ADVERTISEMENT

ಚಂದ್ರವಳ್ಳಿಯ ಕಾನನದಲ್ಲಿ ಮರಗಳ ಹನನ!

ಇಂದು ವಿಶ್ವ ಅರಣ್ಯ ದಿನ: ಹೆಜ್ಜೆ–ಹೆಜ್ಜೆಗೂ ಮರಗಳಿಗೆ ಕೊಡಲಿ ಹಾಕಿರುವ ದೃಶ್ಯ * ಹುಲ್ಲಿಗೆ ಬೆಂಕಿ ಹಾಕುವ ದನಗಾಹಿಗಳು

ಗಾಣಧಾಳು ಶ್ರೀಕಂಠ
Published 21 ಮಾರ್ಚ್ 2017, 10:47 IST
Last Updated 21 ಮಾರ್ಚ್ 2017, 10:47 IST
ಚಂದ್ರವಳ್ಳಿಯ ಮೇಲ್ಬಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿರುವ ಮುಳ್ಳು ಜಾತಿಯ ಮರಕ್ಕೆ ಕೊಡಲಿಯೇಟು ಕೊಟ್ಟಿರುವ ದೃಶ್ಯ.  ಅರಣ್ಯದ ಸುತ್ತ ಇಂಥ ಹತ್ತಾರು ಮರಗಳು ಇದೇ ರೀತಿ ಮುರಿದು ಬಿದ್ದಿವೆ.
ಚಂದ್ರವಳ್ಳಿಯ ಮೇಲ್ಬಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿರುವ ಮುಳ್ಳು ಜಾತಿಯ ಮರಕ್ಕೆ ಕೊಡಲಿಯೇಟು ಕೊಟ್ಟಿರುವ ದೃಶ್ಯ. ಅರಣ್ಯದ ಸುತ್ತ ಇಂಥ ಹತ್ತಾರು ಮರಗಳು ಇದೇ ರೀತಿ ಮುರಿದು ಬಿದ್ದಿವೆ.   

ಚಿತ್ರದುರ್ಗ:  ಐತಿಹಾಸಿಕ ಚಂದ್ರವಳ್ಳಿಯ ಹಿಂಭಾಗದಲ್ಲಿರುವ ಬೆಟ್ಟದ ಮೇಲಿನ ಅರಣ್ಯ ಪ್ರದೇಶದಲ್ಲಿರುವ ಮುಳ್ಳು ಜಾತಿಯ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ!

ಚಂದ್ರವಳ್ಳಿ ಮೇಲ್ಭಾಗದ ಅರಣ್ಯ ಪ್ರದೇಶದಲ್ಲಿರುವ ಒಂದೇ ಜಾತಿಯ ಮರವನ್ನೂ ಒಂದೇ ಶೈಲಿಯಲ್ಲಿ ಕತ್ತರಿಸಲಾಗಿದೆ. ಕತ್ತರಿಸಿದ ಮರಗಳ ಭಾಗವನ್ನು, ಮೂಲ ಮರದ ಬುಡಕ್ಕೆ ಒರಗಿಸಿ ಇಡಲಾಗಿದೆ. 

ಸುಮಾರು ಆರು ತಿಂಗಳ ಹಿಂದೆ ಈ ಜಾಗಕ್ಕೆ ಭೇಟಿ ನೀಡಿದಾಗ ಒಂದಷ್ಟು ಮರಗಳನ್ನು ಹೀಗೆ ಕತ್ತರಿಸುವುದನ್ನು ಗಮನಿಸಲಾಗಿತ್ತು.  ಒಂದು ವಾರದ ಹಿಂದೆ ಅದೇ ಸ್ಥಳಕ್ಕೆ ಭೇಟಿ ನೀಡಿ ದಾಗಲೂ, ಹಳೆಯ ಮರಗಳ ಜತೆಗೆ ಮತ್ತೊಂದಿಷ್ಟು ಹೊಸ ಮರಗಳನ್ನೂ ಹೀಗೆ ಕತ್ತರಿಸಿ, ಒರಗಿಸಲಾಗಿತ್ತು.

