ADVERTISEMENT

ಮಕ್ಕಳ ರಕ್ಷಣೆಗೆ ‘ಪೋಸ್ಕೊ’ ಸಹಕಾರಿ

ಮಹಿಳಾ, ಮಕ್ಕಳ ಸಂರಕ್ಷಣಾಧಿಕಾರಿ ನೌತಾಜ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 9:38 IST
Last Updated 30 ಜೂನ್ 2015, 9:38 IST

ಹೊಸದುರ್ಗ: 18 ವರ್ಷದೊಳಗಿನ ಮಕ್ಕಳ ರಕ್ಷಣೆಗೆ ಪೋಸ್ಕೊ ಕಾಯ್ದೆ ಸಹಕಾರಿಯಾಗಿದೆ ಎಂದು ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ಅಧಿಕಾರಿ ನೌತಾಜ್‌ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳು ಹಾಗೂ ಪೋಸ್ಕೊ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮ ದಲ್ಲಿ  ಅವರು ಮಾತನಾಡಿದರು.

ಮಕ್ಕಳು ಅರಿವಿಲ್ಲದೇ ಮಾಡಿದ ತಪ್ಪುಗಳಿಗೆ ಕಾನೂನಿನಲ್ಲಿ ಯಾವ ರೀತಿಯ ಪರಿಹಾರ ಕ್ರಮಗಳಿವೆ ಎಂಬ ಮಾಹಿತಿಯನ್ನು ಪೋಸ್ಕೊ ಕಾಯ್ದೆ ತಿಳಿಸುತ್ತದೆ. ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದರೆ, ಬಾಲಕಿಯ ಅಶ್ಲೀಲ ಚಿತ್ರ ಬಳಸಿದಲ್ಲಿ 3ರಿಂದ 5 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲು ಪೋಸ್ಕೊ ಕಾಯ್ದೆಯಡಿ ಅವಕಾಶವಿದೆ ಎಂದು ಅವರು ವಿವರಿಸಿದರು.

ಪಟ್ಟಣದ ಜೆಎಂಎಫ್‌ ನ್ಯಾಯಾಲಯದ ಪ್ರಧಾನ ಸಿವಿಲ್‌ ನ್ಯಾಯಾಧೀಶ ಸುನಿಲ್‌ ಎಸ್‌.ಹೊಸಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಹುಟ್ಟಿನಿಂದ ಸಾವಿನ ವರೆಗೂ ಕಾನೂನಿನ ಚೌಕಟ್ಟಿನಲ್ಲಿ ಜೀವಿಸುತ್ತಿದ್ದಾನೆ ಎಂಬುದನ್ನು ಶಾಲಾ ಮಕ್ಕಳಿಗೆ ಚೆನ್ನಾಗಿ ಅರ್ಥೈಸಬೇಕಿದೆ. ಶಾಲಾಹಂತದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಹಿಳೆಯರ ಮತ್ತು ಬಾಲಕಿಯರ ಮೇಲೆ ನಡೆಯುತ್ತಿ ರುವ ದೌರ್ಜನ್ಯ, ಲೈಂಗಿಕ ಕಿರುಕುಳ, ಅತ್ಯಾಚಾರದಂತಹ ಕೃತ್ಯ ಕಡಿಮೆ ಯಾಗುತ್ತವೆ ಎಂದು ಸಲಹೆ ನೀಡಿದರು.

ಶಿಕ್ಷಣ ಸಂಯೋಜಕ ಡಿ.ನಟರಾಜು ಮಕ್ಕಳ ಹಕ್ಕುಗಳು ಕುರಿತು ಉಪನ್ಯಾಸ ನೀಡಿದರು. ಸರ್ಕಾರಿ ಪಿಯು ