ADVERTISEMENT

‘ಪಶುಭಾಗ್ಯ’ ಕಲ್ಪಿಸದ ಶಾಸಕ : ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 8:53 IST
Last Updated 19 ಡಿಸೆಂಬರ್ 2017, 8:53 IST

ಮೊಳಕಾಲ್ಮುರು: ಪ್ರಸಕ್ತ ಸಾಲಿನ ‘ಪಶುಭಾಗ್ಯ ಯೋಜನೆ’ ಫಲಾನುಭವಿಗಳ ಆಯ್ಕೆಯಲ್ಲಿ ಕ್ಷೇತ್ರದ ಶಾಸಕ ಎಸ್‌. ತಿಪ್ಪೇಸ್ವಾಮಿ ತಾಲ್ಲೂಕು ಪಂಚಾಯ್ತಿ ಸದಸ್ಯರನ್ನು ಪರಿಗಣಿಸಿಲ್ಲ ಎಂದು ಆರೋಪಿಸಿ ಸದಸ್ಯರು ಪಶು ವೈದ್ಯಾಧಿಕಾರಿ ಜತೆ ಸೋಮವಾರ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯಸಭೆಯಲ್ಲಿ ಪಕ್ಷಬೇಧ ಮರೆತು ಆರೋಪಿಸಿದ ಸದಸ್ಯರು, ‘ನಾವು ಸೂಚಿಸುವ ಫಲಾನುಭವಿಗಳನ್ನು ಪರಿಗಣಿಸುವಂತೆ ಮನವಿ ಮಾಡಲಾಗಿತ್ತು. ಪಟ್ಟಿಯನ್ನು ನೀಡಲಾಗಿತ್ತು, ಈಗ 72 ಮಂದಿ ಆಯ್ಕೆ ಮಾಡಿದ್ದು ನಮ್ಮನ್ನು ಪೂರ್ಣ ನಿರ್ಲಕ್ಷಿಸಲಾಗಿದೆ. ಆದ್ದರಿಂದ ತಾಲ್ಲೂಕು ಪಂಚಾಯ್ತಿ ಅನುದಾನವನ್ನು ಪಶು ಇಲಾಖೆಗೆ ನೀಡುವುದಿಲ್ಲ, ಶಾಸಕರಿಂದ ಹಾಕಿಸಿಕೊಳ್ಳಿ’ ಎಂದು ಹೇಳಿದರು.

ಕಳೆದ ಬಾರಿ ಫಲಾನುಭವಿಗಳು ಎಲ್ಲಿಯೂ ಪಶುಗಳನ್ನು ಸಾಕಣೆ ಮಾಡುತ್ತಿಲ್ಲ, ಬೋಗಸ್‌ ಆಯ್ಕೆ ಮಾಡಲಾಗಿದೆ. ಬೇಕಾದಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿ. ತಾಲ್ಲೂಕು ಪಂಚಾಯ್ತಿ ನಿಮಗೆ ಲೆಕ್ಕಕ್ಕೆ ಇಲ್ಲದಿದ್ದಲ್ಲಿ ಇನ್ನು ಮುಂದೆ ಸಭೆಗಳಿಗೂ ಬರಬೇಡಿ ಎಂದು ಉಪಾಧ್ಯಕ್ಷ ಎ.ಕೆ. ಮಂಜುನಾಥ್‌ ಹೇಳಿದರು.