ADVERTISEMENT

ಮರಗಳ ಕಟಾವಿನ ಹಿಂದಿನ ಮಾಹಿತಿ ಹುಡುಕುತ್ತಾ ಹೊರಟಾಗ, ಒಂದಷ್ಟು ಅಸ್ಪಷ್ಟ ಮಾಹಿತಿಗಳು ತೆರೆದುಕೊಂಡಿವೆ. ಅರಣ್ಯ ಪ್ರದೇಶ ದಲ್ಲಿರುವ ಮರಗಳನ್ನು ಕತ್ತರಿಸುವುದು ಅಪರಾಧ. ಆದರೆ, ಬಿದ್ದ ತುಂಡುಗಳನ್ನು ಕೊಂಡೊಯ್ಯಬಹುದು ಎಂಬುದು ಅರಣ್ಯ ಇಲಾಖೆಯ ನಿಯಮದಲ್ಲಿದೆ. ಇದನ್ನೇ ಲಾಭವಾಗಿಸಿಕೊಳ್ಳಲು ಅರಣ್ಯ ಪ್ರದೇಶದಲ್ಲಿ ಜಾನುವಾರು ಮೇಯಿಸುವುದಕ್ಕಾಗಿ ಬರುವವರು ಹೀಗೆ ಮರಗಳನ್ನು ಕತ್ತರಿಸುತ್ತಾರೆ. ಸ್ವಲ್ಪ ದಿನ ಬಿಟ್ಟು, ಕತ್ತರಿಸಿದ ಭಾಗ ಒಣಗಿ ನೆಲಕ್ಕೆ ಉರುಳಿದ ಮೇಲೆ, ಅದನ್ನು ಸೌದೆಯ ಹೆಸರಲ್ಲಿ ಕೊಂಡೊಯ್ಯುತ್ತಾರೆ.  ನಂತರ  ಆ ಮರದ ದಿಮ್ಮಿಗಳನ್ನು ಟಿಂಬರ್ ಉದ್ದೇಶಕ್ಕೂ ಬಳಸಲಾಗುತ್ತದೆ. ಇದರಲ್ಲಿ ಅರಣ್ಯ  ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯವೂ ಸೇರಿದೆ  ಎನ್ನಲಾಗುತ್ತಿದೆ.

ಒಂದು ಕಡೆ ಹೀಗೆ ಮರಗಳ ಹನನ ನಡೆದರೆ, ಮತ್ತೊಂದು ಕಡೆ ಅರಣ್ಯ ಪ್ರದೇಶದಲ್ಲಿ ಬೆಳೆದಿರುವ ಹುಲ್ಲಿನ ತೆಂಡೆಗಳಿಗೆ ಬೆಂಕಿ ಇಡುವ ಪರಿಪಾಠವೂ ಇದೆ. ಕಳೆದ ವರ್ಷ ಹೀಗೆ ಹುಲ್ಲಿಗೆ ಬೆಂಕಿ ಇಟ್ಟ ಪರಿಣಾಮವಾಗಿ, ಹುಲ್ಲಿಗೆ ಹತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಅನೇಕ ಮರಗಳಿಗೂ ವ್ಯಾಪಿಸಿ, ಬುಡಗಳು ಸುಟ್ಟು ಹೋಗಿದ್ದವು. ಕೆಲವು ಮರಗಳ ಬುಡ ಕಪ್ಪಾಗಿರುವುದು ಈ ಪ್ರಕ್ರಿಯೆ ನಡೆದಿರುವುದಕ್ಕೆ ಸಾಕ್ಷಿಯಾಗಿದೆ.

‘ಅರಣ್ಯದಲ್ಲಿ ಬೆಂಕಿ ಗೆರೆ (ಫೈರ್ ಸ್ಟ್ರಿಪ್) ಹಾಕುವುದು ಇಲಾಖೆಯ ವಾರ್ಷಿಕ ಕಾರ್ಯಕ್ರಮ. ದನ ಮೇಯಿಸುವವರು, ಸೌದೆಗಾಗಿ ಅರಣ್ಯಕ್ಕೆ ಬರುವವರು ಹೀಗೆ ಹುಲ್ಲಿಗೆ ಬೆಂಕಿ ಇಡುತ್ತಾರೆ ಎಂದು ಕೇಳಿದ್ದೇನೆ. ಹೀಗೆ ಮಾಡುವುದರಿಂದ ಮುಂದಿನ ಮಳೆಗಾಲದಲ್ಲಿ ಹುಲ್ಲು ಸೊಂಪಾಗಿ ಬೆಳೆಯುತ್ತದೆ ಎಂಬ ನಂಬಿಕೆ ಆ ದನಗಾಹಿಗಳದ್ದಂತೆ. ಆದರೆ, ವಾಸ್ತವ  ಏನೆಂದರೆ, ಹುಲ್ಲಿಗೆ ಇಡುವ  ಈ ಬೆಂಕಿ ಅಕ್ಕಪಕ್ಕದ ಮರಗಳಿಗೂ ಹಬ್ಬಿ, ಹಾನಿ ಮಾಡುತ್ತದೆ. ಅದರ ಜತೆಗೆ ಉಪಕಾರಕ ಜೀವಿಗಳು ಸಾಯುತ್ತವೆ. ಸ್ವಲ್ಪ ವ್ಯತ್ಯಾಸವಾದರೆ ಸಣ್ಣ ಪುಟ್ಟ ಪ್ರಾಣಿಗಳೂ ಬೆಂಕಿ ಅನಾಹುತಕ್ಕೆ ಬಲಿಯಾಬಹುದು’ ಎಂದು ಪರಿಸರ ಕಾರ್ಯಕರ್ತ ಮಿಠಾಯಿ ಮುರುಗೇಶ್ ಆತಂಕ  ವ್ಯಕ್ತಪಡಿಸುತ್ತಾರೆ.

