ADVERTISEMENT

ಕಷ್ಟಗಳ ನಡುವೆಯೂ ಏಗುವ ಪತ್ರಿಕಾ ವಿತರಕರು

ಗಾಣಧಾಳು ಶ್ರೀಕಂಠ
Published 4 ಸೆಪ್ಟೆಂಬರ್ 2017, 9:28 IST
Last Updated 4 ಸೆಪ್ಟೆಂಬರ್ 2017, 9:28 IST

ಚಿತ್ರದುರ್ಗ: ಪ್ರತಿದಿನ ಸೂರ್ಯನ ಕಿರಣ ಬುವಿಗೆ ಸೋಕುವುದು ತಡವಾಗಬಹುದು, ಆದರೆ, ಇವರ ಪೇಪರ್ ಬಂಡಲ್ ಹೊತ್ತ ವಾಹನದ (ಸೈಕಲ್ಲೂ ಆಗಬಹುದು) ಚಕ್ರ ಉರುಳುವುದರಲ್ಲಿ ವಿಳಂಬವಾದರೆ ಓದುಗರಿಂದ ಪ್ರಶ್ನೆಗಳ ಸುರಿಮಳೆ. ಮಳೆಯಿರಲಿ, ಚಳಿಯಿರಲಿ ನಿಷ್ಠೆಯೊಂದಿಗೆ ದುಡಿಯುತ್ತಾ, ಪತ್ರಿಕಾ ರಂಗದ ತುದಿಯಲ್ಲಿ ನಿಂತು ಓದುಗ ಪ್ರಭುಗೆ ಸಕಾಲಕ್ಕೆ ಪತ್ರಿಕೆ ತಲುಪಿಸುವ ಏಕೈಕ ಕಾಯಕ ಜೀವಿಗಳೇ ‘ಪತ್ರಿಕಾ ವಿತರಕರು’.

ಮಧ್ಯರಾತ್ರಿ ಮುದ್ರಣಾಲಯದಿಂದ ವಾಹನವೇರಿ ಹೊರಟ ಪತ್ರಿಕೆಗಳು ಹಳ್ಳಿ, ಪಟ್ಟಣ, ನಗರಗಳನ್ನು ತಲುಪುತ್ತವೆ. ಮುಂಜಾನೆ 3 ಗಂಟೆಯ ವೇಳೆಗೆ ಬಸ್ ನಿಲ್ದಾಣದಲ್ಲೋ, ಮುಚ್ಚಿರುವ ಅಂಗಡಿ ಮಳಿಗೆಗಳ ಎದುರಿನಲ್ಲೋ, ಕೆಂಪು ಬಣ್ಣದ ದೀಪದ ಕೆಳಗೆ ಬಂಡಲ್‌ಗಳನ್ನು ಬಿಚ್ಚಿಕೊಂಡು, ಜೋಡಿಸಿ­­ಕೊಂಡಿ, ಸೈಕಲ್‌  ಕ್ಯಾರಿಯರ್‌ಗೆ ಸಿಕ್ಕಿಸಿಕೊಂಡು ಮನೆ ಮನೆಗೆ ತಲುಪಿಸುತ್ತಾರೆ.

ಈ ಉದ್ಯೋಗದಲ್ಲಿ ವಿದ್ಯಾರ್ಥಿಗಳಿದ್ದಾರೆ, ಖಾಸಗಿ ಉದ್ಯೋಗಿಗಳಿದ್ದಾರೆ. ಕೆಲವರಿಗೆ ಇದು ಶ್ರಮದ ದುಡಿಮೆ, ಇನ್ನು ಕೆಲವರಿಗೆ ಅನಿವಾರ್ಯ. ನಡೆಯುತ್ತಾ, ಸೈಕಲ್ ತುಳಿಯುತ್ತಾ... ಚಿತ್ರದುರ್ಗದಲ್ಲಿ 40ಕ್ಕೂ ಹೆಚ್ಚು ಏಜೆಂಟರಿದ್ದಾರೆ. 150ಕ್ಕೂ ಹೆಚ್ಚು ಪತ್ರಿಕೆಗಳನ್ನು ವಿತರಿಸುವವರಿದ್ದಾರೆ. ಹೈಸ್ಕೂಲ್ ವಿದ್ಯಾರ್ಥಿಗಳಿಂದ ಹಿರಿಯ ಜೀವಿಗಳೂ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ನಡೆಯುತ್ತಾ ಪೇಪರ್ ಹಂಚುವವರಿದ್ದರೆ, ಸೈಕಲ್, ದ್ವಿಚಕ್ರ ವಾಹನಗಳಲ್ಲೂ ಪತ್ರಿಕೆ ವಿತರಿಸುವವರಿದ್ದಾರೆ. ಏಜೆಂಟರೂ ಪೇಪರ್ ಹಂಚುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ನಗರ ವ್ಯಾಪ್ತಿಯಲ್ಲಿರುವ ಸಿದ್ದಪ್ಪ, ಈರಪ್ಪ ಮೂರು ದಶಕಗಳ ಕಾಲ ನಡೆಯುತ್ತಲೇ ಪತ್ರಿಕೆ ಹಂಚುತ್ತಿದ್ದಾರೆ. ನಾಲ್ಕು ದಶಕಗಳ ಕಾಲ ಪತ್ರಿಕೋದ್ಯಮದೊಂದಿಗಿರುವ ವಿಜಯಕುಮಾರ್, 4–5 ವರ್ಷಗಳಿಂದ ನಿತ್ಯ ನಡೆಯುತ್ತಲೇ ಪತ್ರಿಕೆ ವಿತರಿಸುತ್ತಾರೆ. ‘ಬೆಳಗಿನ ನಡಿಗೆ ವ್ಯಾಯಾಮಕ್ಕೆ ಸಮ’ ಎನ್ನುತ್ತಾರೆ ಅವರು. ಹೀಗೆ ಪತ್ರಿಕೆ ವಿತರಿಸುವವರಿಗೆ ವರ್ಷದಲ್ಲಿ ನಾಲ್ಕು ದಿನ ಮಾತ್ರ ‘ನಡಿಗೆಗೆ’ ರಜೆ. ಉಳಿದಂತೆ ಕಾಯಕ ನಿರಂತರ.

