ADVERTISEMENT

ಕೊಡ ನೀರಿಗೆ ಕಿಲೋಮೀಟರ್ ಅಲೆದಾಟ

ಕೆಲವೆಡೆ ವಾರಕ್ಕೊಮ್ಮೆ, ಹಲವೆಡೆ ಹದಿನೈದು ದಿನಕ್ಕೊಮ್ಮೆ ನೀರು ಪೂರೈಕೆ

ಕೆ.ಎಸ್.ಪ್ರಣವಕುಮಾರ್
Published 21 ಏಪ್ರಿಲ್ 2018, 7:07 IST
Last Updated 21 ಏಪ್ರಿಲ್ 2018, 7:07 IST
ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ಮಾರ್ಗದಲ್ಲಿ ಯುವತಿಯೊಬ್ಬರು ತಳ್ಳುವ ಗಾಡಿಯಲ್ಲಿ ಕೊಡಗಳೊಂದಿಗೆ ನೀರು ತುಂಬಿಸಿ ಕೊಂಡು ಹೋಗುತ್ತಿರುವುದು
ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ಮಾರ್ಗದಲ್ಲಿ ಯುವತಿಯೊಬ್ಬರು ತಳ್ಳುವ ಗಾಡಿಯಲ್ಲಿ ಕೊಡಗಳೊಂದಿಗೆ ನೀರು ತುಂಬಿಸಿ ಕೊಂಡು ಹೋಗುತ್ತಿರುವುದು   

ಚಿತ್ರದುರ್ಗ: ಒಂದು ಕೊಡ ನೀರಿಗಾಗಿ ಕಿಲೋಮೀಟರ್‌ವರೆಗೂ ಅಲೆದಾಡಿ, ಗಂಟೆಗಟ್ಟಲೆ ಕಾದು ಜೀವಜಲ ತರುವಂಥ ಪರಿಸ್ಥಿತಿ ನಗರದ ಹಲವೆಡೆ ಇಂದಿಗೂ ಜೀವಂತವಾಗಿದೆ.

ಹಿಂದುಳಿದವರು, ಸಾಮಾನ್ಯ ಜನರು, ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುವವರು ಹೀಗೆ ಬಡ ವರ್ಗದವರು ಹೆಚ್ಚಾಗಿ ಇರುವಂಥ ಸ್ಥಳಗಳಲ್ಲಿ ಇಂದಿಗೂ ನೀರಿನ ಸಮಸ್ಯೆ ಬಗೆಹರಿದಿಲ್ಲ. ದೈನಂದಿನ ಕೆಲಸ ಕಾರ್ಯ ಬಿಟ್ಟು ನೀರಿಗಾಗಿ ಪರದಾಡುತ್ತಲೇ ಇದ್ದಾರೆ. ಆದರೆ, ಸ್ವಂತ ಕೊಳವೆಬಾವಿ ಉಳ್ಳವರಿಗೆ ಈ ರೀತಿಯಾದ ನೀರಿನ ಸಮಸ್ಯೆಯ ಬಿಸಿ ತಟ್ಟಿಲ್ಲ.

ದಿನ ಬೆಳಗಾದರೆ ಸೈಕಲ್, ತಳ್ಳುವ ಗಾಡಿ, ಆಟೊ, ದ್ವಿಚಕ್ರ ವಾಹನಗಳ ಮೂಲಕ ಅಲೆದಾಟ ಪ್ರಾರಂಭಿಸುತ್ತಾರೆ. ನಿತ್ಯ ಬರುವಂಥ ಸ್ಥಳದ ನಲ್ಲಿಯಲ್ಲಿ ನೀರು ಸಣ್ಣದಾಗಿ ಬರುತ್ತಿದ್ದರೆ ತುಂಬಾ ಹೊತ್ತು ಕಾಯಬೇಕಲ್ಲ ಎಂದು ಕೆಲವರು ಬೇರೆಡೆ ಹೊರಡುತ್ತಾರೆ. ಹೀಗೆ ಒಂದೆಡೆಯಿಂದ ಮತ್ತೊಂದೆಡೆ ಸುತ್ತಾಡಿ ನೀರು ತುಂಬಿಸಿಕೊಂಡು ಹೋಗುವ ಒಬ್ಬೊಬ್ಬರ ಪರಿಸ್ಥಿತಿ ಒಂದೊಂದು ರೀತಿ ಭಿನ್ನವಾಗಿದೆ.

