ADVERTISEMENT

ಭಗವಂತನಿಗೆ ದಾಸರಾಗುವುದೇ ‘ಹರಿದಾಸ ಹಬ್ಬ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 4:50 IST
Last Updated 16 ಜನವರಿ 2017, 4:50 IST
ಭಗವಂತನಿಗೆ ದಾಸರಾಗುವುದೇ ‘ಹರಿದಾಸ ಹಬ್ಬ’
ಭಗವಂತನಿಗೆ ದಾಸರಾಗುವುದೇ ‘ಹರಿದಾಸ ಹಬ್ಬ’   

ಚಿತ್ರದುರ್ಗ: ‘ಹರಿದಾಸ ಹಬ್ಬ ಎಂದರೆ ಭಕ್ತರು ಭಗವಂತನಿಗೆ ದಾಸರಾಗುವ ಪ್ರಕ್ರಿಯೆ. ಇದು ದಾಸರ ಹಬ್ಬ. ಈ ಹಬ್ಬಕ್ಕೆ ಇಂತಿಷ್ಟೇ ದಿನಗಳು ಸೀಮತವಾಗಿಲ್ಲ. ಪ್ರತಿ ದಿನವೂ ಹಬ್ಬ ಮಾಡುತ್ತಾ ಭಗವಂತನನ್ನು ಆರಾಧಿಸಬಹುದು’ ಎಂದು ಕೋಲಾರದ ಕಂಬಾಲೂರು ವ್ಯಾಸ ಪೀಠದ ಕಾರ್ಯದರ್ಶಿ ಕಂಬಾಲೂರು ಸಮೀರಾಚಾರ್ಯರು ಅಭಿಪ್ರಾಯಪಟ್ಟರು.

ನಗರದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಶ್ರೀ ಹರಿವಾಯು ಗುರುಸೇವಾ ಸಂಘದಿಂದ  ಭಾನುವಾರ ಆಯೋಜಿಸಿರುವ ಶ್ರೀ ಹರಿವಾಯುಸ್ತುತಿ ಪಾರಾಯಣದ 16ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ವ್ಯಾಸ ಮತ್ತು ದಾಸ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳು. ವ್ಯಾಸ ಸಾಹಿತ್ಯದ ಬೀಜ ದಾಸ ಸಾಹಿತ್ಯದಲ್ಲಿ ಅಡಗಿದೆ. ಅದಕ್ಕಾಗಿಯೇ ಪುರಂದರ ದಾಸರು ನುಡಿದರೆ ಮುತ್ತಿನ ಹಾಡುಗಳು ಹೊರಹೊಮ್ಮತ್ತಿದ್ದವು’ ಎಂದರು.

‘ದಾಸವರೇಣ್ಯ ಕನಕದಾಸರ  ಕೀರ್ತನೆಯ ಪದಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ದಾಸ ಪಾಂಡಿತ್ಯ ಬೇಕು. ಕನಕದಾಸರ ಕೀರ್ತನೆಗಳ ತಿರುಳಿನ ಸಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿ ಇಂಥ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ, ದಾಸ ಮಹಾಶಯರ ಕೀರ್ತನೆಗಳ ಅರಿವಾಗುತ್ತದೆ. ಈ ಮೂಲಕ ಜ್ಞಾನ ಸಂಪಾದನೆ ಹೆಚ್ಚುತ್ತದೆ’ ಎಂದರು.

ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ ಮಾತನಾಡಿ, ‘ಹರಿವಾಯು ಗುರು ಸಂಘ ಹರಿದಾಸ ಹಬ್ಬದಲ್ಲಿ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಆರೋಗ್ಯದ ಬಗ್ಗೆಯೂ ಕಾರ್ಯಕ್ರಮ ಆಯೋಜಿಸಿದೆ. ಇದಕ್ಕಾಗಿ  ಧನವಂತ್ರಿ ಮಹಾಯಾಗ  ಆಯೋಜಿಸಿದೆ. ಸಾಧನೆಯ ಮೂಲಕ ವೃತ್ತಿ, ಪ್ರವೃತ್ತಿಗಳಿಂದ ಧನ ಸಂಪಾದಿ ಸಬಹುದು. ಆದರೆ ಆರೋಗ್ಯ ಸಂಪಾದಿಸುವುದು ಕಷ್ಟ. ಅಂಥ ಮಾಹಿತಿಯನ್ನು ಈ ಯಾಗದ ಮೂಲಕ ಪಸರಿಸುವ ಕೆಲಸ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

‘ಪ್ರಪಂಚದ ಎಲ್ಲಾ ಪ್ರಾಣಿ ಪಕ್ಷಿಗಳಿಗೆ ಆಹಾರ ಸೇವಿಸಲು ಮಿತಿಯಿದೆ. ಆದರೆ, ಮಾನವ ಬಾಯಿ ಚಪಲಕ್ಕಾಗಿ ಮಿತಿಗಿಂತ ಹೆಚ್ಚು ಸೇವಿಸಿ ಅನಾರೋಗ್ಯ ಉಂಟು ಮಾಡಿಕೊಳ್ಳುತ್ತಾನೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಆಹಾರ–ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಧಾರ್ಮಿಕ ಸಭಾ ಕಾರ್ಯಕ್ರಮಗಳು ಎಲ್ಲೇ ನಡೆಯಲಿ ಅವುಗಳನ್ನು ಲೋಕ ಕಲ್ಯಾಣಕ್ಕಾಗಿ ಮಾಡಲಾಗುತ್ತದೆಯೇ ಹೊರತು ಯಾವುದೇ ಕಾರಣಕ್ಕೂ ಸ್ವಾರ್ಥಕ್ಕಾಗಿ ಅಲ್ಲ’ ಎಂದು ಹೇಳಿದರು.

