ADVERTISEMENT

ದೇವರೆ ನಮ್ಮನ್ನು ಪಾರು ಮಾಡಿದ...

ಗಾಣಧಾಳು ಶ್ರೀಕಂಠ
Published 18 ಮೇ 2017, 9:53 IST
Last Updated 18 ಮೇ 2017, 9:53 IST
ರೈಲ್ವೆ ಸೇತುವೆಯ ಮೇಲೆ ಹಳಿ ಬಾಗಿರುವ ದೃಶ್ಯ.
ರೈಲ್ವೆ ಸೇತುವೆಯ ಮೇಲೆ ಹಳಿ ಬಾಗಿರುವ ದೃಶ್ಯ.   

ಚಿತ್ರದುರ್ಗ: ಒಂದೇ ಒಂದು ಚೂರು ವ್ಯತ್ಯಾಸವಾಗಿದ್ದರೆ, ನಾವೆಲ್ಲ ಉಳಿಯುತ್ತಿ ರಲಿಲ್ಲ. ರೈಲು ಆ ಕಡೆಗೂ ಈ ಕಡೆಗೂ ಉರುಳಿದ್ದರೆ ದೇವರೇ ಗತಿ... ಅಬ್ಬಾ ! ಆ ದೇವರೇ ನಮ್ಮನ್ನೆಲ್ಲ ಕಾಪಾಡಿಬಿಟ್ಟ..’

ರೈಲು ಹಳಿ ತಪ್ಪಿದರೂ ಅಪಾಯದಿಂದ ಪಾರಾದ ಬೆಂಗಳೂರು– ಹೊಸಪೇಟೆ ರೈಲಿನಲ್ಲಿ ರಾಯದುರ್ಗ, ಹೊಸಪೇಟೆ, ಬಳ್ಳಾರಿ ಕಡೆಗೆ ಹೊರಟಿದ್ದ ಪ್ರಯಾಣಿಕರು ಮುಗಿಲತ್ತ ಮುಖ ಮಾಡಿ, ಕುಳಿತಲ್ಲೇ ಕೈ ಮುಗಿಯುತ್ತಾ ಹೀಗೆ ನಿಟ್ಟುಸಿರು ಬಿಡುತ್ತಿದ್ದರು. ಪ್ರತಿಯೊಬ್ಬರು, ಹಳಿತಪ್ಪಿದ್ದ ರೈಲಿಗೆ ಬ್ರೇಕ್ ಹಾಕಿ, ಹೋಗುತ್ತಿದ್ದ ಜೀವಕ್ಕೂ ಬ್ರೇಕ್ ಹಾಕಿದ ಚಾಲಕನನ್ನೂ ಸ್ಮರಿಸುತ್ತಿದ್ದರು.

ಆ ರೈಲಿನಲ್ಲಿ ಒಂಬತ್ತು ಬೋಗಿ ಗಳಿದ್ದವು. ಐದು ಸ್ಲೀಪರ್. ನಾಲ್ಕು ಸಾಮಾನ್ಯ ದರ್ಜೆ ಪ್ರಯಾಣಿಕರ ಬೋಗಿ ಗಳು. ಬುಧವಾರ ಬೆಳಿಗ್ಗೆ ನಗರದ ಪಿಳ್ಳೇಕಾರನಹಳ್ಳಿ ಬಳಿಯ ರೈಲ್ವೆ ಮೇಲ್ಸೇತುವೆ ಬಳಿ ಹಳಿ ತಪ್ಪಿ, ಬೋಗಿಗಳು ಅಲುಗಾಡುತ್ತಿದ್ದಂತೆ ನಿದ್ದೆಯ ಮಂಪರಿನಲ್ಲಿದ್ದವರೆಲ್ಲ ಧಿಗ್ಗನೆ ಎದ್ದು ಕುಳಿತರು. ಮೇಲೆ ಮಲಗಿದ್ದವರು ಕೆಳಗೆ ಉರುಳಿದರು. ಬಾಗಿಲ ಬಳಿ ಕುಳಿತಿದ್ದವರು ಹಿಂದಕ್ಕೆ ವಾಲಿದರು. ಹಳಿತಪ್ಪಿದ ಬೋಗಿಗಳು ಬುಡು ಬುಡುಕೆಯಂತೆ ಅಲುಗಾಡಿ ದ್ದರಿಂದ ಒಳಗಿದ್ದವರೂ ಅಲುಗಾಡುತ್ತಎಲ್ಲರೂ ಗಾಬರಿಯಾಗಿ ಕುಳಿತಿದ್ದರು.

