ADVERTISEMENT

‘ಪ್ರಧಾನಿ ಏಕಪಕ್ಷೀಯ ನಿರ್ಧಾರದಿಂದ ತೊಂದರೆ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 5:49 IST
Last Updated 9 ನವೆಂಬರ್ 2017, 5:49 IST

ಚಿತ್ರದುರ್ಗ: ಗರಿಷ್ಠ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ನ. 8ಕ್ಕೆ ಒಂದು ವರ್ಷ ಆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿಯು ಬುಧವಾರ ಕರಾಳ ದಿನ ಆಚರಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಫಾತ್ಯರಾಜನ್‌, ‘ನೋಟು ಅಮಾನ್ಯದಿಂದ ದೇಶಕ್ಕೆ ಯಾವುದೇ ರೀತಿಯ ಲಾಭವಾಗಿಲ್ಲ. ಪ್ರಧಾನಿ ನರೇಂದ್ರಮೋದಿ ಸರ್ವಾಧಿಕಾರಿ ಧೋರಣೆ ಕೈಬಿಟ್ಟು ಅಭಿವೃದ್ಧಿ ಸಾಧಿಸಿ ತೋರಿಸಬೇಕು’ ಎಂದು ಆಗ್ರಹಿಸಿದರು.

‘ನೋಟುಗಳ ಅಮಾನ್ಯದಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಏಕಪಕ್ಷೀಯ ತೀರ್ಮಾನದಿಂದ ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು ಪರಿತಪಿಸುವಂತಾಗಿದೆ’ ಎಂದು ದೂರಿದರು.

ದೇಶದ ಯಾವುದೇ ಆರ್ಥಿಕ ತಜ್ಞರ ಸಲಹೆ ಪಡೆಯದ ಪ್ರಧಾನಿ ಅವರು ಕೈಗೊಂಡ ಈ ಕ್ರಮದಿಂದ ಅನನುಕೂಲವೇ ಜಾಸ್ತಿಯಾಗಿದೆ. ಶ್ರೀಮಂತರು ಶ್ರೀಮಂತರಾಗಿಯೇ ಇದ್ದಾರೆ. ಬಡವರು ಹಾಗೆಯೇ ಇದ್ದಾರೆ. ಯಾವುದೇ ಬದಲಾವಣೆ ಆಗಿಲ್ಲ. ಕಪ್ಪುಹಣ, ಭಯೋತ್ಪಾದನೆ ಯಾವುದೂ ಕಮ್ಮಿಯಾಗಿಲ್ಲ’ ಎಂದು ಟೀಕಿಸಿದರು.

ADVERTISEMENT

ಇದೇ ವೇಳೆ, ಜಿಲ್ಲಾಧಿಕಾರಿ ಕಚೇರಿಯ ಪತ್ರಾಂಕಿತ ಕಚೇರಿ ಸಹಾಯಕ ಸುರೇಶ್‌ ಕುಮಾರ್‌ ಅವರ ಮೂಲಕ ಮನವಿ ಸಲ್ಲಿಸಿದರು. ಪಕ್ಷದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಷಫೀವುಲ್ಲಾ, ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಅಶ್ರಫ್ ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.