ADVERTISEMENT

ಟಿಪ್ಪು ಜಯಂತಿ ಬೆಳಿಗ್ಗೆ ಆಚರಿಸೋಣ: ಜ್ಯೋತ್ಸ್ನಾ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 6:02 IST
Last Updated 6 ನವೆಂಬರ್ 2017, 6:02 IST

ಚಿತ್ರದುರ್ಗ: ಟಿಪ್ಪು ಜಯಂತಿಯನ್ನು ಸರ್ಕಾರದ ಆದೇಶದ ಮೇರೆಗೆ ನ. 10 ರಂದು ಬೆಳಿಗ್ಗೆ 9 ಅಥವಾ 10 ಗಂಟೆಗೆ ಆಚರಿಸಲಾಗುವುದು. ಇದಕ್ಕೆ ಮುಸ್ಲಿಂ ಸಮುದಾಯದ ಎಲ್ಲ ಮುಖಂಡರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮನವಿ ಮಾಡಿದರು. ಇಲ್ಲಿ ಭಾನುವಾರ ಟಿಪ್ಪು ಜಯಂತಿ ಅಂಗವಾಗಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಎಲ್ಲ ಮಹನೀಯರ ಜಯಂತಿ ಬೆಳಿಗ್ಗೆ ಸಮಯದಲ್ಲಿ ಆಚರಿಸಬೇಕು. ಸಂಜೆ ಶೋಕಾಚರಣೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದನ್ನು ನಾವು ಪಾಲಿಸಲೇಬೇಕು’ ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖಂಡ ಮುರುಘಾರಾಜೇಂದ್ರ ಒಡೆಯರ್, ‘ಸರ್ಕಾರದ ಆದೇಶ ಪಾಲಿಸಬೇಕಾದ್ದು ನಿಮ್ಮ ಕರ್ತವ್ಯ ನಿಜ. ಆದರೆ, ಮುಸ್ಲಿಂ ಸಮುದಾಯದವರು ಪ್ರತಿ ಶುಕ್ರವಾರ ಸ್ನಾನ ಮಾಡಿದ ತಕ್ಷಣ ಮಸೀದಿಗಳಿಗೆ ಹೋಗಿ ಪ್ರಾರ್ಥನೆ ಸಲ್ಲಿಸುವುದು ಸಾಮಾನ್ಯ.

ನ.10 ಶುಕ್ರವಾರ ಬಂದಿರುವ ಕಾರಣ ಪ್ರಾರ್ಥನೆ ಬಿಟ್ಟು ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡರೆ, ಕಾರ್ಯಕ್ರಮ ಮುಗಿದ ನಂತರ ಮತ್ತೊಮ್ಮೆ ಸ್ನಾನ ಮಾಡಿ ಪ್ರಾರ್ಥನೆಗೆ ಹೋಗಲು ಖಂಡಿತ ಸಾಧ್ಯವಿಲ್ಲ. ಅಲ್ಲದೇ ಇದನ್ನು ದೊಡ್ಡ ಹಬ್ಬವಾಗಿ ಆಚರಿಸಲು ಉದ್ದೇಶಿಸಿದ್ದಾರೆ. ಆದ್ದರಿಂದ ಸಂಜೆ 4ರ ನಂತರ ಕಾರ್ಯಕ್ರಮ ಪ್ರಾರಂಭಿಸಿ’ ಎಂದು ಮನವಿ ಮಾಡಿದರು.

ADVERTISEMENT

ನಗರಸಭೆ ಸದಸ್ಯ ಸರ್ದಾರ್ ಅಹಮ್ಮದ್ ಪಾಷಾ, ಜಾಮಿಯಾ ಮಸೀದಿ ಅಧ್ಯಕ್ಷ ಎಂ.ಸಿ.ಒ.ಬಾಬು, ಮುಸ್ಲಿಂ ಸಮುದಾಯದ ಮುಖಂಡ ಅನ್ವರ್ ಸಾಬ್ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ‘ಈ ಹಿಂದಿನ ಸಭೆಯಲ್ಲಿ ತೀರ್ಮಾನವಾದಂತೆ ಮಸೀದಿಗಳಲ್ಲಿ ಸಂಜೆ 4ಕ್ಕೆ ಟಿಪ್ಪು ಜಯಂತಿ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದೇವೆ. ಬೆಳಿಗ್ಗೆ ಜಯಂತಿ ಆಚರಿಸಿದರೆ ಮೆರವಣಿಗೆ, ಸಭಾ ಕಾರ್ಯಕ್ರಮಕ್ಕೆ ಜನರು ಬರುವುದು ಕಷ್ಟವಾಗಲಿದೆ. ಸರ್ಕಾರ ಹೇಳಿದಂತೆ ಬೆಳಿಗ್ಗೆ ಆಚರಿಸಲು ಆಗುವುದಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಷಿ ಮಾತನಾಡಿ, ‘ರಾಜ್ಯದಾದ್ಯಂತ ಏಕಕಾಲಕ್ಕೆ 270 ಕಡೆಗಳಲ್ಲಿ ಟಿಪ್ಪು ಜಯಂತಿ ಬೆಳಿಗ್ಗೆಯೇ ಆಚರಿಸಲಾಗುತ್ತಿದೆ. ನೀವು ನೀಡುತ್ತಿರುವ ಕಾರಣವನ್ನು ಬೇರೆ ಯಾವ ಜಿಲ್ಲೆಗಳಲ್ಲಿಯೂ ನೀಡುತ್ತಿಲ್ಲ. ಚಿತ್ರದುರ್ಗದ ಮುಖಂಡರು ಮಾತ್ರ ಏಕೆ ಈ ರೀತಿ ಹೇಳುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಅಧಿಕಾರಿಗಳು ಮುಸ್ಲಿಂ ಮುಖಂಡರಿಗೆ ಮನವರಿಕೆ ಮಾಡಿಕೊಡಲು ಒಂದು ಗಂಟೆ ಪ್ರಯತ್ನಿಸಿದರು ಕೂಡ ಯಾರೂ ಒಪ್ಪಲಿಲ್ಲ.
‘ಸಂಜೆ 4ರ ನಂತರವೇ ಆಚರಿಸಬೇಕು. ಈ ವಿಚಾರವಾಗಿ ಸರ್ಕಾರದಿಂದ ಅನುಮತಿ ಪಡೆಯಬೇಕು. ಒಂದುವೇಳೆ ಸರ್ಕಾರದ ಆದೇಶದಂತೆ ಬೆಳಿಗ್ಗೆಯೇ ಆಚರಿಸಿದರೆ ಅಧಿಕಾರಿಗಳೇ ಪಾಲ್ಗೊಳ್ಳಲಿ. ನಾವ್ಯಾರೂ ಭಾಗವಹಿಸುವುದು ಬೇಡ’ ಎಂಬ ತೀರ್ಮಾನಕ್ಕೆ ಬಂದರು.

ಜಿಲ್ಲಾ ಪಂಚಾಯ್ತಿ ಸಿಇಒ ಪಿ.ಎನ್.ರವೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ರಾಘವೇಂದ್ರ, ತಹಶೀಲ್ದಾರ್ ಮಲ್ಲಿಕಾರ್ಜುನ್, ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಉಪಾಧ್ಯಕ್ಷ ಮಲ್ಲೇಶಪ್ಪ, ಟಿಪ್ಪು ವೇದಿಕೆ ರಾಜ್ಯಾಧ್ಯಕ್ಷ ಖಾಸಿಂಅಲಿ, ಉದ್ಯಮಿ ತಾಜ್‌ಪೀರ್, ಜಾಕೀರ್ ಹುಸೇನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.