ADVERTISEMENT

ಧರ್ಮಪುರ ಕೆರೆಗೆ ಪೂರಕ ನಾಲೆ ಶತಃಸಿದ್ಧ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 6:13 IST
Last Updated 14 ನವೆಂಬರ್ 2017, 6:13 IST

ಧರ್ಮಪುರ: ‘ರೈತರ, ಶಾಸಕರ ಹಾಗೂ ಜನಪ್ರತಿನಿಧಿಗಳ ಹೋರಾಟದ ಫಲವಾಗಿ ತುಮಕೂರು ಶಾಖಾ ನಾಲೆಯ ಮೂಲಕ ಶಿರಾ ತಾಲ್ಲೂಕಿನ ಕೆರೆ ಶ್ರೇಣಿಯ ಮುಂದುವರಿದ ಭಾಗವಾಗಿ ಧರ್ಮಪುರ ಕೆರೆಗೆ ಶೇಕಡ ನೂರರಷ್ಟು ನೀರು ಬರುವುದು ಖಚಿತ. ಈಗಾಗಲೇ ಈ ಯೋಜನೆಯ ಪ್ರಸ್ತಾವ ಸಿದ್ಧವಾಗಿದೆ’ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ಜಯಪ್ರಕಾಶ್‌ ಭರವಸೆ ನೀಡಿದರು.

ಇಲ್ಲಿನ ಐತಿಹಾಸಿಕ ಕೆರೆಗೆ ಪೂರಕ ನಾಲೆ ನಿರ್ಮಾಣ, ತಾಲ್ಲೂಕು ರಚನೆ ಸಂಬಂಧ 112 ದಿನಗಳಿಂದ ರೈತರು ನಡೆಸಿದ ಹೋರಾಟಕ್ಕೆ ಸ್ಪಂದಿಸಿ ಸರ್ಕಾರ ಕಳುಹಿಸಿಕೊಟ್ಟಿದ್ದ ಅಧಿಕಾರಿಗಳ ತಂಡ ಸೋಮವಾರ ಧರಣಿ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ನಾಲೆಯ ಮೂಲಕ ಹಿರಿಯೂರು, ಚಿಕ್ಕನಾಯಕನಹಳ್ಳಿ, ಶಿರಾ, ತುಮಕೂರು ಭಾಗಗಳ ಕೆರೆಗೆ ನೀರುಣಿಸಲಾಗುತ್ತಿದೆ. ಶಿರಾ ತಾಲ್ಲೂಕಿನ 24 ಕೆರೆಗಳು, ಹಿರಿಯೂರಿನ 17 ಕೆರೆಗಳಿಗೆ ನೀರುಣಿಸುವ ಯೋಜನೆ ರೂಪಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಧರ್ಮಪುರ ಕೆರೆಯ ನೀರಿನ ಸಾಮರ್ಥ್ಯ 0.33 ಟಿಎಂಸಿ ಅಡಿ. ನೀರಿನ ಲಭ್ಯತೆಗೆ ಅನುಗುಣವಾಗಿ ಈ ಯೋಜನೆಯಿಂದ 0.15 ಟಿಎಂಸಿ ಅಡಿ ನೀರು ಬರಲಿದೆ. ತಾಂತ್ರಿಕತೆ, ನೀರಿನ ಪೂರೈಕೆ ಕುರಿತ ವಿಸ್ತೃತ ವರದಿ ಬಂದಿದೆ. ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, 2018ರ ಮೇ ತಿಂಗಳಲ್ಲಿ ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ನೀರು ನೀಡಲಾಗುವುದು’ ಎಂದು ಅವರು ಭರವಸೆ ನೀಡಿದರು. 

