ADVERTISEMENT

‘ಚುನಾವಣೆಯಲ್ಲಿ ಕೀಳು ಶಬ್ದ ಬಳಕೆ ಸಲ್ಲದು’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2018, 7:15 IST
Last Updated 15 ಏಪ್ರಿಲ್ 2018, 7:15 IST

ಹಿರಿಯೂರು: ಚುನಾವಣೆ ಸಂದರ್ಭದಲ್ಲಿ ಟೀಕೆಗಳು ಆರೋಗ್ಯಕರ ವಾಗಿರಬೇಕು. ಮಹಿಳೆಯರನ್ನು, ಶೋಷಿತ ಸಮುದಾಯದವರನ್ನು, ಮಠಾಧೀಶರನ್ನು ಕೀಳು ಶಬ್ದಗಳಲ್ಲಿ ನಿಂದಿಸುವ ಪ್ರವೃತ್ತಿ ಸಲ್ಲದು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಗೀತಾ ನಾಗಕುಮಾರ್ ಎಚ್ಚರಿಸಿದರು.

ವಿಡಿಯೊವೊಂದರಲ್ಲಿ ಮಾದಿಗ ಸಮುದಾಯದ ಸಚಿವರು, ಶಾಸಕರು, ಸಂಸದರು, ಸ್ವಾಮೀಜಿಗಳ ಭಾವಚಿತ್ರಗಳನ್ನು ಒಳಗೊಂಡ ಕ್ಯಾಲೆಂಡರ್ ಒಂದನ್ನು ಸುಡುತ್ತ ಅಶ್ಲೀಲ ಭಾಷೆಯಲ್ಲಿ ಟೀಕಿಸುತ್ತಿರುವ ಚಿತ್ರವೊಂದು ವೈರಲ್ ಆಗಿರುವುದರ ವಿರುದ್ಧ ಶುಕ್ರವಾರ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸುಡುವುದು ನಮ್ಮ ಸಂಸ್ಕೃತಿಯಲ್ಲ. ವೈರಿಗಳನ್ನೂ ಸ್ನೇಹದಿಂದ ಕಾಣುವ ನಮ್ಮ ನಾಡಿನಲ್ಲಿ, ಅತ್ಯಂತ ಕೀಳು ಭಾಷೆಯಲ್ಲಿ ಮಾದಿಗ ಜಾತಿಯನ್ನು ನಿಂದನೆ ಮಾಡಿರುವ, ಶಾಸಕರ ತಾಯಿ, ಪತ್ನಿಯ ಬಗ್ಗೆ ಕೀಳು ಭಾಷೆಯಲ್ಲಿ ಟೀಕಿಸಿರುವುದು ಹೇಯ ಕೆಲಸ. ಇದು ಅವರ ವಿಕೃತ ಮನಸ್ಸನ್ನು ತೋರಿಸುತ್ತದೆ. ದಶಕಗಳ ಕಾಲ ಹಿರಿಯೂರು ಕ್ಷೇತ್ರದಲ್ಲಿ ಕಾಪಾಡಿಕೊಂಡು ಬಂದಿದ್ದ ಸಂಸ್ಕೃತಿಗೆ ಇದರಿಂದ ಚ್ಯುತಿ ಬಂದಂತಾಗಿದೆ. ವೈಯಕ್ತಿಕ ನಿಂದನೆ ಬದಲಿಗೆ, ಅಭಿವೃದ್ಧಿ ಆಧರಿಸಿ ಟೀಕೆ ಮಾಡಿದರೆ ಸ್ವಾಗತಿಸಬಹುದು. ವಿಡಿಯೊದಲ್ಲಿರುವುದನ್ನು ಮಹಿಳೆಯರು ನೋಡುವಂತಿಲ್ಲ, ಕೇಳುವಂತಿಲ್ಲ. ಇಂತಹ ಸಂಸ್ಕೃತಿ ನಮಗೆ ಬೇಡ. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ದೊಡ್ಡಮಟ್ಟದ ಪ್ರತಿಭಟನೆಗೆ ನಾವು ಮುಂದಾಗಿಲ್ಲ’ ಎಂದು ಅವರು ಹೇಳಿದರು.

ADVERTISEMENT

ದಲಿತ ಸಂಘಟನೆಯ ಮುಖಂಡ ಬ್ಯಾಡರಹಳ್ಳಿ ಚಿಕ್ಕಣ್ಣ ಮಾತನಾಡಿ, ‘ಚುನಾವಣೆಯ ಸಂದರ್ಭದಲ್ಲಿ ಸಮಾಜದ ಶಾಂತಿ ಕದಡಬಾರದು ಎಂದು ಸುಮ್ಮನಿದ್ದೇವೆ. ಹಿರಿಯೂರು ಕ್ಷೇತ್ರದಲ್ಲಿ ಇಂತಹ ಕಿಡಿಗೇಡಿ ಕೃತ್ಯಗಳನ್ನು ನಡೆಸುವವರ ಮೇಲೆ ಚುನಾವಣಾಧಿಕಾರಿಗಳು ವಿಶೇಷ ಎಚ್ಚರಿಕೆ ವಹಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಶಶಿಕಲಾ ಸುರೇಶ್ ಬಾಬು, ತಾಲ್ಲೂಕು ಪಂಚಾಯ್ತಿ ಸದಸ್ಯೆ ತಿಪ್ಪಮ್ಮ ನಾಗರಾಜ್, ದಲಿತ ಮುಖಂಡರಾದ ಶಿವು, ವಿರೂಪಾಕ್ಷಯ್ಯ, ವೀರಭದ್ರಪ್ಪ, ರಂಗಪ್ಪ, ನಂದಕುಮಾರ್, ಜ್ಞಾನೇಶ್, ನಾಗಕುಮಾರ್, ಭೂತೇಶ್, ಹರೀಶ್ ಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.