ಮಧ್ವಾಚಾರ್ಯ ಮೂಲ ಸಂಸ್ಥಾನ ತಂಬಿಹಳ್ಳಿಯ ಮಾಧವತೀರ್ಥ ಮಠದ ಪೀಠಾಪತಿಗಳಾದ  ವಿದ್ಯಾಸಾಗರ ಮಾಧವತೀರ್ಥ, ವಿದ್ಯಾಸಿಂಧು ಮಾಧವತೀರ್ಥ  ಜ್ಞಾನಸುಜ್ಞಾನ ದೀಪ ಉದ್ಘಾಟಿಸಿದರು.

ಗುರುರಾಜ ಸೇವಾ ಸಂಘದ ಅಧ್ಯಕ್ಷ ಗೋಪಾಡಿ ಅಚ್ಯುತರಾವ್, ಕರಾವಳಿ ಸ್ನೇಹ ಕೂಟದ ಅಧ್ಯಕ್ಷ ವೇದವ್ಯಾಸ, ಸದ್ಗುರು ಬ್ರಹ್ಮಚೈತನ್ಯ ಮಂಡಳಿ ಅಧ್ಯಕ್ಷ ಕೆ.ಎಸ್.ದಿವಾಕರ್, ವೈಷ್ಣವ ಸಭಾದ ಅಧ್ಯಕ್ಷ ಜನಾರ್ದನ ಅಯ್ಯಂಗಾರ್, ಬಡಗನಾಡು ಸಂಘದ ಅಧ್ಯಕ್ಷ ಸತ್ಯನಾರಾಯಣರಾವ್, ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿವಿಶ್ವನಾಥ ಶ್ರೇಷ್ಠಿ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್.ಸುರೇಶ್‌ರಾಜ್, ಚಿತ್ರದುರ್ಗ ತಾಲೂಕು ಕಸಾಪ ಅಧ್ಯಕ್ಷ ರಾಮಲಿಂಗಶ್ರೇಷ್ಠಿ ಮತ್ತಿತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಸ್ವಾಮೀಜಿದ್ವಯರ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು.


ಹರಿವಾಯುಸ್ತುತಿ ಪುನಃಶ್ಚರಣ ಹೋಮ
ರಾಘವೇಂದ್ರ ಸ್ವಾಮಿ ಮಠದಲ್ಲಿ ವಿದ್ಯಾಸಿಂಧು ಸ್ವಾಮೀಜಿ ಅವರ ನೇತೃತ್ವದಲ್ಲಿ ಹರಿವಾಯುಸ್ತುತಿ ಪುನಃಶ್ಚರಣ ಹೋಮ ನಡೆಯಿತು. ಬೆಳಿಗ್ಗೆ 5ಕ್ಕೆ ಪುಣ್ಯಾಹ, ಹೋಮ. ಬೆಳಿಗ್ಗೆ 8.45ಕ್ಕೆ ಪೂರ್ಣಾಹುತಿ ನಡೆಯಿತು. ಬೆಳಿಗ್ಗೆ 10ಕ್ಕೆ ‘ವ್ಯಾಸ ವಿಜ್ಞಾನ ದೀಪ’ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.

ದಾಸವರೇಣ್ಯರ ಭಾವಚಿತ್ರ ಗಳೊಂದಿಗೆ ಸ್ವಾಮೀಜಿ ಅವರ ಶೋಭಾಯಾತ್ರೆ  ನಗರದ ಆನೆಬಾಗಿಲು ಬಳಿ ಇರುವ ಸುವೃಷ್ಠಿ ಪ್ರಾಣದೇವರ ದೇಗುಲದಿಂದ ಪ್ರಾರಂಭವಾಯಿತು. ನಂತರ ಸಭಾ ಕಾರ್ಯಕ್ರಮ ನಡೆಯುವ ಸ್ಥಳವಾದ ವಾಸವಿ ವಿದ್ಯಾಸಂಸ್ಥೆ ತಲುಪಿತು.

ಹರಿದಾಸ ಹಬ್ಬ ಇಂದು
ಹರಿವಾಯು ಗುರು ಸೇವಾ ಸಂಘ: ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಕನಕದಾಸರ ಮೇರುಕೃತಿ ಹರಿಭಕ್ತ ಸಾರದ ಕುರಿತು ಪ್ರವಚನ ಸಪ್ತಾಹ. ಬೆಳಿಗ್ಗೆ 8 ಕ್ಕೆ.
ರಾಘವೇಂದ್ರ ಸ್ವಾಮಿ ಮಠ. ಸಾಮೂಹಿಕ ವಿಷ್ಣುನಾಮ ಸ್ತೋತ್ರ ಪಾರಾಯಣ. ಸಂಜೆ 6 ಕ್ಕೆ. ಗೋಧೂಳಿಯಲ್ಲಿ ಗೋವಿಂದ ಗೀತಾಮೃತ. ಸಂಜೆ 6.30 ಕ್ಕೆ. ಶ್ರೀಮದ್ ಭಗವತ - ಸಂದೇಶ. ಸಂಜೆ 7ಕ್ಕೆ. ವಾಸವಿ ವಿದ್ಯಾಸಂಸ್ಥೆ ಆವರಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.