ADVERTISEMENT

ಬಿಎಸ್‌ವೈ ಮುಖ್ಯಮಂತ್ರಿ ಆದರೆ ಸಮಗ್ರ ನೀರಾವರಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2017, 8:39 IST
Last Updated 26 ಡಿಸೆಂಬರ್ 2017, 8:39 IST

ಹೊಳಲ್ಕೆರೆ: ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಬಿಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಜಿಲ್ಲೆಗೆ ಸಮಗ್ರ ನೀರಾವರಿ ಒದಗಿಸುವರು ಎಂದು ಮಾಜಿ ಶಾಸಕ ಎಂ.ಚಂದ್ರಪ್ಪ ಹೇಳಿದರು. ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ಸೋಮವಾರ ಬಿಜೆಪಿ ಪರಿವರ್ತನಾ ಯಾತ್ರೆಯ ಅಂಗವಾಗಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಸರ್ಕಾರ ನೀರಾವರಿಗೆ ಹೆಚ್ಚು ಆದ್ಯತೆ ನೀಡಿಲ್ಲ. ನಮ್ಮ ಜಿಲ್ಲೆ ಬರದಿಂದ ತತ್ತರಿಸಿದ್ದು, ನೀರಾವರಿ ಸೌಲಭ್ಯ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಆಗದೆ ಕುಂಟುತ್ತಾ ಸಾಗುತ್ತಿದೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಯೋಜನೆಗೆ ಹೆಚ್ಚು ಹಣ ಬಿಡುಗಡೆ ಮಾಡಿದ್ದರು. ಈ ಬಾರಿ ನೀವೆಲ್ಲಾ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಪ್ರತಿ ಹಳ್ಳಿಗಳ ಕೆರೆಗೂ ನೀರು ಹರಿಯಲಿದೆ. ನಮ್ಮ ತಾಲ್ಲೂಕಿನ ರೈತರು ಅಡಿಕೆ, ತೆಂಗು, ಬಾಳೆಯಂತಹ ತೋಟಗಾರಿಕೆ ಬೆಳೆಗಳನ್ನು ಆಶ್ರಯಿಸಿದ್ದು, ಅಂತರ್ಜಲ ಕಡಿಮೆಯಾಗಿದೆ. ಕೊಳವೆಬಾವಿಗಳಲ್ಲಿ ನೀರಿಲ್ಲದೆ ತೋಟಗಳು ಒಣಗುತ್ತಿವೆ. ಬಿಜೆಪಿಯನ್ನು ಬೆಂಬಲಿಸುವುದೇ ಇದಕ್ಕೆಲ್ಲ ಪರಿಹಾರ’ ಎಂದರು.

‘ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಚುನಾವಣೆ ಇನ್ನು ಮೂರು ತಿಂಗಳುಗಳಷ್ಟೇ ಇದ್ದರೂ, ನಾನು ಅನುದಾನ ತರುತ್ತೇನೆ ಎಂದು ಹೇಳುತ್ತಿದ್ದಾರೆ. ನಾನು ಶಾಸಕನಾಗಿದ್ದಾಗ ಕ್ಷೇತ್ರದ 490 ಹಳ್ಳಿಗಳಲ್ಲಿಯೂ ಅಭಿವೃದ್ಧಿ ಕೆಲಸ ಮಾಡಿದ್ದೆ. ಎಲ್ಲಾ ಜಾತಿ, ಮತದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೆ. ಆದ್ದರಿಂದಲೇ ನಾನು ಸೋತರೂ ಜನ ನನ್ನೊಂದಿಗಿದ್ದಾರೆ. ಕಳೆದ ಒಂದು ವಾರದಿಂದ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡುತ್ತಿದ್ದು, ಅಪಾರ ಜನ ಸೇರುತ್ತಿರುವುದೇ ಇದಕ್ಕೆ ಸಾಕ್ಷಿ. ಜ.10 ರಂದು ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆ ಪಟ್ಟಣಕ್ಕೆ ಬರಲಿದ್ದು, ಎಲ್ಲರೂ ಕಾರ್ಯಕ್ರಮಕ್ಕೆ ಬರಬೇಕು’ ಎಂದು ಚಂದ್ರಪ್ಪ ಆಹ್ವಾನಿಸಿದರು.

ADVERTISEMENT

ತಾಲ್ಲೂಕಿನ ಟಿ.ನುಲೇನೂರು, ಲಿಂಗದಹಳ್ಳಿ, ತೊಡರನಾಳು, ತಿರುಮಲಾಪುರ, ಕಾಶಿಪುರ, ಹನುಮನಕಟ್ಟೆ, ಅಮೃತಾಪುರ, ಗೌರಿಪುರ, ಕೊಂಡಾಪುರ, ಚಿತ್ರಹಳ್ಳಿ ಗೊಲ್ಲರಹಟ್ಟಿ, ಈಚಘಟ್ಟ, ನಗರಘಟ್ಟ, ನೆಲ್ಲಿಕಟ್ಟೆ, ಶಿವಗಂಗಾ, ಹಳೇಹಳ್ಳಿ ಗೊಲ್ಲರಹಟ್ಟಿ, ದಾಸಯ್ಯನ ಹಟ್ಟಿ, ಮದ್ದೇರು, ತಾಳ್ಯ, ನೇರಲಕಟ್ಟೆ, ಗಟ್ಟಿಹೊಸಹಳ್ಳಿ, ಕುಮ್ಮಿನಘಟ್ಟ, ವೆಂಕಟೇಶಪುರ, ಹುಲಿಕೆರೆ, ಪಾಪೇನಹಳ್ಳಿ, ಮಲಸಿಂಗನ ಹಳ್ಳಿ, ಸಿರಾಪನಹಳ್ಳಿ ಗ್ರಾಮಗಳಲ್ಲಿ ಪ್ರಚಾರಸಭೆ ನಡೆಸಲಾಯಿತು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ಮಹೇಶ್ವರಪ್ಪ, ತಿಪ್ಪೇಸ್ವಾಮಿ, ಭರಮಸಾಗರ ಶಿವಣ್ಣ, ಬಿಜೆಪಿ ಮುಖಂಡರಾದ ಎಸ್.ಎಂ.ಆನಂದ ಮೂರ್ತಿ, ಚಿತ್ರಹಳ್ಳಿ ದೇವರಾಜು, ಟಿ.ಕೆ.ಯಲ್ಲಪ್ಪ, ಡಿ.ಸಿ.ಮೋಹನ್, ಡಾ.ಉಮಾಪತಿ, ಮರುಳಸಿದ್ದಪ್ಪ, ಜಿ.ಎಚ್.ಶಿವಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.