ADVERTISEMENT

ಖಾಸಗಿ ಶಾಲೆ ಶಿಕ್ಷಕರಿಗೂ ಯೋಗ ತರಬೇತಿ

ತರಬೇತಿ ಕಾರ್ಯಾಗಾರ ಉದ್ಘಾಟನೆಯಲ್ಲಿ ಸಚಿವ ಎಚ್.ಆಂಜನೇಯ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 5:51 IST
Last Updated 3 ಫೆಬ್ರುವರಿ 2017, 5:51 IST
ಖಾಸಗಿ ಶಾಲೆ ಶಿಕ್ಷಕರಿಗೂ ಯೋಗ ತರಬೇತಿ
ಖಾಸಗಿ ಶಾಲೆ ಶಿಕ್ಷಕರಿಗೂ ಯೋಗ ತರಬೇತಿ   

ಚಿತ್ರದುರ್ಗ:  ‘ಆಯುಷ್ ಇಲಾಖೆಯಿಂದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ನೀಡುತ್ತಿರುವ ಆರೋಗ್ಯ ಯೋಗ ತರಬೇತಿಯನ್ನು ಖಾಸಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗೂ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ  ಎಚ್.ಆಂಜನೇಯ ತಿಳಿಸಿದರು.

ನಗರದ ಪೊಲೀಸ್ ಸಮುದಾಯ ಭವನದಲ್ಲಿ ಜಿಲ್ಲಾ ಆಯುಷ್ ಇಲಾಖೆ  ಸರ್ಕಾರಿ ಶಾಲೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸೋಮವಾರದಿಂದ ಆರು ದಿನಗಳ ಕಾಲ ಏರ್ಪಡಿಸಿರುವ ಯೋಗ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಯೋಗದಿಂದ ಉತ್ತಮ ಆರೋಗ್ಯ ರಕ್ಷಣೆ ಸಾಧ್ಯ. ಸರ್ಕಾರಿ ಶಾಲೆಯ ಜೊತೆಗೆ ಖಾಸಗಿ ಶಾಲೆಯ ಶಿಕ್ಷಕರಿಗೂ ಯೋಗ ತರಬೇತಿ ನೀಡುವುದರಿಂದ  ಖಾಸಗಿ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಯೋಗ ಕಲಿಸಲು ಅನುಕೂಲ ’ ಎಂದರು.

‘ಒಂದು ಕಾಲದಲ್ಲಿ ಯೋಗ ತರಬೇತಿ  ಸೇವೆಯಾಗಿತ್ತು. ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ ಅವರು ಯೋಗವನ್ನು ಕಡ್ಡಾಯವಾಗಿ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಈಗಲೂ ಹಲವು ಸ್ವಾಮೀಜಿ ಉಚಿತ ಯೋಗ ಶಿಬಿರ ನಡೆಸಿಕೊಡುತ್ತಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಯೋಗ ಕಲಿಕೆ ವ್ಯಾಪಾರೀಕರಣವಾಗಿದೆ. ಶ್ರಮಿಕರು, ರೈತರು, ಪೌರಕಾರ್ಮಿಕರಿಗೆ ಯೋಗದ ಅಗತ್ಯ ಇಲ್ಲ ಎಂದಿದ್ದೆ. ಆದರೆ, ಅದನ್ನೇ ವಿವಾದ ಮಾಡಲಾಗಿತ್ತು. ಹಾಗಾಗಿ ಯೋಗ ದಿನಾಚರಣೆಯಂದು ಯೋಗದಲ್ಲಿ ಭಾಗವಹಿಸುವ ಮೂಲಕ ಆ ವಿವಾದಕ್ಕೆ ತೆರೆ ಎಳೆದೆ’ ಎಂದು ನೆನಪಿಸಿಕೊಂಡರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಯೋಗ ಕಲಿಕೆಗೆ ಹೆಚ್ಚಿನ ಒತ್ತು ಕೊಡಬೇಕು ಮತ್ತು ದೈಹಿಕ ಶಿಕ್ಷಣ ಶಿಕ್ಷಕರಿಗೆ ಯೋಗ ತರಬೇತಿ ಸೂಕ್ತ’ ಎಂದರು. ‘ಎಲ್ಲಾ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಕಲಿಸುವ ಶಿಕ್ಷಕರಿಲ್ಲ. ಆದರೆ ದೈಹಿಕ ಶಿಕ್ಷಣ ಶಿಕ್ಷಕರಿದ್ದ ಶಾಲೆ, ಕಾಲೇಜಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಕಾಣಲಾಗುವುದಿಲ್ಲ’ ಎಂದರು.

ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಅಣ್ಣಿಗೆರೆ ಯೋಗ ಶಾಲೆ ವಿದ್ಯಾರ್ಥಿಗಳು ಯೋಗ ನೃತ್ಯ ಪ್ರದರ್ಶನ ನೀಡಿದರು. ಧನ್ವಂತರಿ ಯೋಗದ ಗೀತೆಗೆ 25ಕ್ಕೂ ಹೆಚ್ಚು ಮಕ್ಕಳು ನರ್ತನ ಮಾಡಿದರು. ನೃತ್ಯದಲ್ಲಿ  ಎಲ್ಲ ಆಸನಗಳೂ ಪ್ರದರ್ಶನಗೊಂಡಿದ್ದು ವಿಶೇಷವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಆಂಜನೇಯ ಈ ಮಕ್ಕಳನ್ನು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.