ADVERTISEMENT

ನಗರಕ್ಕೆ ವಾಣಿವಿಲಾಸ ಸಾಗರ ಹಾಗೂ ಶಾಂತಿಸಾಗರ ಈ ಎರಡೂ ಜಲಾಶಯಗಳಿಂದ ನೀರು ಹರಿದು ಬರುತ್ತಿದ್ದು, ಇದನ್ನೇ ಬಹುತೇಕರು ಅವಲಂಬಿಸಿದ್ದಾರೆ. ಆದರೆ, ಪದೇ ಪದೇ ವಿದ್ಯುತ್ ಪರಿವರ್ತಕ, ಪೈಪ್‌ಲೈನ್ ದುರಸ್ತಿ, ಹತ್ತು ದಿನಕ್ಕೊಮ್ಮೆ ನೀರು ಎತ್ತುವ ಮೋಟಾರ್‌ ಪಂಪ್‌ ದುರಸ್ತಿ, ಪೂರೈಕೆ ಆಗುವ ನೀರು ಅಲ್ಲಲ್ಲಿ ವ್ಯರ್ಥ ಹಾಗೂ ವಿದ್ಯುತ್‌ ವ್ಯತ್ಯಯ ಹೀಗೆ ಹಲವು ಕಾರಣಗಳಿಂದಾಗಿ ನೀರಿಗೆ ಹಾಹಾಕಾರ ಉಂಟಾಗಿದೆ.

‘ನಮ್ಮ ವ್ಯಾಪ್ತಿಯಲ್ಲಿ 15 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಇದರಿಂದಾಗಿ ನಾಗರಿಕರು ಪರದಾಡುವಂತಾಗಿದೆ. ಜೋಗಿಮಟ್ಟಿ ರಸ್ತೆ ಮಾರ್ಗದ ಮೂರು ಕಡೆಗಳ ಸಾರ್ವಜನಿಕ ನಲ್ಲಿಗಳಲ್ಲಿ ಸದಾ ನೀರು ಬರುತ್ತದೆ. ಸಿಹಿನೀರು ಸಿಗದಿದ್ದರೂ ಬಳಸುವ ನೀರಂತೂ ಸಿಕ್ಕೇ ಸಿಗುತ್ತದೆ. ಅದಕ್ಕಾಗಿ ಒಂದು ಕಿಲೋಮೀಟರ್‌ ದೂರದಿಂದ ತಳ್ಳುವ ಗಾಡಿಯೊಂದಿಗೆ ನೀರು ತರಲು ಬಂದಿದ್ದೇನೆ. ಒಟ್ಟು15 ಕೊಡ ತಂದಿದ್ದು, ತುಂಬಿಸಲು ಎರಡು ತಾಸು ಸಮಯ ಬೇಕಾಯಿತು. ಇದನ್ನು ಮೂರು ಮನೆಯವರು ಹಂಚಿಕೊಳ್ಳಬೇಕು’ ಎನ್ನುತ್ತಾರೆ ಅಗಳೇರಿ ನಿವಾಸಿ ಪ್ರಿಯಾಂಕ.

