ADVERTISEMENT

ಗೋಮಾಳ ಉಳಿವಿಗೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 5:08 IST
Last Updated 23 ಮಾರ್ಚ್ 2017, 5:08 IST

ಚಳ್ಳಕೆರೆ: ಪಾವಗಡ ರಸ್ತೆ ರಿ.ಸ.ನಂ.62, 63ರಲ್ಲಿರುವ 91 ಎಕರೆ 11ಗುಂಟೆ ಗೋಮಾಳದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬಾರದೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಇಲ್ಲಿನ ಪ್ರವಾಸಿ ಮಂದಿರದಿಂದ ಗೋಮಾಳದವರೆಗೆ ಬುಧವಾರ ಪ್ರತಿಭಟನಾ ಜಾಥಾ ನಡೆಸಿದರು.

ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ‘ಗೋಮಾಳದ ಉಳಿವಿಗಾಗಿ ಆಗ್ರಹಿಸಿ  ಕಳೆದ ಜ.28ರಂದು ಆರಂಭಿಸಿದ ಪ್ರತಿಭಟನೆ ಇಂದಿಗೆ ಐವತ್ತನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿನ ಗೋಮಾಳದಲ್ಲಿ ಕಳೆದ ಹಲವಾರು ದಶಕಗಳಿಂದ ಪಶುಪಾಲನೆ, ಕುರಿಸಾಕಾಣಿಕೆ ಮತ್ತು ಉರುವಲು ಸಂಗ್ರಹ ಕಾರ್ಯ ನಡೆಯುತ್ತಿದೆ.

ಗೋಮಾಳದ ಸಮೀಪದ ಹಲವು ಗ್ರಾಮಗಳ ಸಾವಿರಾರು ಕುಟುಂಬಗಳಿಗೆ ಈ ಗೋಮಾಳ ಆಸರೆಯಾಗಿದೆ. ಜಾನುವಾರುಗಳಿಗೆ ಆಶ್ರಯ ತಾಣವಾಗಿದೆ.  ಆದರೆ, ಈ ಪ್ರದೇಶದಲ್ಲಿ ಹಲವು ಸರ್ಕಾರಿ ಕಾಮಗಾರಿಗಳು ನಡೆಯುತ್ತಿದ್ದು, ಗೋಮಾಳವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಳ್ಳಕೆರೆಯಲ್ಲಿ ಈಗಾಗಲೇ ಎರಡು ಕ್ರೀಡಾಂಗಣಗಳಿವೆ. ಆದ್ದರಿಂದ ಈ ಪ್ರದೇಶದಲ್ಲಿ ಮತ್ತೊಂದು ಕ್ರೀಡಾಂಗಣ ನಿರ್ಮಿಸುವ ಅಗತ್ಯವಿಲ್ಲ ಎಂದರು.
ಸರ್ಕಾರಿ ಗೋಮಾಳವನ್ನು ಆಕ್ರಮಿಸಿ ಕಾಮಗಾರಿ ಕೈಗೊಂಡಿರುವುದು ರೈತ ವಿರೋಧಿ ನೀತಿಯಾಗುತ್ತದೆ. ಕೂಡಲೇ ಇಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಿ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಈಚಗಟ್ಟ ಸಿದ್ದವೀರಪ್ಪ, ಜಡಿಯಪ್ಪ ದೇಸಾಯಿ, ಹೊನ್ಸೂರಪ್ಪ ಮುನಿಯಪ್ಪ, ಕಬ್ಬಿಗೆರೆ ನಾಗರಾಜ, ಹಂಪನ್ನಯಮಾಳಿಗೆ ನಾಗರಾಜ, ಕರಿಸಿದ್ದಯ್ಯ, ಬಯಲಪ್ಪ, ಜಿ.ಕೆ.ವೀರಣ್ಣ, ಚನ್ನಕೇಶವ,  ಉಪ್ಪಾರಹಟ್ಟಿ ವೀರಣ್ಣ, ಜಯಣ್ಣ, ಮಂಜುನಾಥ, ಕ್ಯಾತಣ್ಣ, ತಿಪ್ಪೇಸ್ವಾಮಿ, ರತ್ನಮ್ಮ, ಭಾಗ್ಯಮ್ಮ, ಮಂಜುಳಮ್ಮ, ದೇವಿರಮ್ಮ, ಲಿಂಗರಾಜ, ಅಂಜಿನಪ್ಪ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.