ADVERTISEMENT

ಜಾನುವಾರಿಗೆ ನೀರಿನ ತೊಟ್ಟಿ: ವಿನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 6:11 IST
Last Updated 22 ಮಾರ್ಚ್ 2017, 6:11 IST

ಚಳ್ಳಕೆರೆ:  ಬರದಲ್ಲಿ ಸದಾ ತುಂಬಿರುವ ನೀರಿನ ತೊಟ್ಟಿ,  ಅಭಾವದ ನಡುವೆಯೂ ಕೊಳವೆ ಬಾವಿಯ ಅಂತರ್ಜಲದ ಸಮರ್ಪಕ ಬಳಕೆ,  ಬಿಸಿಲಿನ ಧಗೆಗೆ ದಣಿದ ಜಾನುವಾರುಗಳ ಹಿಂಡು ನೀರು ಕುಡಿಯುವ ದೃಶ್ಯ.

ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೊರೆಕೋಲ ಮ್ಮನಹಳ್ಳಿ, ಚೌಳಕೆರೆ, ಗುಂತ ಕೋಲಮ್ಮ ನಹಳ್ಳಿ, ಮಲೆಬೋರನಹಳ್ಳಿ ಮತ್ತು ಅಬ್ಬೇನಹಳ್ಳಿ ಗ್ರಾಮಗಳಲ್ಲಿ ತಾಲ್ಲೂಕು ಪಂಚಾಯ್ತಿ ನಿರ್ಮಿಸಿರುವ ನೀರಿನ ತೊಟ್ಟಿಗಳು ಜಾನುವಾರುಗಳ ದಾಹ ನೀಗಿಸುವಲ್ಲಿ ಯಶಸ್ವಿಯಾಗಿವೆ.

ಅಬ್ಬೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಶುಪಾಲನೆ ಮತ್ತು ಕುರಿಸಾಕಣಿಕೆಯನ್ನು ನಂಬಿ ಸಾವಿರಾರು ಕುಟುಂಬಗಳು ಜೀವನ ನಿರ್ವಹಿಸುತ್ತಿವೆ. ಇಂತಹ ಕುಟುಂಬಗಳು ತಮ್ಮ ಜಾನು ವಾರು ಮತ್ತು ಕುರಿಗಳನ್ನು ಸಮೀಪ ವಿರುವ ಗೋಮಾಳಗಳಲ್ಲಿ ಮೇಯಿಸುವ ಪದ್ಧತಿ ಇದೆ. ಆದರೆ, ತಾಲ್ಲೂಕಿನಾದ್ಯಂತ ಮಳೆ ಅಭಾವದಿಂದ ನೀರು ದೊರೆಯದೆ ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.

ನೀರಿನ ತೊಟ್ಟಿಗಳನ್ನು ನಿರ್ಮಿಸುವ ಮೂಲಕ ಕುರಿ, ಮೇಕೆ ಮತ್ತು ರಾಸುಗಳ ದಾಹ ನೀಗಿಸು ಕಾರ್ಯ ವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಸಂಯೋಜಕ ಪ್ರವೀಣ್‌.

ಉದ್ಯೋಗ ಖಾತ್ರಿಯಡಿ ಈ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಅಬ್ಬೇನ ಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ  ₹ 45ಸಾವಿರ ವೆಚ್ಚದ 5 ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಈ ತೊಟ್ಟಿಗಳನ್ನು ಹಸು, ಕುರಿ ಮತ್ತು ಮೇಕೆಗಳಿಗೆ ನೀರು ಒದಗಿಸಲು ಬಳಸಲಾಗುತ್ತಿದೆ. ಇಂತಹ ವಿನೂತನ ಕಾರ್ಯಕ್ಕೆ ಚಾಲನೆ ನೀಡಿರುವ ತಾಲ್ಲೂಕು ಪಂಚಾಯ್ತಿ ಕ್ರಮಕ್ಕೆ  ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಅಬ್ಬೇನಹಳ್ಳಿ ಗ್ರಾಮ ಪಂಚಾಯ್ತಿಯ ಗ್ರಾಮಗಳ ಹೊರವಲಯದ ರಸ್ತೆ ಪಕ್ಕಗಳಲ್ಲಿ 2 ಅಡಿ ಅಗಲ ಮತ್ತು 25 ಅಡಿ ಉದ್ದದ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಗೋಮಾಳ ಹತ್ತಿರವಿರುವುದರಿಂದ ಜಾನುವಾರು ಮತ್ತು ಕುರಿಗಳಿಗೆ ತ್ವರಿತವಾಗಿ ನೀರನ್ನು ಒದಗಿಸಿದಂತಾಗುತ್ತದೆ. ನೀರಿನ ತೊಟ್ಟಿಗಳ ಉಸ್ತುವಾರಿಯನ್ನು ಸ್ಥಳೀಯ ಗ್ರಾಮ ಪಂಚಾಯ್ತಿ ನಿರ್ವಹಿಸುತ್ತಿದೆ.

ಗ್ರಾಮದ ಟ್ಯಾಂಕರ್‌ ಮೂಲಕ ಪ್ರತ್ಯೇಕ ಪೈಪ್‌ಲೈನ್‌ ಅಳವಡಿಸಿ ನೀರು ಸಂಗ್ರವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ನೀರಿನ ತೊಟ್ಟಿಗಳು ಸದಾ ತುಂಬಿರುವಂತೆ ಎಚ್ಚರವಹಿಸಲಾಗುತ್ತದೆ. ಇದರಿಂದ ಪಶುಪಾಲಕರು ಮತ್ತು ಕುರಿಗಾಹಿಗಳಲ್ಲಿ ಸಂತಸ ಮೂಡಿದೆ ಎನ್ನುತ್ತಾರೆ  ಕುರಿಸಾಕಣೆಯಲ್ಲಿ ತೊಡಗಿರುವ ಚನ್ನಬಸವಯ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.