ಕಿರಿಕಿರಿಯ ನಡುವೆ ಬಿಡದ ವೃತ್ತಿ ಪತ್ರಿಕೆ ಹಂಚುವವರಿಗೆ ಹಲವು ಕಿರಿಕಿರಿಗಳಿವೆ. ‘ಸರಿಯಾದ ಸಮಯಕ್ಕೆ ಪತ್ರಿಕೆ ಹಂಚುವುದಿಲ್ಲ. ಪುರವಣಿ ಮಿಸ್ ಮಾಡ್ತಾರೆ. ಒಂದೊಂದು ದಿನ ಪೇಪರ್ ಎಗರಿಸುತ್ತಾರೆ...’ ಹೀಗೆ ದೂರುಗಳು ಬರುತ್ತವೆ.

‘ಯಾರೋ ಒಬ್ಬಿಬ್ಬರು ಮಾಡುವ ಸಣ್ಣ ತಪ್ಪುಗಳಿಗೆ ಎಲ್ಲ ವಿತರಕರನ್ನು ಓದುಗರು ದೂಷಿಸುತ್ತಾರೆ. ಇವುಗಳಲ್ಲಿ ಅನೇಕ ವಿಚಾರಗಳಿಗೆ ನಾವು ಹೊಣೆಯಾಗಿರುವುದಿಲ್ಲ. ಆದರೂ, ಇಂಥ ದೂರುಗಳನ್ನು ಕೇಳಬೇಕು’ ಎಂದು  ವೃತ್ತಿಯ ಪತ್ರಿಕಾ ಪ್ರತಿನಿಧಿ ಎಸ್. ತಿಪ್ಪೇಸ್ವಾಮಿ, ದಶಕದಿಂದ ಪತ್ರಿಕೆ ವಿತರಿಸುತ್ತಿರುವ ಆರ್. ಪ್ರಶಾಂತ್, ಬಿ. ಶ್ರೀಧರ ವೃತ್ತಿಯ ಏರಿಳಿತದ ಅನುಭವಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಳ್ಳುತ್ತಾರೆ.

‘ನಾವು ಒತ್ತಡದಲ್ಲಿ ಪತ್ರಿಕೆ ವಿತರಿಸುತ್ತಿರುತ್ತೇವೆ. ಈ ವೇಳೆ ಸ್ವಲ್ಪ ವ್ಯತ್ಯಾಸವಾಗಬಹುದು. ಅಷ್ಟಕ್ಕೇ ಓದುಗರು ಬೇಸರಿಸುತ್ತಾರೆ. ಎಲ್ಲ ದೂರುಗಳಿಗೂ ನಾವು ಕಿವಿಗೊಡುವುದಿಲ್ಲ. ನಮ್ಮ ಕೆಲಸವನ್ನಷ್ಟೆ ಮಾಡುತ್ತೇವೆ’ ಎಂದು ವೃತ್ತಿ ಪ್ರೀತಿ ವಕ್ತಪಡಿಸುತ್ತಾರೆ.

