ADVERTISEMENT

ಕೆಡಿಪಿ ಸಭೆಗೆ ಪೊಲೀಸರ ಸರ್ಪಗಾವಲು: ಆಕ್ರೋಶ

ರಾಜ್ಯದ ಯಾವ ಜಿಲ್ಲಾ ಪಂಚಾಯ್ತಿಯಲ್ಲೂ ಈ ದುರವಸ್ಥೆ ಇಲ್ಲ: ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಮೂರ್ತಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 9:11 IST
Last Updated 16 ನವೆಂಬರ್ 2017, 9:11 IST

ಚಿತ್ರದುರ್ಗ: ಬಾಗಿಲ ಮುಂಭಾಗದಲ್ಲಿ ಹತ್ತಾರು ಮಂದಿ ಪೊಲೀಸರ ಪಡೆ. ಅಲ್ಲಿಂದ ಸ್ವಲ್ಪ ದೂರದಲ್ಲೇ ಮೂರು ಪೊಲೀಸ್ ವ್ಯಾನ್, ಎರಡು ಜೀಪು, ಐದಾರು ಬ್ಯಾರಿಕೇಡ್‌ಗಳು. ಒಳಗೆ ಪ್ರವೇಶಿಸುವುದಕ್ಕೂ ಮುನ್ನ ‘ನೀವ್ಯಾರು’ ಎಂದು ಪೊಲೀಸರಿಂದ ಪ್ರಶ್ನೆ...

ಜಿಲ್ಲಾ ಪಂಚಾಯ್ತಿಯ ಮಾಸಿಕ ಕೆಡಿಪಿ ಸಭೆಗಾಗಿ ಪಂಚಾಯ್ತಿ ಆವರಣದ ಮುಂಭಾಗದಲ್ಲಿ ಬುಧವಾರ ಭದ್ರತೆ ಒದಗಿಸಲು ಸರ್ಪಗಾವಲಿನಂತೆ ನಿಂತಿದ್ದ ನೂರಾರು ಮಂದಿ ಪೊಲೀಸರು ಕಂಡು ಬಂದಿದ್ದು ಹೀಗೆ..

‘ಇಲ್ಲೇನು ಕಳ್ಳರಿದ್ದಾರೆಯೇ ಸುಳ್ಳರಿದ್ದಾರೆಯೇ ಅಥವಾ ಸಮಾಜಘಾತುಕ ಶಕ್ತಿಗಳಿದ್ದಾರೆಯೇ’ ಎಂದು ಪ್ರಶ್ನಿಸುತ್ತ ಮಾತು ಪ್ರಾರಂಭಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಪಿ.ಪ್ರಕಾಶ್‌ಮೂರ್ತಿ, ‘ಯಾವ ಕಾರಣಕ್ಕಾಗಿ ಇಷ್ಟೊಂದು ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಿದ್ದೀರಿ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಪಿ.ಎನ್.ರವೀಂದ್ರ ಅವರನ್ನು ಪ್ರಶ್ನಿಸಿದರು.

ADVERTISEMENT

‘ರಾಜ್ಯದ ಯಾವುದೇ ಜಿಲ್ಲೆಗಳಲ್ಲೂ ಪೊಲೀಸರನ್ನು ಕರೆಸಿ ಸಭೆ ನಡೆಸುವಂಥ ದುರವಸ್ಥೆಯಿಲ್ಲ. ನಮ್ಮಲ್ಲೇಕೆ ಇಂತಹ ವಾತಾವರಣ? ನಾನೂ ಒಳಗೆ ಬರಲು ಅರ್ಧ ಗಂಟೆ ಚರ್ಚಿಸಿ ಬರುವಂತಾಗಿದೆ. ನನಗೇ ಈ ರೀತಿಯಾದರೆ ಮುಂದೇನು ಪ‍ರಿಸ್ಥಿತಿ ಆಗಬಹುದು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರವೀಂದ್ರ ಮಾತನಾಡಿ, ‘ಕಳೆದ ಎರಡು ಸಭೆಗಳಲ್ಲಿ ಕೆಲವರು ಸಭೆ ನಡೆಯದಂತೆ ಗಲಾಟೆ ಮಾಡಿದ್ದರು. ಅದು ಪುನರಾವರ್ತನೆ ಆಗಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಾರದು ಎಂಬ ಉದ್ದೇಶದಿಂದ ಪೊಲೀಸರ ಸಹಕಾರ ಪಡೆಯಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಸಮಾಧಾನಗೊಳ್ಳದ ಪ್ರಕಾಶ್‌ಮೂರ್ತಿ, ‘ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ ಇಲ್ಲದಿದ್ದರೂ ದೇಶ ಮುನ್ನಡೆಯುತ್ತದೆ. ಆದರೆ, ಪೊಲೀಸರು ಅರ್ಧ ಗಂಟೆ ಇಲ್ಲವೆಂದರೂ ಏನೆಲ್ಲಾ ಘಟನೆಗಳು ಆಗುತ್ತದೆ ಎಂಬ ಪರಿಜ್ಞಾನ ನನಗಿದೆ. ಪ್ರತಿಯೊಬ್ಬರಿಗೂ ಪೊಲೀಸರ ನೆರವು ಅಗತ್ಯ. ಆದರೆ, ಇಲ್ಲಿಯವರೆಗೂ ಯಾವುದೇ ತೊಂದರೆ ಆಗದಂತೆ ನಡೆಸಿಕೊಂಡು ಬರಲಾಗಿರುವ ಕೆಡಿಪಿ ಸಭೆಗೆ ಪೊಲೀಸರ ಅವಶ್ಯಕತೆ ಇದೆಯೇ’ ಮರು ಪ್ರಶ್ನಿಸಿದರು.

‘ಕೂಡಲೇ ಎಲ್ಲ ಪೊಲೀಸರನ್ನು ಇಲ್ಲಿಂದ ಕಳಿಸಬೇಕು. ಇಲ್ಲದಿದ್ದರೆ ನಾನುಸಭೆಯಲ್ಲಿ ಒಂದು ನಿಮಿಷವೂ ಇರುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜತೆಗೆ ಸಿಇಒ ರವೀಂದ್ರ ದೂರವಾಣಿ ಮೂಲಕ ಮಾತನಾಡಿದರು. ಪರಿಸ್ಥಿತಿ ಅವಲೋಕಿಸಿ ಪೊಲೀಸರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಎಸ್‌ಪಿ ಹೇಳಿದ್ದಾಗಿ ಅವರು ತಿಳಿಸಿದರು.

‘ಸ್ಥಾಯಿ ಸಮಿತಿ ಅಧ್ಯಕ್ಷರ ಮಾತಿಗೆ ಇಲ್ಲಿ ಬೆಲೆ ಇಲ್ಲ ಎಂದರೆ ನಾನೇಕೆ ಇರಬೇಕು?’ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್‌ಮೂರ್ತಿ ಸಭೆಯಿಂದ ನಿರ್ಗಮಿಸಿದರು. ನಂತರ ಸಭೆ ಪ್ರಾರಂಭವಾಯಿತು.

***

ಪೊಲೀಸರ ಅವಶ್ಯಕತೆ ಇರದಿದ್ದರೂ ಅವರನ್ನು ಕರೆಸಿ ಸಭೆ ನಡೆಸುವುದು ಸೂಕ್ತವಲ್ಲ.
ಬಿ.ಪಿ.ಪ್ರಕಾಶ್‌ಮೂರ್ತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.