ADVERTISEMENT

ಜಾತಿ ಪದ್ಧತಿ ದೇಶದ ಬಹುದೊಡ್ಡ ಆತಂಕ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 7:06 IST
Last Updated 23 ಏಪ್ರಿಲ್ 2017, 7:06 IST

ಚಿತ್ರದುರ್ಗ: ‘ಜಾತಿ ಪದ್ಧತಿ ನಮ್ಮ ದೇಶದ ಬಹುದೊಡ್ಡ ಆಂತಕದ ವಿಚಾರ. ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಇದನ್ನು ಬೇರು ಸಹಿತ ಕಿತ್ತು ಹಾಕಬೇಕು’ ಎಂದು ಕವಿ ಡಾ.ಜಿ.ಎಸ್.ಸಿದ್ದಲಿಂಗಯ್ಯು ಹೇಳಿದರಯ.ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಶನಿವಾರ ನಡೆದ ಸಾಂಸ್ಕೃತಿಕ, ಕ್ರೀಡೆ, ಎನ್‌ಸಿಸಿ, ಎನ್‌ಎಸ್ಎಸ್‌, ಯುವ ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ ಮತ್ತು ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ಡಾ.ಅಂಬೇಡ್ಕರ್ ವಿಚಾರಧಾರೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಅವರು ಮಹಿಳೆಯರು ಸೇರಿದಂತೆ ಎಲ್ಲ ಶೋಷಿತರ ಧ್ವನಿಯಾಗಿ ಹೋರಾಡಿದ್ದರು. ಹಾಗಾಗಿ ಅವರು ದಲಿತ ಸಮುದಾಯಕ್ಕಷ್ಟೇ ಅಲ್ಲದೇ, ಶೋಷಿತ ವರ್ಗಗಳಿಗೂ ನಾಯಕರಾಗಿದ್ದಾರೆ’ ಎಂದು ವಿವರಿಸಿದರು.‘ವೈಜ್ಞಾನಿಕ ಯುಗದಲ್ಲೂ ಮೂಢ ನಂಬಿಕೆಗಳು ರಾರಾಜಿಸುತ್ತಿವೆ. ಇದರ ವಿರುದ್ಧ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಈ ಮೂಲಕ ಸಮಾಜದ ಸ್ವಾಸ್ಥ್ಯ ಕದಡುವವರವಿರುದ್ಧ ಹೋರಾಡಬೇಕು’ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ‘ಬರಗಾಲವಿದ್ದರೂ ಸಂಸ್ಕೃತಿ ವಿಚಾರದಲ್ಲಿ ಈ ಜಿಲ್ಲೆ ಶ್ರೀಮಂತವಾಗಿದೆ. ಇದಕ್ಕೆ ಸಾಂಸ್ಕೃತಿಕ ಹಬ್ಬವೇ ನಿದರ್ಶನ’ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ.ಎಲ್. ಸುಧಾಕರ ಮಾತನಾಡಿ, ‘ಪಠ್ಯ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು’ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ADVERTISEMENT

ಬೀಜ ನಿಗಮದ ಸಹಾಯಕ ಪ್ರಧಾನ  ವ್ಯವಸ್ಥಾಪಕ ಬಿ.ತಿಮ್ಮರಾಜು, ಬೆಂಗಳೂರು ವಿಶ್ವವಿದ್ಯಾಲಯದ  ಡಾ.ಬಿಆರ್.ಅಂಬೇಡ್ಕರ್ ಅಧ್ಯಯನ  ಮತ್ತು ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ.ಶಾರದಾ,  ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ.ಸಿ.ಬಿ.ಪ್ರೇಮಾಪಲ್ಲವಿ, ಐಕ್ಯುಎಸಿ ಸಂಚಾಲಕ ಪ್ರೊ.ಜಿ ಡಿ ಸುರೇಶ  ವೇದಿಕೆಯಲ್ಲಿದ್ದರು. 
ಡಾ.ಪ್ರೇಮಪಲ್ಲವಿ ಸ್ವಾಗತಿಸಿದರು. ಮುರಾರ್ಜಿ ತಂಡ ಪ್ರಾರ್ಥಿಸಿದರು. ಉಪನ್ಯಾಸಕ ಅಜಯ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ವಂದಿಸಿದರು.

ಬಹುಮಾನ ವಿತರಣೆ: ಕಾರ್ಯಕ್ರಮದಲ್ಲಿ 2016–17ನೇ ಸಾಲಿನ ವಿದ್ಯಾರ್ಥಿಗಳ ಬರಹಗಳನ್ನೊಳಗೊಂಡ ‘ಕಲಾಸಿರಿ’ ವಾರ್ಷಿಕ ಸಂಚಿಕೆಯನ್ನು ಸಿದ್ದಲಿಂಗಯ್ಯ ಬಿಡುಗಡೆಗೊಳಿಸಿದರು.ವಿವಿಧ ಕ್ರೀಡೆಗಳಲ್ಲಿ ದಾವಣಗೆರೆ ವಿಶ್ವವಿದ್ಯಾಲಯವನ್ನು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿದ 22 ವಿದ್ಯಾಥಿಗಳನ್ನು ಸನ್ಮಾನಿಸಿ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಉತ್ತಮ ಸೇವೆ ಸಲ್ಲಿಸಿದ ಎನ್‌ಎಸ್‌ಎಸ್‌ ಶಿಬಿರಾರ್ಥಿಗಳಿಗೆ ಕಾರ್ಯಕ್ರಮಾಧಿಕಾರಿ ಡಾ.ಸಿ.ಚನ್ನಕೇಶವಮತ್ತು ಡಾ.ಅಜ್ಜಪ್ಪ ಬಹುಮಾನ ವಿತರಿಸಿದರು. ಯುವ ರೆಡ್ ಕ್ರಾಸ್ ಸಂಚಾಲಕ ಡಾ.ಎಚ್. ಬಸವರಾಜ್  ರಕ್ತದಾನ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ  ವಿತರಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ರಾಮರಾವ್, ದಾವಣಗೆರೆ  ಬಾಪೂಜಿ ಎಂಬಿಎ ಕಾಲೇಜಿನಲ್ಲಿ ನಡೆದ ಯುವಜನೋತ್ಸವದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.