‘ಬೇಸಿಗೆ ಕಾಲವಾದ್ದರಿಂದ ಮೊದಲೇ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ಎರಡು ಬಾರಿ ಸ್ನಾನ ಮಾಡಬೇಕು ಅನಿಸುತ್ತದೆ. ಆದರೆ, ಒಮ್ಮೆ ಮಾಡುವುದಕ್ಕೂ ನೀರಿಲ್ಲ. ಎರಡು ದಿನಕ್ಕೊಮ್ಮೆ ಮಾಡುವಂಥ ಅನಿವಾರ್ಯತೆ ನಮ್ಮದು.ಕುಡಿಯಲು, ಪಾತ್ರೆ, ಬಟ್ಟೆ ತೊಳೆಯಲು, ಅಡುಗೆ ಮಾಡಲು ಬಳಸಲಿಕ್ಕೆ ನೀರು ಸಿಕ್ಕರೆ ಸಾಕು. ಅದಕ್ಕಾಗಿ ಎಲ್ಲಿ ನೀರು ಸಿಗುತ್ತದೋ ಅಲ್ಲಿಗೆ ಅನಿವಾರ್ಯವಾಗಿ ಹೋಗಬೇಕಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸೃಷ್ಟಿ.

ವೃದ್ಧರಿಗೂ ಅಲೆದಾಟ ತಪ್ಪಿಲ್ಲ: ‘ನಮ್ಮಕಡೆ ನೀರು ಬಿಟ್ಟು ಹತ್ತು ದಿನವಾಯ್ತು. ಮನೆಯಲ್ಲಿ ನೀರಿಲ್ಲ. ತರದಿದ್ದರೆ, ಅಡುಗೆ ಮಾಡಲ್ಲ, ನಿಮಗೆ ಊಟವೂ ಸಿಗಲ್ಲ ಎಂದು ಮಕ್ಕಳು ಹೇಳುತ್ತಾರೆ’ ಎಂದು ವಯೋವೃದ್ಧ ರಾಮಪ್ಪ ಅಳಲು ತೋಡಿಕೊಂಡರು.

ಈ ವಯಸ್ಸಿನಲ್ಲಿ ಕೊಡ ಹೊತ್ತುಕೊಂಡು ಹೋಗಲು ನಿಮ್ಮಿಂದ ಸಾಧ್ಯವೇ ? ಮನೆಯಲ್ಲಿ ಹುಡುಗರಿಲ್ಲವೇ ಎಂಬ ಪ್ರಶ್ನೆಗೆ, ‘ಅವರೆಲ್ಲ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಸಮಯಕ್ಕೆ ಸರಿಯಾಗಿ ಹೋಗದಿದ್ದರೆ ಗುತ್ತಿಗೆದಾರರು ಬೈಯುತ್ತಾರೆ. ಅದಕ್ಕಾಗಿ ದೂರವಾದರೂ ಪರವಾಗಿಲ್ಲ, ನಾನೇ ಬಂದಿದ್ದೇನೆ. ಬಿಸಿಲಲ್ಲಿ ನಡೆದು ಎರಡು ಕೊಡ ಮನೆಗೆ ನೀರು ತರುವಷ್ಟರಲ್ಲಿ ಸುಸ್ತಾಗುತ್ತದೆ’ ಎಂದು ‘ಪ್ರಜಾವಾಣಿ’ ಜತೆ ಅವರು ನೋವು ಹಂಚಿಕೊಂಡರು.

