ADVERTISEMENT

‘ಗ್ರಾಮಸಭೆ ಒಪ್ಪಿದ ಪಟ್ಟಿ ಅಂತಿಮಗೊಳಿಸಿ’

ಬಸವ ವಸತಿ ಯೋಜನೆ: ಫಲಾನುಭವಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 10:18 IST
Last Updated 12 ಫೆಬ್ರುವರಿ 2017, 10:18 IST
ಗ್ರಾಮಸಭೆ ಅನುಮೋದನೆ ನೀಡಿದ ವಸತಿ ಯೋಜನೆ ಫಲಾನುಭವಿಗಳ ಪಟ್ಟಿಯನ್ನೇ ಅಂತಿಮಗೊಳಿಸುವಂತೆ ಒತ್ತಾಯಿಸಿ ಹಿರಿಯೂರು ತಾಲ್ಲೂಕು ಹರಿಯಬ್ಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಫಲಾನುಭವಿಗಳು ಶುಕ್ರವಾರ ಚಿತ್ರದುರ್ಗದ ಜಿಲ್ಲಾ ಪಂಚಾಯ್ತಿ ಸಿಇಒ ಗೃಹ ಕಚೇರಿಯಲ್ಲಿ ಸಿಇಒ ನಿತೇಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು
ಗ್ರಾಮಸಭೆ ಅನುಮೋದನೆ ನೀಡಿದ ವಸತಿ ಯೋಜನೆ ಫಲಾನುಭವಿಗಳ ಪಟ್ಟಿಯನ್ನೇ ಅಂತಿಮಗೊಳಿಸುವಂತೆ ಒತ್ತಾಯಿಸಿ ಹಿರಿಯೂರು ತಾಲ್ಲೂಕು ಹರಿಯಬ್ಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಫಲಾನುಭವಿಗಳು ಶುಕ್ರವಾರ ಚಿತ್ರದುರ್ಗದ ಜಿಲ್ಲಾ ಪಂಚಾಯ್ತಿ ಸಿಇಒ ಗೃಹ ಕಚೇರಿಯಲ್ಲಿ ಸಿಇಒ ನಿತೇಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು   

ಚಿತ್ರದುರ್ಗ:  ಬಸವ ವಸತಿ ಯೋಜನೆಯಡಿ ಗ್ರಾಮಸಭೆಯಲ್ಲಿ ಅನುಮೋದನೆಗೊಂಡಿರುವ ವಸತಿರಹಿತ 42 ಫಲಾನುಭವಿಗಳಿಗೇ ಮನೆಗಳನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಹಿರಿಯೂರು ತಾಲ್ಲೂಕು ಹರಿಯಬ್ಬೆ ಗ್ರಾಮಸ್ಥರು ಶುಕ್ರವಾರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯ್ತಿ ಕಚೇರಿಯಿಂದ ಲಾರಿಯಲ್ಲಿ ಸಿಇಒ ಅವರ ಗೃಹ ಕಚೇರಿಗೆ ತೆರಳಿದ ನೂರಾರು ಫಲಾನುಭವಿಗಳು, ಫಲಾನುಭವಿಗಳ ಪಟ್ಟಿ, ಆಯ್ಕೆ ಪಟ್ಟಿ ಹಾಗೂ ಮನವಿ ಪತ್ರವನ್ನು ಸಿಇಒ ಅವರಿಗೆ ಸಲ್ಲಿಸಿದರು.

ನಂತರ ಗ್ರಾಮಸ್ಥರ ಪರವಾಗಿ ಮಾತನಾಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿರೇಶ್, ‘ವಸತಿ ನಿಗಮದ ಆನ್‌ಲೈನ್‌ಲ್ಲಿ ನಿಗದಿ ಮಾಡಿದಂತೆ  2016–17ನೇ ಸಾಲಿಗೆ 42 ಫಲಾನುಭವಿಗಳನ್ನು ಆಯ್ಕೆ ಮಾಡುವ ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 500 ವಸತಿ ರಹಿತರಲ್ಲಿ 42 ಫಲಾನುಭವಿಗಳನ್ನು ಗ್ರಾಮಸಭೆ ಅನುಮೋದನೆ ಜತೆ ಆಯ್ಕೆ ಮಾಡಿ, ಪಟ್ಟಿ ತಯಾರಿಸಿ ತಾಲ್ಲೂಕು ಪಂಚಾಯ್ತಿಗೆ ಸಲ್ಲಿಸಲಾಗಿತ್ತು’ ಎಂದು ವಿವರಿಸಿದರು.

‘ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಜ.21ರಂದು ಫಲಾನುಭವಿಗಳ ಆಯ್ಕೆ ಮಾಡಲು ಸೂಚಿಸಿದ್ದರು. ಈ ಪತ್ರದ ಜತೆ ಲಗತ್ತಿಸಿರುವ ಅನುಬಂಧದಲ್ಲಿ ಹರಿಯಬ್ಬೆ ಗ್ರಾಮ ಪಂಚಾಯ್ತಿಗೆ ಈ ಹಿಂದೆ ನಿಗದಿಪಡಿಸಿದ್ದ 42 ಮನೆಗಳ ಬದಲಿಗೆ ಕೇವಲ 20 ಮನೆ ಮಾತ್ರ ನಿಗದಿಪಡಿಸಿ, ಪರಿಷ್ಕೃತ ಫಲಾನುಭವಿಗಳ ಪಟ್ಟಿ ತಯಾರಿಗೆ ಸೂಚಿಸಲಾಗಿತ್ತು. ಆದರೆ, ನಾವು ಯಾವುದೇ ಕಾರಣಕ್ಕೂ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವುದಿಲ್ಲ. ಆಯ್ಕೆ ಮಾಡಿರುವ ಫಲಾನುಭವಿಗಳಿಗೇ ಮನೆ ಮಂಜೂರು ಮಾಡಬೇಕು’ ಎಂದರು.

‘ಫಲಾನುಭವಿಗಳ ಆಯ್ಕೆಯ ಅಧಿಕಾರವನ್ನು ಜಾಗೃತಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕರಿಗೆ ನೀಡಿರುವುದರಿಂದ, ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯವಾ­ಗುತ್ತಿದೆ. ವಿವಿಪುರ ಸೇರಿದಂತೆ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳಲ್ಲೂ ಇದೇ ರೀತಿ ವ್ಯತ್ಯಾಸ ಮಾಡಲಾಗಿದೆ. ಈಗ ಹೊರಡಿಸಿರುವ ಪರಿಷ್ಕೃತ ಗುರಿಯನ್ನು ರದ್ದುಗೊಳಿಸಿ, ಕಳೆದ ವರ್ಷದ ಅಕ್ಟೋಬರ್‌ ತಿಂಗಳ ಗ್ರಾಮಸಭೆಯಲ್ಲಿ ಅನುಮೋದಿಸಿದ ಫಲಾನುಭವಿಗಳ ಪಟ್ಟಿಯನ್ನೇ ಅಂತಿಮಗೊಳಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಜಿಲ್ಲಾ ಪಂಚಾಯ್ತಿ ಸಿಇಒ ಮನವಿ ಸ್ವೀಕರಿಸಿ ಮಾತನಾಡಿದ ಸಿಇಒ ನಿತೇಶ್ ಪಾಟೀಲ್, ‘ಜಾಗೃತಿ ಸಮಿತಿ ಅಧ್ಯಕ್ಷರಾದ ಶಾಸಕರಿಗೆ ಫಲಾನುಭವಿಗಳ ಗುರಿ ನಿಗದಿ ಮಾಡುವ ಅಧಿಕಾರ ಇರುತ್ತದೆ. ಆದರೆ, 42 ಫಲಾನುಭವಿಗಳ ಪಟ್ಟಿ ರದ್ದು ಮಾಡಿದ್ದರೆ, ಹಳೆ ಪಟ್ಟಿ ಉಳಿಸುವ ಅವಕಾಶವಿದ್ದರೆ, ಅವಕಾಶ ಕಲ್ಪಿಸಲಾಗುವುದು. ಇನ್ನು 22 ಜನಕ್ಕೆ ಅವಕಾಶ ಕೊಡಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ಗೋವಿಂದರಾಜು, ಮಂಜುನಾಥ್, ಕಾಂತರಾಜ್, ಕೆಂಚಮ್ಮ, ರಮೇಶ್, ಪರಮೇಶ್, ನಾಗರಾಜ್, ಗೋವಿಂದಪ್ಪ, ರೈತ ಮುಖಂಡರಾದ ಶಿವಮೂರ್ತಿ, ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT