ADVERTISEMENT

ದೀಪಾವಳಿ ಹಬ್ಬದ ರಜೆಯಲ್ಲಿ ಪ್ರವಾಸಿಗರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 6:24 IST
Last Updated 21 ಅಕ್ಟೋಬರ್ 2017, 6:24 IST
ಚಿತ್ರದುರ್ಗದ ಕೋಟೆಯಲ್ಲಿನ ಒನಕೆ ಕಿಂಡಿಯಲ್ಲಿ ಪ್ರವಾಸಿಗರ ದಂಡು.
ಚಿತ್ರದುರ್ಗದ ಕೋಟೆಯಲ್ಲಿನ ಒನಕೆ ಕಿಂಡಿಯಲ್ಲಿ ಪ್ರವಾಸಿಗರ ದಂಡು.   

ಚಿತ್ರದುರ್ಗ: ದೀಪಾವಳಿಯ ಹಬ್ಬದಂದು ಸಾವಿರಾರು ಪ್ರವಾಸಿಗರು ನಗರದ ಐತಿಹಾಸಿ ಸ್ಥಳಗಳಾದ ಕೋಟೆ, ಚಂದ್ರವಳ್ಳಿ, ಆಡುಮಲ್ಲೇಶ್ವರ ಮತ್ತು ಹಿಮತ್ಕೇದಾರಕ್ಕೆ ಭೇಟಿ ನೀಡಿ ಸಂಭ್ರಮಿಸಿದರು. ಬೆಳಗಿನಿಂದ ಸಂಜೆಯತನಕ ಐತಿಹಾಸಿಕ ಸ್ಥಳಗಳಲ್ಲಿ ಸಾವಿರಾರು ಬೈಕ್‌ಗಳು ನೂರಾರು ಕಾರು, ಜೀಪು, ಆಟೊ, ‘ಆಪೆ’ ಗಾಡಿಗಳು ಸಾಲುಗಟ್ಟಿದ್ದವು.
ಸಾಮಾನ್ಯ ದಿನಗಳಲ್ಲಿ 150ರಿಂದ 200 ಮಂದಿ ಪ್ರವಾಸಿಗರು ಬಂದರೆ, ಆಡುಮಲ್ಲೇಶ್ವರ ಕಿರು ಮೃಗಾಲಯ ಗಿಜಿ ಗಿಜಿ ಎನ್ನುತ್ತಿತ್ತು.

ಹತ್ತು ವರ್ಷಗಳ ನಂತರ ಭೋರ್ಗರೆಯಿತ್ತಿರುವ ಹಿಮವತ್ಕೇದಾರ (ಬಸವನಬಾಯಿಯಲ್ಲಿ ನೀರು ಬರುವ ಸ್ಥಳ)ಕ್ಕೆ ಜನಸಾಗರವೇ ಹರಿದು ಬಂತು. ಕೋಟೆಯಲ್ಲಿನ ಒನಕೆ ಓಬವ್ವನ ಕಿಂಡಿ, ತಣ್ಣೀರು ದೋಣಿಯಲ್ಲಿನ ನೀರಿನಲ್ಲಿ ಪ್ರವಾಸಿಗರು ಮಿಂದೆದ್ದರು.

ಯುವಕರು ಆಡುಮಲ್ಲೇಶ್ವರಕ್ಕೆ ಜಾಲಿ ರೈಡ್‌ ಹೊರಟರೆ, ಇನ್ನು ಕೆಲವರು ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು ಕುಟುಂಬ ಸಹಿತ ದ್ಚಿಚಕ್ರವಾಹನದಲ್ಲಿ ತೆರೆಳಿದರು.
ಮಧ್ಯಾಹ್ನ ಮೂರು ಗಂಟೆ ನಂತರ ಹಿಮವತ್ಕೇದಾರ ವೀಕ್ಷಣೆಗೆ ಪ್ರವೇಶ ನೀಡುವುದಿಲ್ಲ ಎಂಬುದು ಅರಣ್ಯ ಇಲಾಖೆ ನಿಯಮ.

ADVERTISEMENT

ಆದರೆ, ದೂರದ ಊರುಗಳಿಂದ ಬಂದಿದ್ದವರು, ‘ಅರ್ಧ ಗಂಟೆ ಅವಕಾಶ ಕೊಡಿ. ನೋಡಿಕೊಂಡು ಬಂದುಬಿಡುತ್ತೇವೆ’ ಎಂದು ಅಲ್ಲಿನ ಕಾವಲುಗಾರರ ಬಳಿ ಮನವಿ ಮಾಡಿದರು.
ಹಚ್ಚ ಹಸಿರಿನ ಹಾದಿಯಲ್ಲಿ...

ಹಸ್ತೆ – ಚಿತ್ತೆ ಮಳೆ ಸತತವಾಗಿ ಸುರಿದ ಪರಿಣಾಮ ಜೋಗಿಮಟ್ಟಿ ಅರಣ್ಯ ಪ್ರದೇಶ, ಚಂದ್ರವಳ್ಳಿಯ ದವಳಪ್ಪನ ಗುಡ್ಡದ ಸಾಲು, ಕೋಟೆಯ ಸುತ್ತಲಿನ ವಾತಾವರಣ ಪೂರ್ಣ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಇದೇ ವೇಳೆ ದೀಪಾವಳಿಯ ರಜೆಯೂ ಬಂದಿರುವುದು ಪ್ರವಾಸಿಗರಿಗೆ ಹಸಿರಿನ ಹಾದಿಯಲ್ಲಿ ಹೆಜ್ಜೆ ಹಾಕುವ ಅವಕಾಶ ಸಿಕ್ಕಿತ್ತು. ಹಾಗಾಗಿ ರಸ್ತೆಯ ಇಕ್ಕೆಲಗಳೂ ಪ್ರವಾಸಿ ತಾಣದಂತೆ ಕಂಗೊಳಿಸುತ್ತಿವೆ ಎಂದು ಪ್ರವಾಸಿಗರು  ಹರ್ಷ ವ್ಯಕ್ತಪಡಿಸಿದರು.

ಆ ಪುಟಾಣಿಗಳು ಜಾರುಬಂಡೆಯಲ್ಲಿ ಸಮಯ ಕಳೆದರೆ, ಆಡುಮಲ್ಲೇಶ್ವರದ ಕಿರುಮೃಗಾಲಯ ಹಾಗೂ ಹೊರಗಿನ ಆವರಣ ವಾಹನ ಹಾಗೂ ವೀಕ್ಷಕರಿಂದ ತುಂಬಿ ತುಂಬಿದ್ದು, ಸಿಬ್ಬಂದಿಗೆ ನಿರ್ವಹಣೆ ಸವಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.