ADVERTISEMENT

ಫಲಪುಷ್ಪ ಪ್ರದರ್ಶನದಲ್ಲಿ ‘ವಂಡರ್ ವುಮೆನ್’!

ಹೂಗಳಿಂದಲೇ ನಿರ್ಮಾಣವಾದ ಫೋಟೊ ಫ್ರೇಮ್, ಕಲ್ಲಿನಕೋಟೆ, ಹಂಸಗಳ ಪ್ರತಿಕೃತಿಗಳು

ಕೆ.ಎಸ್.ಪ್ರಣವಕುಮಾರ್
Published 8 ಫೆಬ್ರುವರಿ 2017, 6:11 IST
Last Updated 8 ಫೆಬ್ರುವರಿ 2017, 6:11 IST
ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಆವರಣದೊಳಗೆ ಪತ್ರೆಗಳಿಂದ ನಿರ್ಮಾಣವಾದ ಶಿವಲಿಂಗದ ಪ್ರತಿರೂಪ
ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಆವರಣದೊಳಗೆ ಪತ್ರೆಗಳಿಂದ ನಿರ್ಮಾಣವಾದ ಶಿವಲಿಂಗದ ಪ್ರತಿರೂಪ   

ಚಿತ್ರದುರ್ಗ: ಜಿನಿಯಾ, ಜಿರೇನಿಯಂ, ಸ್ವೀಟ್ ವಿಲಿಯಮ್ಸ್ ಸೇರಿದಂತೆ ಹತ್ತಾರು ಹೂಗಳಿಂದ ವರ್ಣಮಯ ರಂಗೋಲಿಯ ಚಿತ್ತಾರ. ಸಾಹಸಗಾರ್ತಿ
ಯಾಗಿ ವಂಡರ್ ವುಮೆನ್, ಫೋಟೊ ಫ್ರೇಮ್, ಐತಿಹಾಸಿಕ ಕಲ್ಲಿನ ಕೋಟೆ ಆಕಾರದ ಚಿಕ್ಕಪುಟ್ಟ ಬೆಟ್ಟ, ಗುಡ್ಡಗಳು ಪುಷ್ಪ ರಸಿಕರಿಗೆ ಮುದ ನೀಡಲಿವೆ!

ಇವೆಲ್ಲವೂ ಮೈಸೂರಿನ ಪುಷ್ಪ ಕಲಾವಿದರ ಕೈಚಳಕದಲ್ಲಿ ನಿರ್ಮಾಣವಾಗುತ್ತಿದ್ದು, ಅದಕ್ಕಾಗಿ ವಿವಿಧ ರೀತಿಯ ನೂರಾರು ಹೂಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅವೆಲ್ಲವನ್ನೂ ಫೆ. 9ರಂದು ನಗರಕ್ಕೆ ತರಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದೇ ಫೆ. 10 ರಿಂದ 12 ರವರೆಗೆ ಜಿಲ್ಲಾ ಪಂಚಾಯ್ತಿ, ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಜಿಲ್ಲಾ ತೋಟಗಾರಿಕೆ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿರುವ 26ನೇ ಫಲಪುಷ್ಪ ಪ್ರದರ್ಶನಕ್ಕೆ ಈ ಮಾದರಿಗಳೇ ಪ್ರಮುಖ ಆಕರ್ಷಣೆಯಾಗಲಿವೆ.

ಮಹಿಳೆಯರಿಗೆ ಪ್ರದರ್ಶನ ಮೀಸಲು: ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಜನರನ್ನು ಆಕರ್ಷಿಸಲು ಇಲಾಖೆ ಹೊಸ ಮಾದರಿಗಳನ್ನು ಪ್ರದರ್ಶಿಸಲು ಮುಂದಾಗಿದೆ. ಅದಕ್ಕೆ ಸಜ್ಜಾಗುತ್ತಿರುವ ಆವರಣವೇ ಸಾಕ್ಷಿಯಾಗಿದೆ. ₹ 7 ಲಕ್ಷದವರೆಗೆ ಈ ಫಲಪುಷ್ಪ ಪ್ರದರ್ಶನಕ್ಕೆ ಖರ್ಚು ಮಾಡಲಾಗುತ್ತಿದೆ.

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಸಿಂಧು, ದೀಪಾ ಮಲ್ಲಿಕ್, ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ, ಭಾರತದ ಪ್ರಥಮ ಮಹಿಳಾ ಪ್ರಧಾನಿ, ಮುಖ್ಯಮಂತ್ರಿ, ವಿಶ್ವಸುಂದರಿ, ಭುವನಸುಂದರಿ ಹೀಗೆ ಎಲ್ಲವೂ ಮಹಿಳೆಯರಿಗೆ ಮೀಸಲಾಗುವಂಥ ವರ್ಣರಂಜಿತ ಕಲಾಕೃತಿಗಳು ರಾರಾಜಿಸಲಿವೆ.

