ADVERTISEMENT

ಜೀವನಾನುಭವದ ಸಾಹಿತ್ಯ ರಚಿಸಿದ ಡಿವಿಜಿ

ಸರ್ಕಾರಿ ಬಿ.ಇಡಿ ಕಾಲೇಜಿನ ಉಪನ್ಯಾಸದಲ್ಲಿ ಶಿವಮೊಗ್ಗದ ಜಿ.ಎಸ್.ನಟೇಶ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 9:29 IST
Last Updated 24 ಏಪ್ರಿಲ್ 2018, 9:29 IST

ಚಿತ್ರದುರ್ಗ: ಸಾಹಿತಿ ಡಿ.ವಿ.ಗುಂಡಪ್ಪ ಅವರು, ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದವರಲ್ಲ. ಆದರೆ ಅವರು ರಚಿಸಿದ ಜೀವನಾನುಭವದ ಸಾಹಿತ್ಯವೇ ಅವರನ್ನು ಮೇರು ವ್ಯಕ್ತಿಯನ್ನಾಗಿ ರೂಪಿಸಿತು ಎಂದು ಶಿವಮೊಗ್ಗದ ಕಗ್ಗ ವಾಚಕ ಸಂಸ್ಕೃತ ಶಿಕ್ಷಕ ಜಿ.ಎಸ್.ನಟೇಶ್ ನಟೇಶ್ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ಮಂಕುತಿಮ್ಮನ ಕಗ್ಗದಲ್ಲಿ ಜೀವನ ಮೌಲ್ಯಗಳು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಿವಿಜಿ ಅವರ ಸಾಹಿತ್ಯದಲ್ಲಿ ಜೀವನಾನುಭವದ ವಿಚಾರಗಳಿವೆ. ಅವರ ಪ್ರತಿ ಕಗ್ಗವೂ ಜೀವನದ ಮೌಲ್ಯಗಳನ್ನು ತಿಳಿಸುತ್ತವೆ’ ಎಂದು ಹೇಳುತ್ತಾ, ಡಿವಿಜಿಯವರ ಮಂಕುತಿಮ್ಮನ ಕಗ್ಗದ ಪದ್ಯಗಳನ್ನು ವಾಚಿಸುವ ಜತೆಗೆ, ಅವುಗಳ ತಾತ್ಪರ್ಯವನ್ನು ನಟೇಶ್ ವಿವರಿಸಿದರು.

ADVERTISEMENT

‘ಗುರು ಎಂದರೆ ದೇಶಕ್ಕೆ ನಾಯಕ ಇದ್ದಂತೆ. ಒಬ್ಬ ನಾಯಕ ಮನಸ್ಸು ಮಾಡಿದರೆ ದೇಶಕ್ಕೆ ಮತ್ತಷ್ಟು ಉತ್ತಮ ನಾಯಕರನ್ನು ಉಡುಗೊರೆಯಾಗಿ ಕೊಡಬಹುದು. ಗುರುವಿಗೆ ಅಂಥ ಅದ್ಭುತವಾದ ಶಕ್ತಿ ಇದೆ. ಆದರೆ ಆ ಶಕ್ತಿ ಅಹಂಕಾರವಾಗಬಾರದು. ಗುರುವಿಗೆ ವಿದ್ಯೆ ಜತೆಗೆ, ವಿನಯ ಇರಬೇಕು. ಇಲ್ಲದಿದ್ದರೆ ಎಷ್ಟು ಡಿಗ್ರಿ ಪಡೆದರೂ ಪ್ರಯೋಜನವಿಲ್ಲ’ ಎಂದರು.

‘ಒಡೆದ ಮನಸ್ಸುಗಳನ್ನು ಒಂದುಗೂಡಿಸುವುದು ಅಧ್ಯಾಪಕರ ಕೆಲಸವಾಗಬೇಕು. ಅಂಥ ಮನಸ್ಥಿತಿ ರೂಪಿಸಿಕೊಳ್ಳಲು ಅಧ್ಯಯನದಲ್ಲಿ ತೊಡಗಬೇಕು. ನಿರಂತರ ಅಧ್ಯಯನದಿಂದ ಮಾತ್ರ ಮನುಷ್ಯ ಪ್ರಬುದ್ಧನಾಗಲು ಸಾಧ್ಯ’ ಎನ್ನುತ್ತಾ ಡಿವಿಜಿಯವರ ಕೆಲವು ಕಗ್ಗಗಳನ್ನು ಉದಾಹರಿಸಿದರು.

‘ಬೋಧನೆಯಲ್ಲಿ ಅಧ್ಯಾಪಕರು ಕರ್ತವ್ಯ ಪ್ರಜ್ಞೆ ಇಟ್ಟುಕೊಳ್ಳಬೇಕು. ನಿಮ್ಮ ವರ್ತನೆ ಸರಿಯಾಗಿಲ್ಲದಿದ್ದರೆ ಸಮಾಜದಲ್ಲಿ ಆತ್ಮಗೌರವ ಕಡಿಮೆಯಾಗುತ್ತದೆ. ಸದಾ ಓದುವ ಹವ್ಯಾಸ ಮೈಗೂಡಿಸಿಕೊಂಡಾಗ ಮಾತ್ರ ಪ್ರಶಿಕ್ಷಣಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡಬಹುದು’ ಎಂದು ಅಭಿಪ್ರಾಯಪಟ್ಟರು.

‘ದೇಶಭಕ್ತಿ ನಿಮ್ಮಲ್ಲಿ ಇರಬೇಕು.ಆಗ ಮಾತ್ರ ವಿಶ್ವಕ್ಕೆ ಬೆಳಕು ನೀಡಬಹುದು. ಪ್ರಾಣಿ ಪಕ್ಷಿಗಳು ಧರ್ಮವನ್ನು ಮೀರುವುದಿಲ್ಲ. ಆದರೆ ಮನುಷ್ಯ ಒಬ್ಬೊಬ್ಬ ಒಂದೊಂದು ಜಾತಿ, ಧರ್ಮದ ಕಟ್ಟುಪಾಡುಗಳನ್ನು ಹಾಕಿಕೊಂಡಿದ್ದಾನೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಜಾತಿ ಭೇದವನ್ನು ಬಿತ್ತಬಾರದು. ಮತ್ತೊಬ್ಬರು ನಿಮ್ಮನ್ನು ಟೀಕಿಸುವಂತೆ ಬದುಕಬಾರದು ಎಂದು ಅಧ್ಯಾಪಕರುಗಳಿಗೆ ತಿಳಿಸಿದರು.

‘ಎಲ್ಲಾ ಧರ್ಮಗಳು ಒಂದೇ ಎನ್ನುವುದನ್ನು ಮಕ್ಕಳಿಗೆ ತಿಳಿಸಿ. ಇತ್ತೀಚಿನ ದಿನಗಳಲ್ಲಿ ಪ್ರಶಸ್ತಿಗಾಗಿ ಶಿಕ್ಷಕರು ಲಾಬಿ, ಶಿಫಾರಸುಗಳಲ್ಲಿ ತೊಡಗಿರುವುದು ಅತ್ಯಂತ ನೋವಿನ ಸಂಗತಿ. ವಿದ್ಯಾರ್ಥಿಗಳೇ ನಿಮಗೆ ಪ್ರಶಸ್ತಿ ನೀಡಬೇಕು. ಅದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಯಾವುದೂ ಇಲ್ಲ’ ಎಂದರು.

ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು, ರೀಡರ್‌ಗಳಾದ ರೇವಣಸಿದ್ದಪ್ಪ, ಎಸ್.ಕೆ.ಬಿ.ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.