ADVERTISEMENT

ಚಳ್ಳಕೆರೆ: ನೀರಿಗಾಗಿ ಕಾಯುವುದೇ ಕಾಯಕ

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:14 IST
Last Updated 19 ಮೇ 2017, 5:14 IST

ಚಳ್ಳಕೆರೆ: ಸಾರ್ವಜನಿಕ ನಲ್ಲಿಯ ಎದುರು ಸಾಲು ಸಾಲು ಕೊಡಗಳು, ಗಂಟೆಗಟ್ಟಲೆ ನೀರಿಗಾಗಿ ಕಾಯುವ ಪರಿಸ್ಥಿತಿ, ಸಂಜೆಯಿಂದ ಮುಂಜಾನೆವರೆಗೆ ನೀರು ಹಿಡಿಯುವುದೇ ಕಾಯಕ...

ತಾಲ್ಲೂಕಿನ ತಳಕು ಹೋಬಳಿ ಮನ್ನೇಕೋಟೆ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಿದ್ದು, ಒಂದೆರಡು ಕೊಡ ನೀರಿಗಾಗಿ ದಿನನಿತ್ಯ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಉಂಟಾಗಿದೆ.

ಮನ್ನೇಕೋಟೆ ಗ್ರಾಮದಲ್ಲಿ 2ಸಾವಿರ ಜನಸಂಖ್ಯೆ ಇದೆ. ಪರಿಶಿಷ್ಟ ಪಂಗಡ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಈ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ಗ್ರಾಮ ಪಂಚಾಯ್ತಿ ವಿಫಲವಾಗಿದೆ. ಇದರಿಂದ ಸ್ಥಳೀಯರಿಗೆ  ನೀರಿಗಾಗಿ ಕಾಯುವುದೇ ಕಾಯಕವಾಗಿದೆ ಎಂದು ಉಪನ್ಯಾಸಕ ಬಿ.ಕುಮಾರ ತಿಳಿಸಿದ್ದಾರೆ.

ADVERTISEMENT

ಗ್ರಾಮಸ್ಥರಿಗೆ ನೀರು ಪೂರೈಸಲು ಕಿರುನೀರು ಸರಬರಾಜು ಯೋಜನೆ ಅಡಿಯಲ್ಲಿ ಮಿನಿಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ, ಟ್ಯಾಂಕ್‌ನಲ್ಲಿ ನೀರು ದೊರೆಯುತ್ತಿಲ್ಲ. ಬದಲಾಗಿ ಗ್ರಾಮದ ಕೊಳವೆ ಬಾವಿಯೊಂದಕ್ಕೆ ಪೈಪ್‌ ಜೋಡಿಸಿದ್ದು ಎರಡು ಕಡೆ ಟಿ–ವಾಲ್‌ ಅಳವಡಿಸಿ ನೀರು ಬಿಡಲಾಗುತ್ತಿದೆ.

ಇಲ್ಲಿ ನೀರು ಹಿಡಿಯಲು ಸಂಜೆ 6 ಗಂಟೆಯಿಂದ ಮುಂಜಾನೆ 4 ಗಂಟೆವರೆಗೆ  ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸಂಜೆ ಮತ್ತು ರಾತ್ರಿ ಸರದಿಯಲ್ಲಿ ನಿಂತು ನೀರನ್ನು ತುಂಬಿಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ಗ್ರಾಮದ ಎಂ.ಬಿ.ಚಂದ್ರಣ್ಣ.

ಗಂಟೆಗಟ್ಟಲೆ ಕಾದರೂ ಒಂದು ಕುಟುಂಬಕ್ಕೆ 2ರಿಂದ4 ಕೊಡ ಮಾತ್ರ ನೀರು ದೊರೆಯುತ್ತಿದೆ. ಕೆಲವು ಕುಟುಂಬಗಳಲ್ಲಿ 10ರಿಂದ15ಜನ ಸದಸ್ಯರಿದ್ದು, ಮನೆಗಳಲ್ಲಿ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎನ್ನುತ್ತಾರೆ ಗ್ರಾಮದ ಯುವಕ ಇ.ಸಿದ್ದೇಶ.

ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಒತ್ತಾಯಿಸಲಾಗಿದೆ. ಟ್ಯಾಂಕರ್‌ ನೀರು ಒದಗಿಸಲು ಮನವಿ ಸಲ್ಲಿಸಲಾಗಿದೆ. ಆದರೆ ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರಾದ ಮಾರಣ್ಣ, ಬೊಮ್ಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.