ADVERTISEMENT

ಭೂಮಿ ಖರೀದಿಗೆ ಬೆಳೆಗಾರರ ಪೈಪೋಟಿ

ಹೊಸದುರ್ಗ: ದಾಳಿಂಬೆ ಬೆಳೆ ವಹಿವಾಟು ಜೋರು!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 8:45 IST
Last Updated 21 ಏಪ್ರಿಲ್ 2014, 8:45 IST

ಹೊಸದುರ್ಗ: ದಾಳಿಂಬೆ ಬೆಳೆ ಬೆಳೆಯಲು ತಾಲ್ಲೂಕಿನ ವಾತಾವರಣ ತೃಪ್ತಿಕರವಾಗಿರುವ ಹಿನ್ನೆಲೆಯಲ್ಲಿ ಬೆಳೆಗಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಲ್ಲೂಕಿನಲ್ಲಿ  ಭೂಮಿ ಖರೀದಿಗೆ ಬೆಳೆಗಾರರು ಪೈಪೋಟಿಗೆ ಇಳಿದಿದ್ದಾರೆ.

ದಾಳಿಂಬೆ ಬೆಳೆಯನ್ನು ಚೆನ್ನಾಗಿ ಬೆಳೆಸಿದಲ್ಲಿ ಸುಮಾರು 10 ವರ್ಷಗಳ ಕಾಲ ಫಸಲು ನೀಡುತ್ತದೆ. ಒಂದು ಕೆ.ಜಿ. ದಾಳಿಂಬೆ ಹಣ್ಣಿಗೆ ಈಗ  ರೂ. 80ರಿಂದ ರೂ. 100 ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಭಾಗದ ರೈತರು ಅಡಿಕೆ ಹಾಗೂ ತೆಂಗಿನ ಬೆಳೆಗಳಿಗಿಂತ ಹೆಚ್ಚಾಗಿ ದಾಳಿಂಬೆ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಇಲ್ಲಿನ ಶುಷ್ಕ ವಾತಾವರಣ ದಾಳಿಂಬೆ ಬೆಳೆಗೆ ಯೋಗ್ಯವಾಗಿದೆ. ಈ ಬೆಳೆ ಬೆಳೆಯಲು ಭೂಮಿ ಖರೀದಿಸುವರ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಭೂಮಿಯ ದರವೂ ದಿನದಿಂದ ದಿನಕ್ಕೆ ಬಂಗಾರದಂತೆ ಏರುತ್ತಿದೆ. ಅದರಲ್ಲೂ ಮೈನ್ಸ್‌ ಮಿಶ್ರಿತ ಭೂಮಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸುಮಾರು 10 ವರ್ಷಗಳ ಹಿಂದೆ 1 ಎಕರೆ ಜಮೀನನ್ನು ಕೇವಲ ರೂ. 50ರಿಂದ 60 ಸಾವಿರಕ್ಕೆ ಕೆಲವೆಡೆ ಖರೀದಿಸಬಹುದಿತ್ತು. ಆದರೆ, ಇಂದು 1 ಎಕರೆಗೆ ಖರೀದಿಸಲು ರೂ. 1.5ರಿಂದ 2ಲಕ್ಷ ಕೊಡಬೇಕಿದೆ ಎನ್ನುತ್ತಾರೆ ರೈತ ಪ್ರದೀಪ್‌, ಶ್ರೀನಿವಾಸ್‌.

ಭೂಮಿ ಖರೀದಿ ಹೆಚ್ಚಲು ದಾಳಿಂಬೆಯ ಬಂಪರ್‌ ಲಾಭವೇ ಕಾರಣವಾಗಿದೆ. ಚಿಕ್ಕಮಂಗಳೂರು, ಹಾಸನ,  ದಾವಣಗೆರೆ ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲಿನ ಹಣವಂತರು ಸಹ ತಾಲ್ಲೂಕಿಗೆ ಆಗಮಿಸಿ ಇಲ್ಲಿನ ಭೂಮಿ ಖರೀದಿಸಿ ದಾಳಿಂಬೆ ಬೆಳೆಯಲು ಮುಂದಾಗಿರುವುದರಿಂದ ಭೂಮಿಯ ಬೇಡಿಕೆ ಮತ್ತಷ್ಟೂ ಹೆಚ್ಚಾಗಿದೆ. ಜಮೀನು ಇಲ್ಲದವರು ಬೇರೆಯವರ ಜಮೀನುಗಳನ್ನು 10 ವರ್ಷದ ಗೇಣಿಗೆ  1 ಎಕರೆಗೆ ರೂ. 10ರಿಂದ 15 ಸಾವಿರದ ವರೆಗೆ ನೀಡಿ ಬೆಳೆ ಬೆಳೆಯಲಾಗುತ್ತಿದೆ ಎನ್ನುತ್ತಾರೆ ಜಯಣ್ಣ, ರಾಮಣ್ಣ.

ಅಧಿಕಾರಿ ಪ್ರತಿಕ್ರಿಯೆ: ಒಂದು ಎಕರೆ ಜಮೀನು ಇದ್ದವರು ಸಹ ದಾಳಿಂಬೆ ಬೆಳೆಯಲು ಯೋಚಿಸುತ್ತಿದ್ದಾರೆ. ಕೆಲವೆಡೆ ನಿರುಪಯುಕ್ತವಾಗಿದ್ದ ಜೌಗು ಭೂಮಿಯನ್ನು ಹಸನಗೊಳಿಸಿ, ಅಲ್ಲಿ ಹೊಸ ಮಣ್ಣು ಹಾಕಿ ಅಲ್ಲಿಯೂ ಬೆಳೆ ಬೆಳೆಯಲು ರೈತರು ಮುಂದಾಗಿದ್ದಾರೆ. ಸದ್ಯ ತಾಲ್ಲೂಕಿನಲ್ಲಿ ಸುಮಾರು 12 ಸಾವಿರ ಹೆಕ್ಟೇರ್‌ನಲ್ಲಿ ದಾಳಿಂಬೆ ಬೆಳೆಯಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ತಾಲ್ಲೂಕಿನಲ್ಲಿ ಆಹಾರ ಬೆಳೆ ಬೆಳೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ದಾಳಿಂಬೆಗೆ ಹೆಚ್ಚಿನ ಕೀಟನಾಶಕ ಸಿಂಪರಣೆ ಮಾಡುವುದರಿಂದ ಭೂಮಿಯು ಹಾಳಾಗುತ್ತಿದೆ. ಹಾಗಾಗಿ, ರೈತರು ಸಮಗ್ರ ಕೃಷಿ ಆದ್ಯತೆ ನೀಡಬೇಕು. ಆಹಾರ ಬೆಳೆ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಿಕೊಳ್ಳಬಹುದು ಎನ್ನುತ್ತಾರೆ ಪಟ್ಟಣದ ಕೃಷಿ ಅಧಿಕಾರಿ ಎ.ಸಿ.ಮಂಜು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.