ಮಹಿಳೆಯನ್ನು ಗೌರವಿಸಿ: ಈ ಬಾರಿಯ ಪ್ರದರ್ಶನದಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ. ಪ್ರಕೃತಿ, ಭೂಮಿ, ನೀರು, ಭಾರತ ಮಾತೆ, ಕನ್ನಡಾಂಬೆ, ತಾಯಿ ಸೇರಿದಂತೆ ದೇಸೀ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷವಾದ ಗೌರವ ನೀಡಲಾಗಿದೆ. ಹೆಣ್ಣನ್ನೂ ಎಲ್ಲರೂ ಪೂಜ್ಯ ಭಾವನೆ
ಯಿಂದ ಕಾಣಬೇಕು ಎಂಬ ಸಂದೇಶವನ್ನು ಪ್ರದರ್ಶನದ ಮೂಲಕ ನೀಡುವ ಉದ್ದೇಶ ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ್ದಾಗಿದೆ.

ಪ್ರಸ್ತುತ ದಿನಗಳಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ ವಿರುದ್ಧ ಜಾಗೃತಿ ಮೂಡಿಸಲು ವಿಶೇಷವಾಗಿರುವ ಕಲಾಕೃತಿಗಳನ್ನು ಇಡಲಾಗುತ್ತಿದೆ. ಅದರಲ್ಲಿ ಹೋರಾಟಗಾರ್ತಿಯಾಗಿ ‘ವಂಡರ್ ವುಮೆನ್’ ಮಾದರಿ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ. ಹೆಣ್ಣನ್ನು ನೋಡುವ ನೋಟ ಭಾವನಾತ್ಮಕ ಮತ್ತು ಅಂತರಾಳವಾಗಿ ಬದಲಾಗಬೇಕು.

ಶೋಷಣೆ ನಿಲ್ಲಬೇಕು, ಸಮಾನತೆ ನೀಡಬೇಕು. ಮಹಿಳೆಯಿಂದ ಸಾಧ್ಯವಾದುದು ಯಾವುದೂ ಇಲ್ಲ. ಮನಸ್ಸು ಮಾಡಿದರೆ, ಏನು ಬೇಕಾದರೂ ಮಾಡಬಲ್ಲಳು ಎಂಬುದನ್ನು ಪ್ರದರ್ಶನದಲ್ಲಿ ತೋರಿಸುವ ಉದ್ದೇಶವಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

60ಕ್ಕೂ ಅಧಿಕ ಬಗೆಯ ಹೂಗಳು:  ವಿವಿಧ ಪುಷ್ಪ ಜೋಡಣೆಗಳಿಗೆ ಹಲವು ಬಗೆಯ ವಿಶೇಷ ಹೂಗಳನ್ನು ಬಳಸುತ್ತಿರುವುದರ ಜತೆಗೆ ಕುಂಡದಲ್ಲಿ ಬೆಳೆದ ಚಿತ್ತಾಕರ್ಷಕ ವರ್ಣಗಳಿಂದ ಕೂಡಿದ 60ಕ್ಕೂ ಹೆಚ್ಚು ಬಗೆಯ ವಾರ್ಷಿಕ ಹೂಗಳು ಪುಷ್ಪ ರಸಿಕರಿಗೆ ಮುದ ನೀಡಲಿವೆ.

ADVERTISEMENT

ಪ್ರಮುಖವಾಗಿ ನಾಲ್ಕು ವರ್ಣಗಳಲ್ಲಿ ಪೆಂಟಾಸ್, 13 ಬಣ್ಣಗಳಲ್ಲಿ ಆಟ್‌ಮಿನಿಯಾಸ್ ನೋಡುವ ಸದವಕಾಶ ಪುಷ್ಪ ಪ್ರಿಯರಿಗೆ ದೊರೆಯಲಿದೆ, ಆರ್ಕಿಡ್ಸ್, ಆಂಥೋರಿಯಂ, ಕಾರ್ನೇಶನ್, ಕಾಕ್ಸ್ ಕೂಂಬ್, ಸೆಲೋಶಿಯಾ, ಪ್ಲಾಕ್ಸ್, ಡೇಲಿಯಾ, ಸಾಲ್ವಿಯಾ, ಚೆಂಡು ಹೂ, ಪೆಟೂನಿಯಾ, ಆಂಟಿರಿನಮ್,  ಕಾಸ್‌ಮಾಸ್, ನಷ್ಟ್ಯೋಷಿಯಾ, ಬಾಲ್ಸಂ, ಹಾಲಿಹಾಕ್, ಹೈಪೋಮಿಯಾ, ಸ್ವೀಟ್ ವಿಲಿಯಮ್ಸ್, ಗಜೋನಿಯಾ, ಡಯಾಂತಸ್, ಗೈಲಾರ್ಡಿಯಾ ಬಳಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.