ADVERTISEMENT

ಕೃಷ್ಣಶಾಸ್ತ್ರಿಗಳ ಚಿಂತನೆಗಳನ್ನು ಅನುಸರಿಸಿ: ಸುಧಾಕರ್

ಹಿರಿಯೂರು: ಬೆಳಗೆರೆ ಕೃಷ್ಣಶಾಸ್ತ್ರಿ ವಿರಚಿತ ‘ಹಳ್ಳಿಚಿತ್ರ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 5:17 IST
Last Updated 9 ಜನವರಿ 2017, 5:17 IST

ಹಿರಿಯೂರು: ‘ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬೆಳಗೆರೆ ಕೃಷ್ಣಶಾಸ್ತ್ರಿಗಳ ಚಿಂತನೆಗಳನ್ನು ಇಂದಿನ ಯುವ ಪೀಳಿಗೆ ಹಾಗೂ ಶಿಕ್ಷಕರು ಅಳವಡಿಸಿಕೊಳ್ಳಬೇಕು’ ಎಂದು ಶಾಸಕ ಡಿ. ಸುಧಾಕರ್ ಕರೆ ನೀಡಿದರು.

ನಗರದ ನೆಹರೂ ಮೈದಾನದಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕ, ಜಮುರಾ ಕಲಾಲೋಕ ಹಾಗೂ ಕಳವಿಭಾಗಿ  ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೆಳಗೆರೆ ಕೃಷ್ಣಶಾಸ್ತ್ರಿ ವಿರಚಿತ ‘ಹಳ್ಳಿಚಿತ್ರ’ ನಾಟಕ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಳಗೆರೆ ಕೃಷ್ಣಶಾಸ್ತ್ರಿಗಳು ಉತ್ತಮ ಶಿಕ್ಷಕರಾಗಿದ್ದರು. ಜತೆಗೆ ಉತ್ತಮ ವಾಗ್ಮಿ, ಸಾಮಾಜಿಕ ಚಿಂತಕರಾಗಿದ್ದರು. ಹಳ್ಳಿ ಬದುಕಿನ  ಸೊಗಡನ್ನು ತಮ್ಮ ‘ಹಳ್ಳಿ ಚಿತ್ರ’ ನಾಟಕದಲ್ಲಿ ಪರಿಚಯಿಸಿದ್ದಾರೆ. ನಾಟಕಗಳು ಮಾನಸಿಕ ನೆಮ್ಮದಿ, ಭಾವೈಕ್ಯ, ಸಹೋದರತೆ ತರುವುದಲ್ಲದೆ, ದ್ವೇಷ, ಅಸೂಯೆ, ಹೊಟ್ಟೆಕಿಚ್ಚನ್ನು ಕಡಿಮೆ ಮಾಡುತ್ತವೆ’  ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ‘ನಾಟಕಗಳು ಕೇವಲ ಮನರಂಜನೆಯಷ್ಟೆ ನೀಡುವುದಿಲ್ಲ.  ಅವು ಜ್ಞಾನದ ಪ್ರಸರಣಗಳು. ಜಾಗತೀಕರಣದ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮನರಂಜನೆಗಾಗಿ ಸೀಮಿತ ವಾಗಿರುವುದು ದುರದೃಷ್ಟಕರ. ಪ್ರತಿ  ಕಲೆಯ ಹಿಂದೆ ಸಮಾಜಕ್ಕೆ ಅಗತ್ಯವಿರುವ ನೈತಿಕ ಹಾಗೂ ಮಾನವೀಯ ಮೌಲ್ಯಗಳು ಇರುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ನಾಟಕ ಗತಿಸಿದ್ದನ್ನಷ್ಟೇ ಹೇಳು ವುದಿಲ್ಲ. ಅದು ವರ್ತಮಾನಕ್ಕೆ ಮುಖಾಮುಖಿಯಾಗಿರುತ್ತದೆ. ಸಮ ಕಾಲೀನವಾದ ಅನೇಕ ಸಮಸ್ಯೆಗಳಿಗೆ, ತಲ್ಲಣಗಳಿಗೆ ರಂಗಪ್ರಯೋಗದಲ್ಲಿ ಉತ್ತರವಿದೆ. ಇದಕ್ಕೆ ಸಾಕ್ಷಿ ಕೃಷ್ಣಶಾಸ್ತ್ರಿಗಳ ಹಳ್ಳಿಚಿತ್ರ ನಾಟಕ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಗರಸಭಾಧ್ಯಕ್ಷ ಟಿ. ಚಂದ್ರಶೇಖರ್, ಜಾನಪದ ಪರಿಷತ್ತಿನ ತಾಲ್ಲೂಕು ಘಟಕ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ, ರೆಡ್ ಕ್ರಾಸ್ ಸಂಸ್ಥೆ ಉಪಾಧ್ಯಕ್ಷ  ಎಚ್.ಎಸ್.ಸುಂದರರಾಜ್, ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ನಿವೃತ್ತ ಮುಖ್ಯ ಶಿಕ್ಷಕಿ ಕೆ.ಅನುಸೂಯದೇವಿ, ಮಾಜಿ ಸೈನಿಕ ಎಚ್.ಜಿ.ರೇಣುಕಾಪ್ರಸಾದ್, ಜನಪದ ವೈದ್ಯ ವಿ.ಕೆಂಚಯ್ಯ, ಕವಿಯತ್ರಿ ಲಲಿತಾ ಕೃಷ್ಣಮೂರ್ತಿ, ರಂಗಭೂಮಿ ಕಲಾವಿದ ಜಿ.ಗಿರಿಸ್ವಾಮಿ ಅವರನ್ನು  ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಂದ್ರಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಆರ್.ನಾಗೇಂದ್ರನಾಯ್ಕ, ಕಂದಿಕೆರೆ ಸುರೇಶ್‌ಬಾಬು, ಖಾದಿರಮೇಶ್, ನಗರಸಭಾ ಸದಸ್ಯರಾದ ರವಿಚಂದ್ರನಾಯ್ಕ ಮಾತನಾಡಿದರು.  ಜಿ.ಪ್ರೇಮಕುಮಾರ್, ಪುರುಷೋತ್ತಮ್, ಮಹಮ್ಮದ್ ಫಕೃದ್ದೀನ್, ಬಿ.ಕೆ.ನಾಗಣ್ಣ, ಹರ್ತಿಕೋಟೆ ವೀರೇಂದ್ರಸಿಂಹ, ಡಾ. ಧರಣೀಂದ್ರಯ್ಯ, ಎಂ.ಯು.ಶಿವರಾಂ, ಚಮನ್‌ಷರೀಫ್, ಎಂ.ಎಲ್.ಗಿರಿಧರ, ಜಿ.ನಾಗರಾಜು, ಮಹಾಸ್ವಾಮಿ. ಕಾಂತರಾಜಹುಲಿ, ಜಿ.ಡಿ.ತಿಮ್ಮಯ್ಯ, ಎಂ.ರಮೇಶ್ ನಾಯ್ಕ, ಜಿ.ಹನುಮಂತರೆಡ್ಡಿ, ಗಡಾರಿಕೃಷ್ಣಪ್ಪ, ಪಿ.ತಿಪ್ಪೇಸ್ವಾಮಿ, ಮಂಗಳಗೌರಮ್ಮ, ಉಮಾದೇವಿ, ಭಾನುಮತಿ, ಗೀತಾ, ಎಂ.ಬಿ.ಲಿಂಗಪ್ಪ, ಎಚ್.ಶಿವಮೂರ್ತಿ, ನಿಂಜಲಿಂಗಪ್ಪ, ಕಿರಣ್ ಮಿರಜ್ಕರ್, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.