ADVERTISEMENT

ನಿವೇಶನ, ಬಡಾವಣೆ ಅಭಿವೃದ್ಧಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:07 IST
Last Updated 20 ಏಪ್ರಿಲ್ 2017, 5:07 IST

ಚಳ್ಳಕೆರೆ: ನಗರದಲ್ಲಿ ಖಾಸಗಿ ಜಮೀನುಗಳನ್ನು ಬಡಾವಣೆಗಳನ್ನಾಗಿ ಪರಿವರ್ತಿಸುವ ಬಗ್ಗೆ ಸರ್ವ ಸದಸ್ಯರು ಒಕ್ಕೊರಲಿನಿಂದ ಅನುಮೋದನೆ ವ್ಯಕ್ತಪಡಿಸಿದರು. ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರಸಭೆ ಸದಸ್ಯರು ಖಾಸಗಿ ಜಮೀನುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸುವ ವಿಷಯದ ಕುರಿತು ಚರ್ಚೆ ನಡೆಸಿ ಕೇವಲ ಅರ್ಧಗಂಟೆಯಲ್ಲಿ ಸಭೆ ಮುಗಿಸಲಾಯಿತು.

ಚಳ್ಳಕೆರೆ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, 27 ವಾರ್ಡ್‌ಗಳಿದ್ದ ನಗರದಲ್ಲಿ 31 ವಾರ್ಡ್‌ಗಳ ಪುನರ್‌ ವಿಂಗಡಣೆಯಾಗಿದೆ. ಈ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಪ್ರತಿ ತಿಂಗಳು ನಡೆಯುವ ಸಾಮಾನ್ಯ ಸಭೆಯಲ್ಲಿ ನಗರದ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಪರಿಪಾಠವಿದೆ. ಈ ಬಾರಿ ಸಭೆಯಲ್ಲಿ ಮಂಡಿಸಿದ 17 ವಿಷಯಗಳಲ್ಲಿ ನಿವೇಶನಗಳ ಅಭಿವೃದ್ಧಿ ಬಗ್ಗೆ ಬಹುತೇಕ ಚರ್ಚೆ ನಡೆದು ಯಾವುದೇ ವಿರೋಧವಿಲ್ಲದೆ ಅನುಮೋದನೆ ದೊರೆಯಿತು.

ಸಾಮಾನ್ಯ ಸಭೆಯಲ್ಲಿ ಪ್ರತಿಬಾರಿ ಕೇಳಿ ಬರುತ್ತಿದ್ದ ಸ್ವಚ್ಛತೆ, ನೀರು ಸರಬರಾಜು, ಮೂಲ ಸೌಕರ್ಯ ಕುರಿತ ವಿಷಯಗಳು ಚರ್ಚೆಯಾಗದೆ ಉಳಿದವು. ನಗರದ ಕೊಳೆಗೇರಿಗಳಲ್ಲಿ ವಾಸವಿರುವ ಬಡಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ವಾರ್ಡ್‌ಗಳ ಪುನರ್ವಿಂಗಡಣೆ, ಬೀದಿ ದೀಪ ಅಳವಡಿಕೆ ಸೇರಿದಂತೆ ಯಾವುದೇ ಗಂಭೀರ ವಿಷಯಗಳು ಚರ್ಚೆಯಾಗಲಿಲ್ಲ.ನಗರಸಭೆ ಉಪಾಧ್ಯಕ್ಷೆ ಮಹದೇವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಕೆ.ರವಿ ಹಾಗೂ ಸದಸ್ಯರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.