ಬೆಂಕಿ ಜ್ವಾಲೆಗೆ ಬೆಂದು ಹೋಗಿರುವ ಕೀಟಗಳು, ಹುಲ್ಲಿನ ತೆಂಡೆಗಳ ಸುತ್ತ ಇರುವ  ಪ್ರಾಣಿಗಳ ಹೆಜ್ಜೆ ಗುರುತು ಮತ್ತು ಅವುಗಳ ಹಿಕ್ಕೆಯನ್ನು ತೋರಿಸುವ ಮುರುಗೇಶ್, ‘ಇಂಥ  ಅನಾಹುತಕ್ಕೆ  ಬೆಂಕಿಯೇ ಕಾರಣ’ ಎಂದು ಹೇಳುತ್ತಾರೆ. 

ಇಂಥ ಕುರುಚಲು ಕಾಡಿನಲ್ಲಿ ಮರಗಳ ಸಂಖ್ಯೆ ಕಡಿಮೆ. ಅಂತಹುದರಲ್ಲಿ  ಹೀಗೆ ಮರಗಳಿಗೆ ಕತ್ತರಿ ಬೀಳುವುದರಿಂದ, ಕುರುಚಲು ಕಾಡು ಬಯಲು ಪ್ರದೇಶವಾಗುತ್ತದೆ. ಜೀವವೈವಿಧ್ಯಕ್ಕೆ ಧಕ್ಕೆಯಾಗುತ್ತದೆ. ಆಹಾರ ಸರಪಳಿಗೆ ದೊಡ್ಡ ಪೆಟ್ಟು ಬೀಳುತ್ತದೆ. ಮುಂದೊಂದು ದಿನ ಈ ಸುಂದರ ಅರಣ್ಯ ಪ್ರದೇಶಗಳು ಹುಲ್ಲುಗಾವಲಾಗಲು ಈ ಪ್ರಕ್ರಿಯೆ ಕಾರಣವಾಗುತ್ತವೆ. ಈ ಕೃತ್ಯಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಕುರಿಗಾಹಿಗಳ ಕೆಲಸ ?
ಮೇಕೆ ಅಥವಾ ಕುರಿ ಕಾಯು ವವರ ಕೆಲಸ ಇದು. ಮರವನ್ನು ಕಡಿದು, ರೆಂಬೆಯಲ್ಲಿ ಎಲೆಗಳನ್ನು ಮೇಕೆ ಕುರಿಗಳಿಗೆ ತಿನ್ನಿಸಿ, ಉಳಿ ದಿದ್ದನ್ನು ಅಲ್ಲೇ ಬಿಟ್ಟು ಹೋಗಿ ರಬಹುದು. ಇಂಥ ಕುರಿಗಾಹಿ ಗಳಿಂದ ತುರ್ತಾಗಿ ಮರಗಳನ್ನು ರಕ್ಷಿಸಬೇಕಾಗಿದೆ ಎಂದು ಪರಿಸರ ಕಾರ್ಯಕರ್ತ ಡಾ.ಎಚ್.ಕೆ.ಎಸ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

* ‌‌ಇದು ಮರ ಕಡಿಯುವವರ ಕೆಲಸ.  ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ.
-ಚಂದ್ರಶೇಖರ ನಾಯಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಚಿತ್ರದುರ್ಗ

ಮುಖ್ಯಾಂಶಗಳು

* ಹತ್ತಾರು ಮರಗಳಿಗೆ ಕೊಡಲಿ ಪೆಟ್ಟು
* ಒಂದೇ ರೀತಿ, ಒಂದೇ ಜಾತಿಯ ಮರಗಳು
* ಹುಲ್ಲಿಗೆ ಬೆಂಕಿ ಇಟ್ಟು, ಮರವನ್ನೂ ಸುಡುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.