ADVERTISEMENT

‘ಚಿತ್ರದುರ್ಗ ಸ್ಟೇಷನ್ ನಿಂದ ಗಾಡಿ ಹೊರಟಿತು. ಸ್ವಲ್ಪ ಹೊತ್ತು ಆಗುತ್ತಿದ್ದಂತೆ ದಡ ದಡ ಸೌಂಡ್ ಆಯ್ತು. ಆಮೇಲೆ ಬೋಗಿಯೊಳಗಿದ್ದವರು ಅತ್ತಿಂದತ್ತ ಓಡಾಡಲಾರಂಭಿಸಿದರು. ಒಂದು ಕ್ಷಣ ಏನೋ ಆಗ್ತಿದೆ ಎಂದು ಭಯ ಆಯ್ತು. ಸ್ಲೀಪರ್ ಕೋಚ್ ನಲ್ಲಿದ್ದವರಿಗೆ ಏನಾಯ್ತೋ ಗೊತ್ತಿಲ್ಲ. ಜನರಲ್ ಕಂಪಾರ್ಟ್ ಮೆಂಟ್‌ನಲ್ಲಿದ್ದ ನಮಗೆ ಮಾತ್ರ ಬಹಳ ಭಯ ಆಯ್ತು’ ಎನ್ನುತ್ತಾ ಆತಂಕದ ಚಿತ್ರಣ ತೆರೆದಿಟ್ಟರು ಬೆಂಗಳೂರಿನಿಂದ ಬಳ್ಳಾರಿಗೆ ಹೊರಟಿದ್ದ ಪ್ರಯಾಣಿಕರಾದ ದೇವಿ, ವಿಶ್ವನಾಥ್, ಬಿಜಿ ಕೆರೆ ತಿಪ್ಪೇಸ್ವಾಮಿ.

‘ಮೊಮ್ಮಗಳ ಮದುವೆ ಇತ್ತು. ರಾಯದುರ್ಗಕ್ಕೆ ಹೊರಟಿದ್ದೆವು. ನನಗೆ ನಡೆಯಲಾಗವುದಿಲ್ಲ. ನಮ್ಮ ಮನೆಯವರಿಗೂ ಅಷ್ಟೇ. ಅನಿವಾರ್ಯವಾಗಿ ರೈಲು ಹತ್ತಿದೆವು. ಪುಣ್ಯಕ್ಕೆ ಏನೂ ಆಗ್ಲಿಲ್ಲ. ದೇವರು ದೊಡ್ಡವನು. ಆದರೆ, ರೈಲು ಮಧ್ಯ ನಿಂತಿದೆ. ನಡ್ಕೊಂಡು ಹೋಗೋದು ಹೇಗೆ’ ಎನ್ನುತ್ತಾ ಊನವಾದ ಕಾಲು ಮಡಿಸಿಕೊಂಡು ಸೀಟ್ ಮೇಲೆ ಕುಳಿತಿದ್ದ ಮಲ್ಲಿಕಾರ್ಜುನಪ್ಪ ಚಿಂತಿಸುತ್ತಿದ್ದರು. ಅವರ ಪುತ್ರ ಮಹೇಶ್  ‘ನಮ್ಮಿಬ್ಬರನ್ನು ಬಿಟ್ಟು ಉಳಿದ ಮೂವರು ಪೇಷಂಟ್ ಗಳು. ನೋಡಿ ಅವರಿಗೆ ಹತ್ತಿ ಇಳಿಯುವುದು ಕಷ್ಟ. ಮತ್ತೊಬ್ಬರು ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿದ್ದಾರೆ. ಇವೆಲ್ಲ ಕಾರಣದಿಂದ ಅನಿವಾರ್ಯವಾಗಿ ರೈಲು ಹತ್ತಿದ್ವಿ. ಈಗ ನೋಡಿ, ಇಷ್ಟೆಲ್ಲ ಸಮಸ್ಯೆಯಾಯ್ತು’ ಎನ್ನುತ್ತಾ ಕುಟುಂಬದ ಸದಸ್ಯರ ಪರಿಸ್ಥಿತಿಯನ್ನು ವಿವರಿಸಿದರು.

ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದಾಗ ರೈಲ್ವೆ ಸಿಬ್ಬಂದಿ ಪ್ರಯಾಣಿಕರನ್ನು ಹುಡುಕುತ್ತಾ ಬಂದರು. ಆದರೆ, ಮಲ್ಲಿಕಾರ್ಜುನಪ್ಪ ಮತ್ತು ಕುಟುಂಬದವರನ್ನು ಕೆಳಗಿಳಿಸುವ ಯಾವುದೇ  ವ್ಯವಸ್ಥೆ ಇರಲಿಲ್ಲ. ಅಷ್ಟುಹೊತ್ತಿಗೆ  ವಾಯು ವಿಹಾರಕ್ಕೆಂದು ಬಂದಿದ್ದ ನಗರಸಭೆ ಸದಸ್ಯ ತಿಮ್ಮಣ್ಣ, ಪರಿಸ್ಥಿತಿ ಅರ್ಥ ಮಾಡಿಕೊಂಡು, ತಮ್ಮ ಪರಿಚಯದ ಹುಡುಗರನ್ನು ಕರೆಸಿ, ಮಲ್ಲಿಕಾರ್ಜುನ್ ಮತ್ತು ಕುಟುಂಬದವರನ್ನು ಬೋಗಿಯಿಂದ ಇಳಿಸಿ, ಸೇತುವೆಯಿಂದಲೂ ಕೆಳಗೆ ಇಳಿಸಿ, ಆಟೊ ಹತ್ತಿಸಿ ಕಳಿಸಿದರು.