ADVERTISEMENT

ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್‌ ಮಾತನಾಡಿ, ‘ಜಿಲ್ಲೆ ಬೇರೆ ತಾಲ್ಲೂಕುಗಳಿಗೆ ಹೋಲಿಕೆ ಮಾಡಿದಲ್ಲಿ ನಮ್ಮ ತಾಲ್ಲೂಕಿನಲ್ಲಿ ಮಳೆ ಕಡಿಮೆ ಬಿದ್ದಿದೆ. ಹಿನ್ನೆಲೆಯಲ್ಲಿ ಜನವರಿಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಆದ್ದರಿಂದ ಸಂಭವನೀಯ ಗ್ರಾಮಗಳ ಪಟ್ಟಿ ಮಾಡುವ ಜತೆಗೆ ಕೈಗೊಳ್ಳಬೇಕಾದ ಕ್ರಮಗಳು, ನೀರಿನ ಲಭ್ಯತೆ ಮಾಹಿತಿ ಸಂಗ್ರಹಿಸಬೇಕು ಎಂದು ಜಿಲ್ಲಾಪಂಚಾಯ್ತಿ ಎಂಜಿನೀಯರ್ ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದರು.

ಕುಡಿಯುವ ನೀರಿನ ಕೊಳವೆಬಾವಿ ಕೊರೆಸಿದಾಗ ನೀರು ಸಿಕ್ಕಲ್ಲಿ ತಕ್ಷಣವೇ ವಿದ್ಯುತ್‌ ಸಂಪರ್ಕಕ್ಕೆ ನೋಂದಣಿ ಮಾಡಿಸಿ. ಅಕ್ರಮವಾಗಿ ಸಂಪರ್ಕ ಮಾಡಿ ತೊಂದರೆಯಾದಲ್ಲಿ ಪಿಡಿಒಗಳನ್ನು ಹೊಣೆ ಮಾಡುತ್ತಾರೆ. ಇದರಲ್ಲಿ ಜಿಲ್ಲಾಪಂಚಾಯ್ತಿ ಮಾತ್ರ ಮುಖ್ಯವಾಗಿದೆ. ಈ ವರ್ಷ ಕುಡಿಯುವ ನೀರಿಗೆ ಪ್ರತ್ಯೇಕ ಅನುದಾನ ನೀಡುವುದಿಲ್ಲ, ಟ್ಯಾಂಕರ್‌ ನೀರು ಸರಬರಾಜೂ ಸ್ಥಗಿತಕ್ಕೆ ಸೂಚಿಸಲಾಗಿದೆ. ಆದ್ದರಿಂದ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಿದರು.

ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಸಿಲೆಂಡರ್‌ಗಳ ಸುರಕ್ಷತೆಗಾಗಿ ಯಂತ್ರ ಅಳವಡಿಸಲು ಶಿಕ್ಷಣ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ ದುಬಾರಿ ವೆಚ್ಚದಲ್ಲಿ ಹಾಕಲಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಈ ಬಗ್ಗೆ ಪರಿಶೀಲಿಸಿ ಹಣ ಪಾವತಿಸಬೇಕು ಎಂದು ಇಒ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆ ಅಧಿಕಾರಿ ರವಿ ವರದಿ ಮಂಡಿಸಿ, ಕಳೆದ ವರ್ಷ ತಾಲ್ಲೂಕಿನಲ್ಲಿ ವಾಡಿಕೆ ಮಳೆಗೆ ಹೋಲಿಸಿದಲ್ಲಿ ಶೇ 9 ರಷ್ಟು ಕೊರತೆಯಾಗಿದೆ. ಮೊಳಕಾಲ್ಮುರು ಕಸಬಾ ಹೋಬಳಿಯಲ್ಲಿ ಶೇ 24 ಕೊರತೆಯಾಗಿದೆ. ಕೃಷಿಭಾಗ್ಯ ಯೋಜನೆಯಲ್ಲಿ 300 ಹೊಂಡಗಳಿಗೆ 167 ಸಾಧನೆಯಾಗಿದ್ದು ಹೊಸದಾಗಿ ಅರ್ಜಿ ಕರೆಯಲಾಗಿದೆ ಎಂದು ಹೇಳಿದರು. ಅಧ್ಯಕ್ಷತೆಯನ್ನು ಅಧ್ಯಕ್ಷೆ ಬಸಮ್ಮ ಪಾಪನಾಯಕ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ. ಬಸಣ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.