ADVERTISEMENT

ಕಾಂಗ್ರೆಸ್‌ಗೆ ಗೊಲ್ಲರಹಟ್ಟಿಗೆ ಹೋಗುವ ನೈತಿಕತೆ ಇಲ್ಲ

ಹೊಸದುರ್ಗ ತಾಲ್ಲೂಕು ಯಾದವ ಯುವಸೇನೆ ಅಧ್ಯಕ್ಷ ಹೇರೂರು ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 6:39 IST
Last Updated 18 ಏಪ್ರಿಲ್ 2018, 6:39 IST

ಹೊಸದುರ್ಗ: ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರದಲ್ಲಿಯೂ ಯಾದವರಿಗೆ ಟಿಕೆಟ್‌ ಕೊಡದಿರುವ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಗೊಲ್ಲರಹಟ್ಟಿಗೆ ಹೋಗಿ ವೋಟ್‌ ಕೇಳುವ ನೈತಿಕತೆ ಇಲ್ಲ ಎಂದು ಯಾದವ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಹೇರೂರು ಮಂಜುನಾಥ್‌ ಕಿಡಿಕಾರಿದರು.

ಪಟ್ಟಣದಲ್ಲಿ ಬುಧವಾರ ನಡೆದ ತಾಲ್ಲೂಕು ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜಕೀಯ ಸಂಘಟನೆ ಕುರಿತ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರಕ್ಕೆ ಯಾದವ ಸಮಾಜದ ಸಾಸಲು ಸತೀಶ್‌ಗೆ ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಿರುವುದು ತೀವ್ರ ಬೇಸರವನ್ನುಂಟು ಮಾಡಿದೆ. ಚಿತ್ರದುರ್ಗ, ಶಿರಾ ಕ್ಷೇತ್ರಗಳಲ್ಲಿ ಯಾದವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗುತ್ತದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಜಿಲ್ಲೆಯಲ್ಲಿ 3.50 ಲಕ್ಷ, ತುಮಕೂರಿನಲ್ಲಿ 3 ಲಕ್ಷ ಸೇರಿ ರಾಜ್ಯದಲ್ಲಿ ಯಾದವ ಜನಾಂಗದ 30 ಲಕ್ಷಕ್ಕೂ ಅಧಿಕ ಜನರಿದ್ದಾರೆ. ವರ್ಷಗಳಿಂದ ನಮ್ಮನ್ನು ವೋಟ್‌ಗಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್‌ ಈ ಬಾರಿ ಒಂದು ಕ್ಷೇತ್ರದಲ್ಲಿಯೂ ಟಿಕೆಟ್‌ ಕೊಡದಿರುವುದು ವಿಷಾದನೀಯ. ಸಿದ್ದರಾಮಯ್ಯ ಎಚ್ಚೆತ್ತುಕೊಂಡು ಟಿಕೆಟ್‌ ನೀಡದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಯಾದವ ಸಮಾಜದ ಮುಖಂಡ ಅರಳಿಹಳ್ಳಿ ಮೋಹನ್‌ಕುಮಾರ್‌ ಮಾತನಾಡಿ, ‘ಅಹಿಂದ ಎಂದು ಹೇಳಿಕೊಂಡು ಹಿಂದುಳಿದ ವರ್ಗದವರ ಮತ ಸೆಳೆಯುತ್ತಿರುವ ಮುಖ್ಯಮಂತ್ರಿ ಯಾದವರನ್ನು ರಾಜಕೀಯವಾಗಿ ತುಳಿಯುವ ಹುನ್ನಾರ ನಡೆಸಿದ್ದಾರೆ ಎಂಬ ಅನುಮಾನ ಕಾಡುತ್ತಿದೆ’ ಎಂದು ದೂರಿದರು.

ಯಾದವ ಸಮಾಜದ ಯುವ ಮುಖಂಡರಾದ ಕೆ.ಟಿ.ಚಿತ್ತಪ್ಪ, ಚಂದ್ರಪ್ಪ, ಕೃಷ್ಣಮೂರ್ತಿ, ಚಿಕ್ಕಣ್ಣ, ಬಾಲಕೃಷ್ಣ, ನಾಗು, ಶಿವಣ್ಣ, ಪ್ರದೀಪ್‌, ತಿಮ್ಮರಾಜು, ಸಣ್ಣವೀರಪ್ಪ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.