ಇತ್ತ ಇನ್ನೂ ರೈಲಿನಲ್ಲಿ ಕುಳಿತು, ಇಲಾಖೆಯವರನ್ನು ಕಾಯುತ್ತಿದ್ದ ಹೊಸಪೇಟೆಯ ಖಾಸಿಂ, ‘ನೋಡಿ ಸರ್, ಟ್ರೈನ್ ಇಲ್ಲೇ ನಿಲ್ಸಿದ್ದಾರೆ. ನಾನು ಕಾರ್ಪೆಂಟರ್. ಇದ್ದ ದುಡ್ಡಿನಲ್ಲಿ ರೈಲು ಹತ್ತಿ ಬಂದಿದ್ದೇನೆ. ಮುಂದಕ್ಕೆ ಹೋಗಲು ದುಡ್ಡಿಲ್ಲ. ಇವರು ಏನೂ ವ್ಯವಸ್ಥೆ ಮಾಡುತ್ತಿಲ್ಲ. ನಮಗೆ ಅರ್ಧ ಚಾರ್ಜ್ ಆದರೂ ಕೊಡಬೇಕಲ್ಲವಾ. ಇಲ್ಲಿಂದ ನಾವು ಹೆಂಗೆ ಮುಂದಕ್ಕೆ ಹೋಗೋದು’ ಎನ್ನುತ್ತಾ ಅಪಘಾತದ ಅರಿವಿಲ್ಲದಂತೆ ಮಾತನಾಡುತ್ತಿದ್ದರು. ಅವರು ಬೆಂಗಳೂರಿನಿಂದ ರಾಯದುರ್ಗಕ್ಕೆ ಹೊರಟಿದ್ದರು. ‘ನಮ್ ಓನರ್ ಅಡ್ವಾನ್ಸ್, ಪೇಮೆಂಟೂ ಏನೂ ಕೊಟ್ಟಿಲ್ಲ’ಎಂದು ಗೊಣಗುತ್ತಿದ್ದರು.

‘ಮುಂದಿನ ಪ್ರಯಾಣ ಹೇಗೆ’ ಎಂದು ಪರಯಾಣಿಕರು ಪರದಾಡುತ್ತಿದ್ದರು. ಸ್ಥಳೀಯರಲ್ಲಿ, ಮಾಧ್ಯಮದವರಲ್ಲಿ ತಮಗಾದ ಅಘಾತದ ಅನುಭವವನ್ನು ಹೇಳಿಕೊಳ್ಳುತ್ತಾ, ಲಗೇಜುಗಳನ್ನು ಹೊತ್ತು ಬಸ್ ನಿಲ್ದಾಣಗಳನ್ನು ಹುಡುಕುತ್ತಿದ್ದರು. ಸ್ಥಳೀಯರು ಹೊಸಪೇಟೆ, ಬಳ್ಳಾರಿ, ರಾಯದುರ್ಗದ ಕಡೆಗೆ ಹೋಗುವವರಿಗೆ ಬಸ್‌ ನಿಲ್ಲುವ ಜಾಗವನ್ನು ತೋರುವ ಮೂಲಕ ಸಹಕಾರ ನೀಡಿದರು.

ಅತ್ತ ರೈಲ್ವೆ ಇಲಾಖೆಯ ಸಿಬ್ಬಂದಿ, ಲಾರಿ ಡಿಕ್ಕಿ ಹೊಡೆದ ರೈಲ್ವೆ ಮೇಲು ಸೇತುವೆ ಪರಿಶೀಲನೆ ಮಾಡುತ್ತಿದ್ದರು. ಬೆಳಿಗ್ಗೆ 9.50ರ ಸುಮಾರಿಗೆ ದಾವಣಗೆರೆಯಿಂದ ಯಂತ್ರಗಳನ್ನು ತರಿಸಿ, ರೈಲ್ವೆ ಎಂಜಿನ್ ಮತ್ತು ಬೋಗಿಗಳನ್ನು ತೆರವುಗಳಿಸಲಾಯಿತು.

ಮೈಸೂರು, ದಾವಣಗೆರೆಯಿಂದ ಹಿರಿಯ ರೈಲ್ವೆ ಅಧಿಕಾರಿಗಳು, ಸುರಕ್ಷತಾ ವಿಭಾಗದ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ರೈಲು ಹಳಿ ತಪ್ಪಿದ್ದು ಹೇಗೆ ಎಂಬುದರ ಕುರಿತು ತನಿಖೆ ನಡೆಸಲು ಅಧಿಕಾರಿಗಳು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.