ADVERTISEMENT

ನಾಳೆ ಹಿರಿಯೂರಿಗೆ ಸಿದ್ದರಾಮಯ್ಯ: ಗರಿಗೆದರಿದ ಹುಮ್ಮಸ್ಸು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 8:38 IST
Last Updated 26 ಡಿಸೆಂಬರ್ 2017, 8:38 IST

ಹಿರಿಯೂರು: ನಗರದ ಹುಳಿಯಾರು ರಸ್ತೆಯಲ್ಲಿರುವ ಹೆಲಿಪ್ಯಾಡ್ ಗೆ ಡಿ.27ರಂದು ಸಂಜೆ 4.25ಕ್ಕೆ ಬರುವ ಮುಖ್ಯಮಂತ್ರಿ, ಅಲ್ಲಿಂದ ನೇರವಾಗಿ ಸಾಧನಾ ಸಮಾವೇಶ ನಡೆಯುವ ನೆಹರೂ ಮೈದಾನಕ್ಕೆ ಬರಲಿದ್ದಾರೆ. ಸಿದ್ದರಾಮಯ್ಯ ಬರುವುದರಿಂದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಹುಮ್ಮಸ್ಸು ಗರಿಗೆದರಿದೆ.

ವಾಣಿ ವಿಲಾಸ ಜಲಾಶಯದಿಂದ ನಗರದ ಜನತೆಗೆ ₹ 43 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಿರುವ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ, ಅಲ್ಪ ಸಂಖ್ಯಾತರ ಇಲಾಖೆಯ ₹ 25 ಕೋಟಿ ವೆಚ್ಚದ ಕಾಮಗಾರಿ, ₹ 42 ಕೋಟಿ ವೆಚ್ಚದ ವಾಣಿ ವಿಲಾಸ ಜಲಾಶಯ ಉಪ ವಿಭಾಗದ ಕಾಮಗಾರಿ, ₹ 16 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ನಿರ್ಮಿಸಿರುವ ಚೆಕ್ ಡ್ಯಾಂಗಳು, ₹ 36 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಗಣ್ಯರ ಪ್ರವಾಸಿ ಮಂದಿರ ಕಟ್ಟಡವನ್ನು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ₹ 448 ಕೋಟಿ ಬಿಡುಗಡೆ ಮಾಡುತ್ತಿರುವ ವಿಚಾರ ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೆ ಪ್ರಚಾರದ ದೊಡ್ಡ ವಿಷಯವಾಗಲಿದೆ. ಜತೆಗೆ ಕುರುಬ, ಕುಂಚಿಟಿಗ, ಬಲಿಜ, ಈಡಿಗ, ಮಡಿವಾಳ, ಸವಿತಾ ಸಮಾಜ, ಕುಂಬಾರ, ಮುಸ್ಲಿಮರ ಶಾದಿ ಮಹಲ್‌ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರಣ ಈ ಸಮುದಾಯಗಳ ಜನರು ಹೆಚ್ಚು ಸೇರುವ ನಿರೀಕ್ಷೆ ಸಂಘಟಕರಲ್ಲಿದೆ. ದಲಿತರಿಗೆ ಪ್ರೊ.ಕೃಷ್ಣಪ್ಪ ಸ್ಮಾರಕ ಸಮುದಾಯ ಭವನ, ದೇವರಾಜ ಅರಸು ಸಮುದಾಯ ಭವನಗಳಿಗೂ ಭೂಮಿ ಪೂಜೆ ನಡೆಯಲಿದೆ.

ADVERTISEMENT

ಆತಂಕ: ಹೊಳಲ್ಕೆರೆ, ಚಳ್ಳಕೆರೆ ನಗರಗಳ ಕಾರ್ಯಕ್ರಮ ಮುಗಿಸಿಕೊಂಡು ಮುಖ್ಯಮಂತ್ರಿ ಹಿರಿಯೂರಿಗೆ ಬರುವುದು 4 ಗಂಟೆಗಿಂತ ತಡವಾದರೆ wಹೇಗೆ ಎಂಬ ಚಿಂತೆ ಸ್ಥಳೀಯ ಶಾಸಕ ಡಿ. ಸುಧಾಕರ್ ಹಾಗೂ ಪಕ್ಷದ ಮುಖಂಡರನ್ನು ಕಾಡುತ್ತಿದೆ. ಸಂಜೆ 6ಕ್ಕೆ ಕತ್ತಲಾಗುವುದರ ಜತೆಗೆ ಒಂದು ವಾರದಿಂದ ಹೆಚ್ಚಿರುವ ಚಳಿಯಿಂದಾಗಿ ಸಮಾರಂಭಕ್ಕೆ ಬರುವ ಜನ ಬೇಗ ಹೋದರೇನು ಗತಿ ಎಂಬ ಆತಂಕವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.