‘ಬೆಳಿಗ್ಗೆ ಪೇಪರ್ ಹಾಕುವಾಗ ಪೊಲೀಸಿನವರ ಕಾಟ. ಗುರುತಿನ ಚೀಟಿ ಕೇಳುತ್ತಾರೆ. ಆಗ ತುಂಬಾ ಕಿರಿಕಿರಿ ಎನ್ನಿಸುತ್ತದೆ. ಮಳೆ ಬಂದಾಗ, ಪತ್ರಿಕೆ ಹಂಚುವುದು ಸಾಹಸದ ಕೆಲಸ. ಇವೆಲ್ಲವನ್ನೂ ಮೀರಿ ಕೆಲಸ ಮಾಡುತ್ತೇವೆ. ಇಷ್ಟಾದರೂ ಓದುಗರು ಮೆಚ್ಚುವುದಿಲ್ಲ. ಹಣ ಕೊಟ್ಟರೂ ಪತ್ರಿಕೆ ಮನೆಬಾಗಿಲಿಗೆ ತಲುಪಿಸುವವರು ಮೊದಲಿನಂತೆ ಈಗ ಸಿಗುತ್ತಿಲ್ಲ. ಇದನ್ನು ಎಲ್ಲ ಓುಗರು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು’ ಎನ್ನುತ್ತಾರೆ ವಿತರಕರು.

‌ಅರ್ನಿಂಗ್, ಲರ್ನಿಂಗ್ ಮತ್ತು ವೃತ್ತಿಪತ್ರಿಕೆ ಹಂಚುತ್ತಿದ್ದ ಕೆಲವು ಹುಡುಗರು ಎಂಎಸ್‌ಸಿ ಓದಿ, ಉದ್ಯೋಗ ಮಾಡುತ್ತಿದ್ದಾರೆ. ಹಾಲಿ ವಿತರಕರಲ್ಲಿ ಕೆಲವರು ಇದೇ ವೃತ್ತಿಯಿಂದ ಜೀವಿಸುತ್ತಿದ್ದಾರೆ. ‘ನಾನು ದಾವಣಗೆರೆ ತೋಳಹುಣಸೆಯಲ್ಲಿ ಭೌತವಿಜ್ಞಾನದಲ್ಲಿ ಎಂ.ಎಸ್ಸಿ ಓದುತ್ತಿದ್ದೇನೆ. ಬೆಳಿಗ್ಗೆ ಪೇಪರ್ ಹಾಕಿ, ಮಧ್ಯಾಹ್ನ ಕಾಲೇಜಿಗೆ ಹೋಗುತ್ತೇನೆ. ಇದು ಹವ್ಯಾಸವೂ ಅಲ್ಲ, ಅನಿವಾರ್ಯವೂ ಅಲ್ಲ. ಹಾಗಾಗಿ ನನಗೆ ಬೆಳಿಗ್ಗೆ ಅರ್ನಿಂಗ್, ಮಧ್ಯಾಹ್ನ ಲರ್ನಿಂಗ್’ ಎನ್ನುತ್ತಾರೆ ದೊಡ್ಡಪೇಟೆ ಭಾಗದಲ್ಲಿ ಪೇಪರ್ ವಿತರಿಸುವ ಜೆ. ತಿಪ್ಪೇಸ್ವಾಮಿ. ಇಷ್ಟೆಲ್ಲ ಪರಿಶ್ರಮದೊಂದಿಗೆ ವೃತ್ತಿ ಮಾಡುತ್ತಿದ್ದರೂ, ಅನೇಕ ಬಾರಿ ಓದುಗರು ಸ್ಪಂದಿಸುವುದಿಲ್ಲ. ಬಿಲ್ ಕೇಳಲು ಹೋದರೆ, ‘ಸಂಬಳ ಆಗಿಲ್ಲ, ನಾಳೆ ಬಾ’ ಎಂದು ಓಡಾಡಿಸುತ್ತಾರೆ.  ದೊಡ್ಡ ಸ್ಥಾನದಲ್ಲಿರುವವರು 3–4 ವರ್ಷ ಬಿಲ್ ಪಾವತಿಸಿಲ್ಲ. ಅಂಥ ವೇಳೆ ಏಜೆಂಟರು, ಪತ್ರಿಕೆ ವಿತರಕರಿಗೂ ಕಷ್ಟ’ ಎಂದು ವಿತರಕರು ಎದುರಾಗುವ ಕಷ್ಟಗಳನ್ನು ಹಂಚಿಕೊಳ್ಳುತ್ತಾರೆ.

ಈ ವೃತ್ತಿಯಲ್ಲಿ ಆದಾಯದ ಜತೆಗೆ ನಿಮಗೆ ಇನ್ನೇನು ಬೇಕು ಎಂದು ಪ್ರಶ್ನಿಸಿದರೆ, ‘ಓದುಗರಿಂದ ಸಮಾಧಾನದ ಮಾತು, ತಪ್ಪಾದಾಗ ಕ್ಷಮಿಸುವ ಮನಸ್ಸು ಇಷ್ಟಿದ್ದರೆ ಸಾಕು’ ಎಂದು ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.