ADVERTISEMENT

ಭದ್ರಾ ಮೇಲ್ದಂಡೆ ಮಾರ್ಗ ಬದಲಾವಣೆಗೆ ಅವಕಾಶವಿಲ್ಲ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 7:11 IST
Last Updated 20 ಡಿಸೆಂಬರ್ 2017, 7:11 IST

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನಯಡಿ ಕಾತ್ರಾಳು ಕೆರೆ ಮೂಲಕ ಸಂಗೇನಹಳ್ಳಿಗೆ ನೀರು ಹಾಯಿಸುವ ಉದ್ದೇಶಿತ ಮಾರ್ಗ ಬದಲಾವಣೆಗೆ ಅವಕಾಶ ಕೊಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಆಂಜನೇಯ ಸ್ಪಷ್ಟಪಡಿಸಿದರು.

ಜಿಲ್ಲಾ ನೀರಾವರಿ ಹೋರಾಟ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕಾತ್ರಾಳು ಅಚ್ಚುಕಟ್ಟು ಪ್ರದೇಶದ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಸಚಿವರ ಮನೆಗೆ ತೆರಳಿ ಮನವಿ ಸಲ್ಲಿಸಿದ ವೇಳೆ, ಸಚಿವ ಆಂಜನೇಯ ಈ ರೀತಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಸಚಿವರಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಈ ಮೊದಲು ಗುರುತಿಸಲಾಗಿದ್ದ ಮಾರ್ಗದ ಬಗ್ಗೆ ಮಾಹಿತಿ ನೀಡಿದರು. ‘ಕಾತ್ರಾಳ್ ಕೆರೆ ಸಂಗೇನಹಳ್ಳಿ ಕೆರೆಗೆ ನೀರು ಹರಿಸಿ ಅಲ್ಲಿಂದ ಜಗಳೂರು ಪ್ರದೇಶಕ್ಕೆ ನೀರವಾರಿ ಯೋಜನೆ ರೂಪಿಸಲಾಗಿತ್ತು.

ADVERTISEMENT

ಇದೆಲ್ಲ ಗುರುತ್ವಾಕರ್ಷಣ (ನೈಸರ್ಗಿಕವಾಗಿ) ನೀರು ಹರಿಯುತ್ತದೆ. ಸಂಗೇನಹಳ್ಳಿ ಕೆರೆಯಿಂದ ಮೊಳಕಾಲ್ಮುರು ತಾಲೂಕಿನ ರಂಗಯ್ಯನದುರ್ಗ ಜಲಾಶಯಕ್ಕೆ ಹರಿದು ಹೋಗುತ್ತದೆ. ಐಮಂಗಲ ಮೂಲಕ ಹಾದು ಬರುವ ಚಿತ್ರದುರ್ಗ ವಿಭಾಗದ ಕಾಲುವೆಯಿಂದ ನೀರು ತೆಗೆದುಕೊಂಡು ಕಾತ್ರಾಳು ಕೆರೆ ತುಂಬಿಸುವ ಉದ್ದೇಶಕ್ಕೆ ಇದೀಗ ಜಗಳೂರು ಭಾಗದ ರೈತರಿಂದ ಅಪಸ್ವರದ ಮಾತುಗಳು ಕೇಳಿ ಬಂದಿವೆ ಎಂದು ಮಾಹಿತಿ ನೀಡಿದರು.

ಈ ಸಂಬಂಧ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಗ ಬದಲಾವಣೆ ಕುರಿತಂತೆ ಪರಿಶೀಲನಾ ಸಮಿತಿ ರಚಿಸಿದ್ದಾರೆ. ಡಿ.ಎನ್.ದೇಸಾಯಿ ನೇತತ್ವದಲ್ಲಿ ಈ ಸಮಿತಿ ಈಗಾಗಲೇ ವಾಸ್ತಾವಂಶ ಪರಿಶೀಲನೆಗೆ ಮುಂದಾಗಿದೆ ಎಂದು ತಿಳಿಸಿದರು.

ಸಚಿವ ಆಂಜನೇಯ ಮಾತನಾಡಿ, ‘ಈ ಎಲ್ಲಾ ವಿಚಾರಗಳನ್ನು ಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸುತ್ತೇನೆ. ಮಾರ್ಗ ಬದಲಾವಣೆ ಮಾಡಬಾರದು ಎಂದು ಸಲಹೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಹಿರಿಯೂರು ತಾಲೂಕು ಘಟಕದ ಅಧ್ಯಕ್ಷ ಹೊರಕೇರಪ್ಪ, ಹಂಪಯ್ಯನಮಾಳಿಗೆ ಧನಂಜಯ, ಜಿಲ್ಲಾ ನೀರಾವರಿ ಹೋರಾಟ ಸಮಿತಿ ಖಜಾಂಚಿ ಕೆ.ಆರ್.ದಯಾನಂದ್, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಕಾತ್ರಾಳು ಅಚ್ಚುಕಟ್ಟು ಪ್ರದೇಶದ ರೈತರು ಈ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.