ADVERTISEMENT

ಗೌರಸಮುದ್ರ: ಮಾರಮ್ಮದೇವಿ ತುಂಬಲು ಪರಿಷೆ ನಾಳೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 7:21 IST
Last Updated 21 ಆಗಸ್ಟ್ 2017, 7:21 IST

ಮೊಳಕಾಲ್ಮುರು: ಪ್ರಸಿದ್ಧ ಬುಡಕಟ್ಟು ಸಂಸ್ಕೃತಿಗಳನ್ನು ಕಾಣಬಹುದಾದ ಬಯಲುಸೀಮೆ ಜಿಲ್ಲೆಗಳ ದೊಡ್ಡ ಜಾತ್ರೆ ಎಂದು ಖ್ಯಾತಿ ಹೊಂದಿರುವ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿ ಗೌರಸಮುದ್ರ ಮಾರಮ್ಮದೇವಿ ಜಾತ್ರೆ ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ.

ಜಿಲ್ಲೆಯಲ್ಲಿ ನಾಯಕನಹಟ್ಟಿ ಹೊರತುಪಡಿಸಿದಲ್ಲಿ ಗೌರಸಮುದ್ರ ಜಾತ್ರೆ ನಂತರದ ಸ್ಥಾನ ಪಡೆದಿದೆ. ವಿಶಿಷ್ಟ ಅದರಲ್ಲೂ ಪರಿಶಿಷ್ಟ ಜಾತಿ, ಪಂಗಡ ಜನರ ವಿಶೇಷ ಸಂಸ್ಕೃತಿಗಳನ್ನು ಬಿಂಬಿಸುವ ಮೂಲಕ ಗ್ರಾಮೀಣ ಭಾಷೆಯಲ್ಲಿ ‘ಗೌಸಂದ್ರ ಮಾರಮ್ಮ ಜಾತ್ರೆ’ ಎಂದೇ ಖಾ್ಯಾತಿಯಾದೆ. ಇದರಲ್ಲಿ ಮುಖ್ಯಘಟ್ಟವಾದ ‘ತುಂಬಲು ಪರಿಷೆ’ ಆ.22ರಂದು ನಡೆಯಲಿದೆ. ಪ್ರಸಿದ್ಧ ಸಿಡಿ ಮಹೋತ್ಸವ ಬುಧವಾರ ಗೌರಸಮುದ್ರದಲ್ಲಿನ ಮಾರಮ್ಮದೇವಿ ದೇವಸ್ಥಾನ ಎದುರು ಮಧ್ಯಾಹ್ನ 3ಕ್ಕೆ ಆರಂಭವಾಗಲಿದೆ.

ಅಂಗವಾಗಿ ಭಾನುವಾರ ಮತ್ತು ಸೋಮವಾರ ಹುತ್ತಕ್ಕೆ ಅಭಿಷೇಕ, ದೇವಿ ಮೂಲ ಸನ್ನಿಧಿಗೆ ಅಭಿಷೇಕ ಕಾರ್ಯಕ್ರಮ ನಡೆಸಲಾಗಿದೆ. ಸಿಡಿಯನ್ನು ಕೋನಸಾಗರ ಗ್ರಾಮದ ನಾಯಕ ಜನಾಂಗದರು ನಡೆಸಿಕೊಂಡು ಬರುತ್ತಿದ್ದಾರೆ ದೇವಸ್ಥಾನ ಮೂಲಗಳು ತಿಳಿಸಿವೆ.

ADVERTISEMENT

ಬಯಲುಸೀಮೆ ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ನೆರೆಯ ಅನಂತಪುರ ಜಿಲ್ಲೆಗಳಿಂದ ಜಾತ್ರೆಗೆ ಸಹಸ್ರಾರು ಭಕ್ತರು ಹರಕೆಗಳನ್ನು ಹೊತ್ತು ಬರುತ್ತಾರೆ. ಹಲವು ಬಗೆಯ ಹರಕೆಗಳನ್ನೂ ಒಪ್ಪಿಸುತ್ತಾರೆ. ಜಾಗತೀಕರಣ ಯುಗದಲ್ಲೂ ಇಲ್ಲಿ ಸಲ್ಲಿಸುವ ಬುಡಕಟ್ಟು ಹರಕೆಗಳು ಅಚ್ಚರಿ ಮೂಡಿಸುತ್ತವೆ.

ಇಲ್ಲಿ ತುಂಬಲು ಜಾತ್ರೆ ನಡೆದ ನಂತರ ಸುತ್ತಮುತ್ತ ಜಿಲ್ಲೆಗಳ ಬಹುತೇಕ ಗ್ರಾಮಗಳಲ್ಲಿ ಒಂದು ತಿಂಗಳ ಕಾಲ ಪ್ರತಿ ಮಂಗಳವಾರ ನಿಗದಿತವಾಗಿ ದೇವಿಯ ಜಾತ್ರೆ ನಡೆಸಲಾಗುತ್ತದೆ. ಕೊನೆಯಲ್ಲಿ ತುಂಬಲಿನಲ್ಲಿ ಮರಿಪರಿಷೆ ನಡೆಯುವ ಮೂಲಕ ಇಡೀ ಜಾತ್ರೆಗೆ ತೆರೆಬೀಳುತ್ತದೆ.
– ಕೊಂಡ್ಲಹಳ್ಳಿ ಜಯಪ್ರಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.