ADVERTISEMENT

ಪಡಿತರ ನಗದು ವರ್ಗಾವಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಮೇ 2017, 5:54 IST
Last Updated 25 ಮೇ 2017, 5:54 IST

ಮೊಳಕಾಲ್ಮುರು: ಆಹಾರ ಭದ್ರತೆ ಯೋಜನೆ ಬಲಪಡಿಸುವ ಜತೆಗೆ ಉದ್ದೇಶಿತ ನಗದು ವರ್ಗಾವಣೆ ಯೋಜನೆ ಜಾರಿ ಕೈಬಿಡಬೇಕು. ಎಂದು ಒತ್ತಾಯಿಸಿ ಬುಧವಾರ ಸಿಪಿಐಎಂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸೀಮೆಎಣ್ಣೆ, ಸಕ್ಕರೆ ವಿತರಣೆ ಮುಂದುವರಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಕೂಲಿಯನ್ನು ₹ 350ಕ್ಕೆ ಹೆಚ್ಚಳ ಮಾಡುವ ಜತೆಗೆ ಸಕಾಲಕ್ಕೆ ಕೆಲಸ ಹಾಗೂ ಕೂಲಿ ನೀಡಬೇಕು. ಬ್ಯಾಕ್‌ಲಾಗ್‌ ಹುದ್ದೆಗಳನ್ನು ತುಂಬುವ ಜತೆಗೆ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು ಎಂದು ಆಗ್ರಹಿಸಿದರು.

ರೈತರ ಸಾಲ ಮನ್ನಾ ಮಾಡಬೇಕು, ರೈತರು ಬೆಳೆಗಳ ವೆಚ್ಚಕ್ಕೆ ತಕ್ಕಂತೆ ಶೇ 50ರಷ್ಟು ಲಾಭ ಬರುವಂತೆ ಬೆಲೆ ನಿಗದಿಗೆ ಕ್ರಮ ಕೈಗೊಳ್ಳಬೇಕು, ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳನ್ನು ತಡೆಯಬೇಕು ಎಂದು ಮನವಿ ಮಾಡಿದರು.

ಮೊಳಕಾಲ್ಮುರು ಪಟ್ಟಣ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ನೀಡಿ ವಸತಿ ಸೌಲಭ್ಯ ಕಲ್ಪಿಸಬೇಕು. ಖಾಸಗಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಸಕ್ರಮಪತ್ರ ನೀಡಬೇಕು.

ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು, ಬರ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮನವಿಯನ್ನು ತಾಲ್ಲೂಕು ಕಚೇರಿಗೆ ಸಲ್ಲಿಸಿದರು. ಡಿ.ಎಂ. ಮಲಿಯಪ್ಪ, ಎಚ್‌.ಎ. ಮಾರಣ್ಣ, ದಾನಸೂರನಾಯಕ, ಎಂ.ಪಿ. ಸರಸ್ವತಿ, ತಿಪ್ಪೇಸ್ವಾಮಿ, ನಾಗರಾಜ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.