ ಎಂದರು. 
 
‘ಸಾಮಾಜಿಕ ಮಾಲಿನ್ಯ ತೊಳೆಯುವ ಶಕ್ತಿ ಜನಪದಕ್ಕಿದೆ. ಸಂಸ್ಕೃತಿಗೆ ತಡೆಗೋಡೆಯಾಗುವ ಶಕ್ತಿ ಜನಪದ ಕಲೆಗಳಿಗಿದೆ. ಆದರೆ, ಜಾನಪದ ಕಲೆಗಳಿಗೆ ತಾರತಮ್ಯವಿದೆ. ಜನಪದ ಕಲಾವಿದರಿಗೆ ಸಿಗಬೇಕಾದ ಮಾಸಾಶನ ಇನ್ನೂ ಸರ್ಕಾರ
ದಿಂದ ಸಿಗದೆ, ಅವರು ಸಂಕಷ್ಟದಲ್ಲಿ ಇದ್ದಾರೆ’ ಎಂದರು.
 
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ‘ಅಲೆಮಾರಿ ಬದುಕಿನಲ್ಲಿ ಅನುಭವ, ಅನುಭಾವ ಹುಟ್ಟುತ್ತದೆ ಎನ್ನುವುದಕ್ಕೆ ಅಲೆಮಾರಿ ಸಮುದಾಯದ ದೂಪಂ ಅಂಜಿನಪ್ಪ ಸಾಕ್ಷಿ’ ಎಂದ ಅವರು, ‘ಅನುಭವ ಮಂಪಟದ ಅಲ್ಲಮಪ್ರಭು ಕೂಡ ಅಲೆಮಾರಿಯೇ’ ಎಂದು ನೆನಪಿಸಿದರು.
 
‘ಸಾಂಸ್ಕೃತಿಕ ಪ್ರಜ್ಞೆ ಯಾವುದೋ ಒಂದು ಜಾತಿಯ ಸ್ವತ್ತಲ್ಲ. 12ನೇ ಶತಮಾನದ ಶರಣರು ಆಸ್ತಿವಂತರಲ್ಲ. ಅಧಿಕಾರದ ಹುಚ್ಚು ಅವರಿಗೆ ಹಿಡಿದಿರಲಿಲ್ಲ. ಸಣ್ಣಪುಟ್ಟ ಬದುಕು ಮಾಡಿಕೊಂಡು ಆದರ್ಶರಾದವರು’ ಎಂದರು.‘ದೂಪಂ ಅಂಜಿನಪ್ಪ ಕೂಡ ಹಾರ್ಮೋನಿಯಂ ಬಾರಿಸಿಕೊಂಡು ತಿರುಗುತ್ತಿದ್ದಾರೆ. ಇಂಥ ಪ್ರತಿಭಾವಂತರನ್ನು ಗುರುತಿಸಿ ಶ್ರೀಮಠ ಸನ್ಮಾನಿಸಿದೆ’ ಎಂದು ನೆನಪಿಸಿಕೊಂಡರು. 
 
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಐ.ಎ.ಎಸ್.ಅಧಿಕಾರಿ ಕೆ.ಅಮರನಾರಾಯಣ ಮಾತನಾಡಿ, ‘ದೂಪಂ ಅಂಜಿನಪ್ಪನವರಂಥ ಜನಪದ ಕಲಾವಿದರನ್ನು ಬೆಳಕಿಗೆ ತರುವ ಕೆಲಸವನ್ನು ಸರ್ಕಾರ ಮಾಡಬೇಕು. ಅಲೆಮಾರಿಗಳನ್ನು ಕರೆದು ಸನ್ಮಾನಿಸಿ ಗೌರವಿಸುವುದ
ಕ್ಕಿಂತ ಮುಖ್ಯವಾಗಿ ಅವರ ಕೃತಿಗಳು ದಾಖಲಾಗಬೇಕು. ಅದಕ್ಕಾಗಿ ಜಾನಪದ ಲೋಕದ ಅಧ್ಯಕ್ಷರಿಗೆ ಪತ್ರ ಬರೆದು ಇಂಥ ಕಲೆಯನ್ನು ದಾಖಲಿಸುವಂತೆ ಮನವಿ ಮಾಡುತ್ತೇನೆ’ ಎಂದು ತಿಳಿಸಿದರು.
 
ಲೇಖಕ ಶಶಿಧರ ಉಬ್ಬಳಗುಂಡಿ ಮಾತನಾಡಿ, ‘ಕಲೆ ಎಲ್ಲರನ್ನು ಪ್ರೀತಿಯಿಂದ ಕರೆಯುತ್ತದೆ. ಬದುಕುವ ಮಾರ್ಗ ತೋರಿಸಿ ಆನಂದ ತಂದು ಕೊಡುತ್ತದೆ. ನೈಜ ಬದುಕನ್ನು ಯಾವ ರೀತಿ ಕಟ್ಟಿಕೊಳ್ಳಬೇಕು ಎಂಬುದಕ್ಕೆ ದೂಪಂ ಅಂಜಿನಪ್ಪ ಅವರು ಮಾದರಿಯಾಗಿದ್ದಾರೆ’ ಎಂದರು. 
ಬುಡಕಟ್ಟು ಜನಾಂಗದ ಅಲೆಮಾರಿ ಅಂಜಿನಪ್ಪನನ್ನು ಸರ್ಕಾರ ಗುರುತಿಸದಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಲಲಿತಾಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು. 
 
ಸೃಷ್ಟಿಸಾಗರ ಪ್ರಕಾಶನದ ಮೇಘಾಗಂಗಾಧರನಾಯ್ಕ ಸ್ವಾಗತಿಸಿದರು. ಸಾಹಿತಿ ಷರಿಫಾಬಿ ನಿರೂಪಿಸಿದರು. ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆರ್.ಮಲ್ಲಿಕಾರ್ಜುನಯ್ಯ ಸಮಾರಂಭದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.