‘ಈ ಯೋಜನೆಯಡಿ ನಮಗೆ 29.9 ಟಿಎಂಸಿ ಅಡಿ ನೀರಿನ ಲಭ್ಯತೆ ಇದೆ. ಹಿರಿಯೂರಿನ ವಾಣಿ ವಿಲಾಸ ಸಾಗರಕ್ಕೆ ಪ್ರತ್ಯೇಕವಾಗಿ 2 ಟಿಎಂಸಿ ಅಡಿ, ತುಮಕೂರು ಶಾಖಾ ನಾಲೆಯ ಮೂಲಕ 4.9 ಟಿಎಂಸಿ ಅಡಿ ನೀರು ಸೇರಿ, ಒಟ್ಟು 6.9 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ಯೋಜನೆಯ ಸಿಂಹಪಾಲು ಹಿರಿಯೂರು ತಾಲ್ಲೂಕಿಗೆ ಸಿಗಲಿದೆ’ ಎಂದು ಅವರು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‌ ಚೆಲುವರಾಜ್‌ ಮಾತನಾಡಿ, ‘1969ರಲ್ಲಿ ಈ ಯೋಜನೆ ಶುರುವಾಗಿದೆ. ನಂತರ 2003, 2006 ಹಾಗೂ 2008ರಲ್ಲಿ ಪರಿಷ್ಕೃತ ವರದಿಯ ಮೂಲಕ ಈಗ ಅಂತಿಮವಾಗಿ ಯಶಸ್ಸು ಕಾಣುತ್ತಿದ್ದೇವೆ. ಹಿರಿಯೂರು ತಾಲ್ಲೂಕಿನ ಬಹುತೇಕ ಕೆರೆಗಳಿಗೆ ನೀರು ಲಭಿಸಲಿದ್ದು, 1.60 ಲಕ್ಷ ಎಕರೆ ಭೂಮಿ ನೀರಾವರಿಯಾಗಲಿದೆ’ ಎಂದು ಮಾಹಿತಿ ನೀಡಿದರು.

ಶಾಸಕ ಡಿ.ಸುಧಾಕರ್ ಮಾತನಾಡಿ, ‘ಹಲವು ದಶಕಗಳ ಕನಸಾಗಿದ್ದ ಧರ್ಮಪುರ ಕೆರೆಗೆ ಪೂರಕ ನಾಲೆಗೆ ಹಸಿರು ನಿಶಾನೆ ದೊರೆತಿದೆ. ರೈತರ, ಹೋರಾಟಗಾರರ ಹಾಗೂ ಅಧಿಕಾರಿಗಳ ಶ್ರಮ ನನ್ನೊಂದಿಗೆ ಇರುವುದರಿಂದ ಯಶಸ್ಸು ಕಾಣುವಂತಾಗಿದೆ. ಮುಂದಿನ ದಿನಗಳಲ್ಲಿ ಧರ್ಮಪುರ ತಾಲ್ಲೂಕು ರಚನೆ ಮಾಡಲೂ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ರೈತ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್‌ಎಲ್‌.ಗುಣ್ಣಯ್ಯ ಮಾತನಾಡಿ, ‘ಹೋರಾಟವನ್ನು ತಾತ್ಕಾಲಿಕವಾಗಿ ಡಿಸೆಂಬರ್‌ ಅಂತ್ಯದವರೆಗೆ ನಿಲ್ಲಿಸಿದ್ದೇವೆ. ಪೂರಕ ನಾಲೆ ನಿರ್ಮಾಣದ ಆದೇಶ ಇಲಾಖೆಯಿಂದ ಅಧಿಕೃತವಾಗಿ ಸಿಗಬೇಕು. ಇಲ್ಲದಿದ್ದರೆ 2018ರ ಜನವರಿಯಿಂದ ಮತ್ತೆ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ರವೀಂದ್ರ ಮಾತನಾಡಿದರು.

ನೀರಾವರಿ ಇಲಾಖೆಯ ಅಧಿಕಾರಿಗಳಾದ ಮೋಹನ್‌ಕುಮಾರ್‌, ಗೋಪಾಲ್‌, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪಾಪಣ್ಣ, ನಾಗೇಂದ್ರ ನಾಯ್ಕ್, ಗೀತಾ ನಾಗಕುಮಾರ್‌, ಸುರೇಶ್‌ಬಾಬು, ರಘುನಾಥ್‌, ಚಂದ್ರಣ್ಣ, ಖಾದಿ ರಮೇಶ್‌, ಎಸ್‌.ಆರ್‌.ತಿಪ್ಪೇಸ್ವಾಮಿ, ಪರಮೇಶ್‌, ಅಪ್ಪಾಜಿಗೌಡ, ಹೊರಕೇರಪ್ಪ, ಸಿದ್ದರಾಮಣ್ಣ, ಬಿ.ಎಚ್‌.ವೆಂಕಟೇಶ್‌, ಹಾರ್ಡ್‌ವೇರ್‌ ಶಿವಣ್ಣ, ತಿಪ್ಪೇಸ್ವಾಮಿ,ಕಲ್ಲಟ್ಟಿ ತಿಪ್ಪೇಸ್ವಾಮಿ, ಜಗನ್ನಾಥ್‌ ಹಾಗೂ ರೈತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.