ADVERTISEMENT

ಬಿಸಿಯೂಟ ಕಾರ್ಯಕರ್ತೆಗೆ ₹ 25 ಸಾವಿರ ಸಾಲ

ಹೊಳಲ್ಕೆರೆ: ಗಂಗಾಕಲ್ಯಾಣ ಯೋಜನೆ ಮಂಜೂರಾತಿ ಪತ್ರ ವಿತರಿಸಿದ ಸಚಿವ ಆಂಜನೇಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 10:25 IST
Last Updated 19 ಮಾರ್ಚ್ 2018, 10:25 IST
ಸೌಲಭ್ಯ ಪಡೆಯಲು ಬಂದಿದ್ದ ಫಲಾನುಭವಿಗಳು.
ಸೌಲಭ್ಯ ಪಡೆಯಲು ಬಂದಿದ್ದ ಫಲಾನುಭವಿಗಳು.   

ಹೊಳಲ್ಕೆರೆ: ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಕ್ಷರ ದಾಸೋಹ ಬಿಸಿಯೂಟ ತಯಾರಕರು ಹಾಗೂ ಆಶಾ ಕಾರ್ಯಕರ್ತೆಯರ ಅವಲಂಬಿತರಿಗೆ ತಲಾ ₹ 25,000ದಂತೆ ಒಟ್ಟು ₹ 4 ಕೋಟಿ ಸಾಲ ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಬಯಲು ರಂಗಮಂದಿರದಲ್ಲಿ ಶನಿವಾರ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಒಟ್ಟು 1,576 ಮಹಿಳೆಯರಿಗೆ ಡಾ.ಬಿ.ಆರ್.ಅಂಬೇಡ್ಕರ್, ದೇವರಾಜ ಅರಸು ಅಭಿವೃದ್ಧಿ ನಿಗಮಗಳಿಂದ ಸಾಲ ಮಂಜೂರು ಮಾಡಲಾಗಿದೆ. ಮೂರು ದಿನಗಳಲ್ಲಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು. ಹಿಂದುಳಿದ ವರ್ಗದವರಿಗೆ ₹ 7,500 ಸಬ್ಸಿಡಿ ಇದ್ದು, ಉಳಿದ ಹಣವನ್ನು ವಾರ್ಷಿಕ ಶೇ 4ರ ಬಡ್ಡಿಯೊಂದಿಗೆ ಹಿಂದಿರುಗಿಸಬೇಕು. ಪರಿಶಿಷ್ಟರಿಗೆ ಶೇ 50ರಷ್ಟು ರಿಯಾಯಿತಿ ಇದೆ. ಬಿಸಿಯೂಟ ತಯಾರಕರು, ಅಂಗನವಾಡಿ ಕಾರ್ಯಕರ್ತೆಯರು ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇದನ್ನರಿತು ಸಾಲ ಮಂಜೂರು ಮಾಡಲಾಗಿದೆ. ಈ ಹಣವನ್ನು ಬಳಸಿಕೊಂಡು ಸ್ವ ಉದ್ಯೋಗ ಕೈಗೊಳ್ಳಬೇಕು ಎಂದರು.

ADVERTISEMENT

ಮಂಜೂರು ಮಾಡಿರುವ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದವರಿಗೆ ಮತ್ತೆ ₹1 ಲಕ್ಷ ಸಾಲ ವಿತರಿಸಲಾಗುವುದು. ಸರ್ಕಾರಿ ಸೌಲಭ್ಯ ಪಡೆಯಲು ಮಧ್ಯವರ್ತಿಗಳಿಗೆ ಹಣ ಕೊಡಬೇಕಾಗಿಲ್ಲ. ಕಚೇರಿಗಳಿಗೆ ಅಲೆಯಬೇಕಿಲ್ಲ. ಅಧಿಕಾರಿಗಳೇ ನಿಮ್ಮ ಮನೆ ಬಾಗಿಲಿಗೆ ಬಂದು ದಾಖಲೆಗಳನ್ನು ಸಂಗ್ರಹಿಸುತ್ತಾರೆ ಎಂದರು.

ತಾಲ್ಲೂಕಿನ ಲಿಂಗಾಯಿತ, ಕುರುಬ, ಗೊಲ್ಲ, ಉಪ್ಪಾರ, ದೇವಾಂಗ ಮತ್ತಿತರ ಹಿಂದುಳಿದ ವರ್ಗದ ರೈತರಿಗೆ ಒಟ್ಟು 600 ಕೊಳವೆಬಾವಿ ಮಂಜೂರು ಮಾಡಲಾಗಿದೆ. ಹಿಂದೆ ಎಂದೂ ಇಷ್ಟು ಪ್ರಮಾಣದ ಕೊಳವೆ ಬಾವಿಗಳು ಮಂಜೂರಾಗಿರಲಿಲ್ಲ. ಹೆಚ್ಚು ಕೊಳವೆಬಾವಿ ಕೊರೆಸಿರುವುದರಿಂದ ಕೆಲವರು ಹೊಟ್ಟೆಕಿಚ್ಚುಪಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಆಂಜನೇಯ ಆರೋಪಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಡಿ.ಕೆ.ಶಿವಮೂರ್ತಿ, ಕೃಷ್ಣಮೂರ್ತಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸವಿತಾ ಬಸವರಾಜು, ವಿಜಯಾ ಆಂಜನೇಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಬಿಇಒ ಹನುಮಂತರಾಯ, ಅಧಿಕಾರಿಗಳು ಇದ್ದರು.
**
ಸಾಲಕ್ಕಾಗಿ ಚಪ್ಪಲಿ ಸವೆಸಿದ್ದೆ!
ಬ್ಯಾಂಕ್ ಗಳಿಂದ ಸಾಲ ಪಡೆಯುವುದು ಅತ್ಯಂತ ಕಷ್ಟದ ಕೆಲಸ. ಹಿಂದೆ ನಾನು ದಾವಣಗೆರೆಯಲ್ಲಿ ಪ್ರಿಂಟಿಂಗ್ ಪ್ರೆಸ್ ಆರಂಭಿಸಲು ₹ 40 ಸಾವಿರ ಸಾಲಕ್ಕಾಗಿ ಕೆಎಸ್ಎಫ್‌ಸಿಗೆ ಅರ್ಜಿ ಸಲ್ಲಿಸಿದ್ದೆ. ಸಾಲ ಮಂಜೂರು ಮಾಡಿಸಲು ಬ್ಯಾಂಕ್‌ಗೆ ಅಲೆದು ಚಪ್ಪಲಿ ಸವೆದುಹೋಗಿದ್ದವು. ಕೊನೆಗೆ ಮೋತಿ ವೀರಪ್ಪ ಅವರ ಜಾಮೀನನ ಮೇಲೆ ಸಾಲ ಮಂಜೂರು ಮಾಡಲಾಯಿತು ಎಂದು ಆಂಜನೇಯ ಹೇಳಿದರು.
**
ಅಧಿಕಾರ ಬಳಸಿ ಕ್ಷೇತ್ರದ ಹೆಚ್ಚು ಜನರಿಗೆ ಸರ್ಕಾರಿ ಸೌಲಭ್ಯ ಮಂಜೂರು ಮಾಡಿದ್ದೇನೆ. ಸೌಲಭ್ಯ ಸಿಗದವರು ನಿರಾಶರಾಗಬೇಕಿಲ್ಲ. ಅವರಿಗೂ ಮುಂದೆ ನೀಡಲಾಗುವುದು.
- ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.