ADVERTISEMENT

ಪುಷ್ಪ ಗ್ರಾಮ ಗುಂಡ್ಲೂರು

ಕೊಂಡ್ಲಹಳ್ಳಿ ಜಯಪ್ರಕಾಶ
Published 8 ಮೇ 2011, 6:55 IST
Last Updated 8 ಮೇ 2011, 6:55 IST

ಮೊಳಕಾಲ್ಮುರು ತಾಲ್ಲೂಕಿನ ಅತ್ಯಂತ ಕುಗ್ರಾಮಗಳಲ್ಲಿ ಗುಂಡ್ಲೂರು ಪ್ರಮುಖವಾದುದು. ಆದರೆ ಈ ಪುಟ್ಟಗ್ರಾಮ ಇಂದು ಚಿತ್ರದುರ್ಗ, ಬಳ್ಳಾರಿ ಮತ್ತು ನೆರೆಯ ಅನಂತಪುರ ಜಿಲ್ಲೆಗಳಲ್ಲಿ ಪುಷ್ಟ ಬೇಸಾಯದಲ್ಲಿ ತನ್ನದೇ ಆದ ಛಾಪು ಮೂಡಿಸಿ ಅಚ್ಚರಿ ಉಂಟು ಮೂಡಿಸಿದೆ.

ಮೊಳಕಾಲ್ಮುರಿನಿಂದ ಮರ್ಲಹಳ್ಳಿ ಮಾರ್ಗವಾಗಿ ಕೇವಲ ನಾಲ್ಕು ಕಿಮೀ ದೂರದಲ್ಲಿರುವ ಗುಂಡ್ಲೂರಿನಲ್ಲಿ ಕೇವಲ 65 ಮನೆಗಳು ಇವೆ. ಇಲ್ಲಿನ ಬಹುತೇಕ ಮನೆಯವರು ಪುಷ್ಪ (ಹೂ) ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ಇಲ್ಲಿ ಈ ಕೃಷಿ ಮಾಡಿಕೊಂಡು ಬರುತ್ತಿದ್ದು, ಸುಮಾರು 65 ಎಕರೆ ಪ್ರದೇಶದಲ್ಲಿ ಬೆಳೆಯುವ ಮೂಲಕ ತಾಲ್ಲೂಕಿನಲ್ಲಿ ಪ್ರಥಮಸ್ಥಾನ ಪಡೆದಿದೆ.

ಗ್ರಾಮದಲ್ಲಿ ಟೊಮ್ಯಾಟೊ ಬೇಸಾಯದಲ್ಲಿ ನಿರತವಾಗಿದ್ದ ತಮಣ್ಣ ಎಂಬುವವರು ಪ್ರಥಮ ಬಾರಿಗೆ ಇಲ್ಲಿ ಹೂವು ನಾಟಿ ಮಾಡಿದ ಬೆಳೆಗಾರರು. ನಂತರ ಗ್ರಾಮದ ಇತರರು ಇದೇ ಮಾರ್ಗ ಅನುಸರಿಸಿದರು ಎನ್ನಲಾಗಿದೆ.

ಮೂಲೆಮನೆ ರುದ್ರಮುನಿ, ಬೆಳಗಲ್ ಈಶ್ವರಯ್ಯಸ್ವಾಮಿ, ಜಿ. ತಿಮ್ಮಪ್ಪ, ಎಂ. ಗೌರಣ್ಣ, ಎಸ್. ತಿಪ್ಪೇಸ್ವಾಮಿ ಪ್ರಮುಖ ಬೆಳೆಗಾರರಾಗಿದ್ದು, ಸಣ್ಣಮೊಗ್ಗಿನ ಮಲ್ಲಿಗೆ ಹಾಗೂ ಕನಕಾಂಬರ ಇಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಸಣ್ಣಮೊಗ್ಗಿನ ಮಲ್ಲಿಗೆ ಪ್ರಥಮಸ್ಥಾನದಲ್ಲಿದ್ದು, ಇಲ್ಲಿಂದ ನಿತ್ಯ ಚಿತ್ರದುರ್ಗ, ಬಳ್ಳಾರಿ, ಶಿವಮೊಗ್ಗ, ನೆರೆಯ ಅಂಧ್ರದ ರಾಯದುರ್ಗ, ಕಲ್ಯಾಣದುರ್ಗ ಮತ್ತು ಸ್ಥಳೀಯ ಮಾರುಕಟ್ಟೆಗೆ ಕಳಿಸಲಾಗುತ್ತಿದೆ. ಪ್ರತಿದಿನ ಅಂದಾಜು 10 ಕ್ವಿಂಟಲ್ ಹೂ ಉತ್ಪಾದನೆಯಾಗುವ ಅಂದಾಜು ಹೊಂದಲಾಗಿದೆ ಎಂದು ಗ್ರಾಮದ ಮುಖಂಡ ಹಾಗೂ ರೈತಸಂಘದ ಜಿಲ್ಲಾ ಮುಖಂಡ ಗುಂಡ್ಲೂರು ಕರಿಯಣ್ಣ ಹೇಳುತ್ತಾರೆ.

2004-05ರಲ್ಲಿ ಅಂತರ್ಜಲ ಮಟ್ಟಕುಸಿದಾಗ ಬೆಳೆಗಾರರು ಹೂವಿನ ಗಿಡಗಳಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದುಬಾರಿ ವೆಚ್ಚ ಭರಿಸಿ ಕೊಳವೆಬಾವಿ ಕೊರೆಸಿದ ಸಾಲ ಇನ್ನೂ ಕಾಡುತ್ತಿದೆ. ಇದರ ಜತೆಗೆ ಬಹುವರ್ಷಗಳಿಂದ ಇದೇ ಬೆಳೆ ಬೆಳೆಯುತ್ತಿರುವ ಪರಿಣಾಮ ನೆಲ ಅಶಕ್ತಗೊಂಡಿದೆ. ಕೆಲ ಸಾರಿ ಕಂಡುಬರುವ ಬಾಧೆಗಳಿಗೆ ಸೂಕ್ತ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಇಲಾಖೆ ಅಧಿಕಾರಿಗಳು ಮಾರ್ಗದರ್ಶನ ಮತ್ತು ಸ್ಥಳ ಭೇಟಿ ಮಾಡಬೇಕಿದೆ ಎಂದು ಕರಿಯಣ್ಣ ಹೇಳುತ್ತಾರೆ.

ನೂತನವಾಗಿ ಜಾರಿಗೆ ಬಂದಿರುವ ಸುವರ್ಣಭೂಮಿ ಯೋಜನೆ ಸೇರಿದಂತೆ ಹಲವಾರು ಪ್ರೋತ್ಸಾಹದಾಯಕ ಕಾರ್ಯಕ್ರಮಗಳು ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿದೆ. ತಾಲ್ಲೂಕಿನ ಹವಾಮಾನ ಪುಷ್ಪ ಕೃಷಿಗೆ ಸೂಕ್ತವಾಗಿದ್ದು ಬಳಕೆ ಮಾಡಿಕೊಂಡು ಕೃಷಿಯಲ್ಲಿ ತೊಡಗಲು ಮುಂದಾಗಬೇಕು ಎಂದು ತಾಲ್ಲೂಕು ತೋಟಗಾರಿಕೆ ಅಧಿಕಾರಿ ಆರ್. ವಿರೂಪಾಕ್ಷಪ್ಪ ಮನವಿ ಮಾಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.