ADVERTISEMENT

ಖಾನಿ ಹಳ್ಳದ ತುಂಬ ತ್ಯಾಜ್ಯ ರಾಶಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 6:28 IST
Last Updated 7 ಜುಲೈ 2017, 6:28 IST

ಪರಶುರಾಂಪುರ: ಹೋಬಳಿ ಕೇಂದ್ರದಿಂದ ಆಂಧ್ರಪ್ರದೇಶದ ಕಲ್ಯಾಣ ದುರ್ಗಕ್ಕೆ ಹೋಗುವ ಮುಖ್ಯರಸ್ತೆಯ ಪಕ್ಕದಲ್ಲಿಯೇ ಹರಿಯುವ ಖಾನಿ ಹಳ್ಳಕ್ಕೆ ಗ್ರಾಮ ಪಂಚಾಯ್ತಿಯ ಸ್ವಚ್ಛತಾ ಸಿಬ್ಬಂದಿ ಘನತ್ಯಾಜ್ಯ ಎಸೆಯುತ್ತಿದ್ದು, ಮಾಲಿನ್ಯಕ್ಕೆ ಕಾರಣವಾಗಿದೆ.

ಇದರಿಂದ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಅಲ್ಲದೇ ಅಲ್ಲಿ ಆಹಾರ ಅರಸಿ ಬರುವ ನಾಯಿಗಳು ಪಾದಚಾರಿಗಳ ಮೇಲೆ ದಾಳಿ ಮಾಡಿದ ನಿದರ್ಶನಗಳೂ ಇವೆ.

ಹಳ್ಳದ ಪಕ್ಕದಲ್ಲೇ ಹರಿಯುವ ವೇದಾವತಿ ನದಿಗೆ ಕೋಟೆಕೆರೆ ಬಳಿ ಬ್ಯಾರೇಜ್ ನಿರ್ಮಿಸಲು ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲೇ ಅದರ ಕಾಮಗಾರಿ ಶುರುವಾಗಲಿದೆ. ಆಗ ತ್ಯಾಜ್ಯ ತುಂಬಿದ ಹಳ್ಳದಿಂದ ಹರಿಯುವ ನೀರು ಬ್ಯಾರೇಜ್‌ಗೆ ತಲುಪಿ ಮಲಿನವಾಗುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಗ್ರಾಮ ಪಂಚಾಯ್ತಿಯವರು ರಸ್ತೆಯ ಪಕ್ಕದಲ್ಲಿರುವ ಈ ಹಳ್ಳಕ್ಕೆ ಊರಿನ ತ್ಯಾಜ್ಯವನ್ನು ಸುರಿದು ಬೆಂಕಿ ಹಚ್ಚುತ್ತಾರೆ. ಇದರಿಂದ ಸುತ್ತಮುತ್ತ ಮಾಲಿನ್ಯ ಉಂಟಾಗುತ್ತಿದೆ. ಇದರ ಬಗ್ಗೆ ಗಮನಹರಿಸಬೇಕು’ ಎಂದು ಗ್ರಾಮಸ್ಥ ನಾಗರಾಜ್ ಒತ್ತಾಯಿಸಿದ್ದಾರೆ.

ಪರಶುರಾಂಪುರ ಮುಂದಿನ ದಿನಗಳಲ್ಲಿ ತಾಲ್ಲೂಕು ಕೇಂದ್ರವಾಗಲಿದೆ. ಹಳ್ಳಕ್ಕೆ ತ್ಯಾಜ್ಯ ಎಸೆಯುವ ಬದಲು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯೆ ವಿಜಯಲಕ್ಷ್ಮಿ ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.