ADVERTISEMENT

ತೆಂಗು, ಅಡಿಕೆಗೆ ಬೆಂಬಲ ಬೆಲೆ ನೀಡಲು ಆಗ್ರಹ

ರೈತ ಸಂಘದಿಂದ ತಾಲ್ಲೂಕು ಗಡಿ ಭಾಗಗಳಲ್ಲಿ ಬಂದ್‌ ಆಚರಣೆ, ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 11:23 IST
Last Updated 28 ಜೂನ್ 2016, 11:23 IST

ಹೊಳಲ್ಕೆರೆ: ತೆಂಗು ಮತ್ತು ಅಡಿಕೆಗೆ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಬೆಲೆಯ ಸ್ಥಿರತೆ ಕಾಪಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ರೈತಸಂಘ ಹಾಗೂ ಹಸಿರುಸೇನೆಯ ಸದಸ್ಯರು ಸೋಮವಾರ ತಾಲ್ಲೂಕಿನ ಗಡಿಭಾಗಗಳಲ್ಲಿ ರಸ್ತೆ ತಡೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ–13ರ ಟಿ.ನುಲೇನೂರು ಗೇಟ್‌ನಲ್ಲಿ ನಡೆದ ರಸ್ತೆತಡೆ ಚಳವಳಿಯ ನೇತೃತ್ವ ವಹಿಸಿದ್ದ ರೈತಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಸರ್ಕಾರ ತೆಂಗು ಮತ್ತು ಅಡಿಕೆಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಬೇಕು.

ಬೆಲೆಯ ಏರಿಳಿತಕ್ಕೆ ಕಡಿವಾಣ ಹಾಕಿ ಸ್ಥಿರತೆ ಕಾಪಾಡಲು ಕ್ರಮ ಕೈಗೊಳ್ಳಬೇಕು. ಒಂದು ಕ್ವಿಂಟಲ್‌ ಅಡಿಕೆಗೆ ಕನಿಷ್ಠ ₹ 50 ಸಾವಿರ, ಒಂದು ತೆಂಗಿನ ಕಾಯಿಗೆ ₹ 25 ದರ ನಿಗದಿ ಮಾಡಬೇಕು. ವ್ಯಾಪಾರಿಗಳು ಇದಕ್ಕಿಂತ ಕಡಿಮೆ ಬೆಲೆಗೆ ಟೆಂಡರ್‌ ಹಾಕದಂತೆ ನಿಯಮ ರೂಪಿಸಬೇಕು. ಕಡಿಮೆ ಬೆಲೆಗೆ ಖರೀದಿಸುವ ವ್ಯಾಪಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಅಡಿಕೆ ದರ ಕ್ವಿಂಟಲ್‌ಗೆ ಒಮ್ಮೆ ₹ 90 ಸಾವಿರಕ್ಕೆ ಏರುವುದು, ಮತ್ತೊಮ್ಮೆ ₹ 20 ಸಾವಿರಕ್ಕೆ ಕುಸಿಯುವುದರಿಂದ ರೈತನ ಮನಸ್ಥಿತಿಯೇ ಕೆಟ್ಟು ಹೋಗುತ್ತಿದೆ. ಬೆಲೆ ಏರಿಕೆ ಆಗಬಹುದು ಎಂಬ ಆಸೆಯಿಂದ ಅಡಿಕೆ ದಾಸ್ತಾನು ಮಾಡುವ ರೈತನ ಸಾಲ ಮತ್ತು ಬಡ್ಡಿ ಬೆಳೆಯುತ್ತಾ ಹೋಗುತ್ತದೆ. ಇದರಿಂದ ರೈತರು ಹಾಳಾಗಿ ಬಂಡವಾಳಶಾಯಿಗಳು ಹಣ ಮಾಡಿಕೊಳ್ಳುತ್ತಾರೆ. ರಾಜ್ಯದಲ್ಲಿ 17 ಕೃಷಿ ಉತ್ಪನ್ನಗಳ ಬೆಲೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದೆ ಎಂದು ಕೃಷಿ ಬೆಲೆ ಆಯೋಗವೇ ಸರ್ಕಾರಕ್ಕೆ ವರದಿ ನೀಡಿದೆ.

ಆದರೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ರೈತನ ಉತ್ಪಾದನಾ ವೆಚ್ಚ, ಅವನ ಶ್ರಮ ಮತ್ತು ಒಂದಿಷ್ಟು ಲಾಭದ ಆಧಾರದ ಮೇಲೆ ಬೆಲೆ ನಿಗದಿ ಮಾಡಬೇಕು. ಆದರೆ ಈಗ ಇರುವ ಅವೈಜ್ಞಾನಿಕ ಬೆಲೆಯಿಂದ ರೈತ ಮಾಡಿದ ಖರ್ಚೂ ವಾಪಸ್ ಬರದಿರುವುದು ದುರಂತ ಎಂದು ಸಿದ್ದವೀರಪ್ಪ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವುದಾಗಿ ಹೇಳಿದ್ದಾರೆ. ಆದರೆ ಅದು ಎಷ್ಟು ಸತ್ಯವೋ ಗೊತ್ತಿಲ್ಲ. ಕೇವಲ ಕೆರೆಗಳಿಗೆ ನೀರು ತುಂಬಿಸಿದರೆ ರೈತನ ಬದುಕು ಹಸನಾಗುವುದಿಲ್ಲ. ಸಮಗ್ರ ನೀರಾವರಿಗೆ ಒತ್ತು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಾಲ್ಲೂಕಿನ ಗಡಿಭಾಗಗಳಾದ ಎಚ್‌.ಡಿ.ಪುರ, ವೆಂಕಟೇಶಪುರ, ಎನ್‌.ಜಿ.ಹಳ್ಳಿ, ಬಿದರಕೆರೆ, ಕಣಿವೆ ಹಳ್ಳಿ, ದುಮ್ಮಿ, ಕೋಟೆಹಾಳ್‌, ಸಾಸಲು ಹಳ್ಳ, ಬಂಡೇ ಬೊಮ್ಮೇನ ಹಳ್ಳಿ ಗ್ರಾಮಗಳ ಮುಖ್ಯರಸ್ತೆಯಲ್ಲಿ ರೈತ ಸಂಘದ ಸದಸ್ಯರು ರಸ್ತೆತಡೆ ನಡೆಸಿದರು. 

ರೈತ ಸಂಘದ ಅಧ್ಯಕ್ಷ ಪಟೇಲ್‌ ಚಂದ್ರಶೇಖರಪ್ಪ, ಎಚ್‌.ಸಿ.ರಾಜು, ಮಹಾಲಿಂಗಪ್ಪ, ಕೊಟ್ರೆ ಶಂಕರಪ್ಪ, ಜಿ.ಎಲ್‌.ಜೀವನ್‌, ಮಲ್ಲಿಕಾರ್ಜುನ್‌, ಪ್ರಕಾಶ್‌, ಉಮೇಶ್‌, ಗುರುಶಾಂತಪ್ಪ, ನಾಗೇಂದ್ರಪ್ಪ, ರಾಘವೇಂದ್ರ, ಮಂಜುನಾಥ್‌ ಪ್ರತಿಭಟನೆಯಲ್ಲಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.