ಎಲ್ಲೆಲ್ಲಿದೆ ನೀರಿನ ಸಮಸ್ಯೆ: ನಗರದಲ್ಲಿ ಇಂಥ ಭಾಗದಲ್ಲಿ ನೀರಿನ ಸಮಸ್ಯೆ ಇಲ್ಲ ಎನ್ನುವಂತಿಲ್ಲ. ಕೆಲವು ಕಡೆ ವಾರಕ್ಕೊಮ್ಮೆ, ಇನ್ನು ಕೆಲವು ಕಡೆ ಹದಿನೈದು ದಿನವಾದರೂ ನೀರಿನ ಪೂರೈಕೆ ಇರುವುದಿಲ್ಲ. ಜೋಗಿಮಟ್ಟಿ ರಸ್ತೆ, ಸುಣ್ಣದ ಗುಮ್ಮಿ, ಜಿಲ್ಲಾ ಕ್ರೀಡಾಂಗಣ ರಸ್ತೆ, ಫಿಲ್ಟರ್‌ಹೌಸ್‌ ರಸ್ತೆ, ಕೆಳಗೋಟೆ ಬಡಾವಣೆಯಲ್ಲಿ ನೀರಿನ ಸಮಸ್ಯೆ ನಿರಂತರವಾಗಿದೆ. ಅನೇಕರಿಗೆ ಹಗಲಿರುಳು ನೀರಿನ ಚಿಂತೆ ಶುರುವಾಗಿದೆ. ನೀರಿಲ್ಲದೆ, ಜೀವನ ನಡೆಸಲು ಸಾಧ್ಯವಿಲ್ಲ. ಐದು ದಿನಕ್ಕೊಮ್ಮೆಯಾದರು ನಗರಸಭೆಯವರು ನೀರು ಬಿಟ್ಟರೆ ಸಾಕು ಎನ್ನುತ್ತಾರೆ ಜೋಗಿಮಟ್ಟಿರಸ್ತೆ ನಿವಾಸಿ ಉಮೇಶ್, ಕೆಳಗೋಟೆ ನಿವಾಸಿ ಮಂಜುನಾಥ್.

ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದ ಕಾರಣ ಕೆಲ ಬಡಾವಣೆಗಳ ನಾಗರಿಕರು ಜನಪ್ರತಿನಿಧಿಗಳು ಮತ್ತು ನಗರಸಭೆ ಅಧಿಕಾರಿಗಳ ಕಾರ್ಯವೈಖರಿಗೆ ಬೇಸರಗೊಂಡಿದ್ದಾರೆ. ಬಿಸಿಲಿನಲ್ಲಿ ಹೋಗಲು ಸಾಧ್ಯವಾಗದ ಕೆಲವರು ನೂರಾರು ರೂಪಾಯಿ ಹಣ ತೆತ್ತು ಟ್ಯಾಂಕರ್‌ ನೀರು ಖರೀದಿಸುವುದೇ ಸೂಕ್ತ ಎನ್ನುತ್ತಿದ್ದಾರೆ.

‘ಶುದ್ಧ ನೀರು ಪೂರೈಕೆಯಾಗುತ್ತಿಲ್ಲ’

ನಗರಸಭೆಯಿಂದ ಈಗ ಸರಬರಾಜು ಆಗುತ್ತಿರುವ ನೀರು ಕುಡಿಯಲಿಕ್ಕೆ ಯೋಗ್ಯವಾಗಿಲ್ಲ. ವಾಣಿವಿಲಾಸ ಸಾಗರದ ನೀರು ಪರವಾಗಿಲ್ಲ. ಶಾಂತಿಸಾಗರದ ನೀರು ಕಾಫಿ ರೀತಿಯಲ್ಲಿ ಕಂದು ಬಣ್ಣದಿಂದ ಕೂಡಿರುತ್ತದೆ. ಅದನ್ನು ನೋಡಿದರೆ ಸ್ನಾನ ಮಾಡಲು ಮನಸ್ಸೇ ಬರುವುದಿಲ್ಲ. ಇನ್ನೂ ಪಾತ್ರೆ, ಬಟ್ಟೆ ತೊಳೆಯಲೂ ಪ್ರಯೋಜನವಿಲ್ಲ ಎಂಬಂತೆ ಇದೆ. ಚಿತ್ರದುರ್ಗಕ್ಕೆ ಭದ್ರಾ ಮೇಲ್ದಂಡೆ ಯೋಜನೆ ಭರವಸೆಯಾಗಿಯೇ ಉಳಿದಿದೆ. ಕಾಮಗಾರಿ ನಡೆಯುತ್ತಿದೆ ಎಂಬ ಮಾತು ಅನೇಕ ವರ್ಷದಿಂದ ಕೇಳುತ್ತಲೇ ಬಂದಿದ್ದೇವೆ. ಶಾಶ್ವತ ಪರಿಹಾರ ಸಿಗದ ಹೊರತು ನೀರಿನ ಸಮಸ್ಯೆ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಎಲ್.ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.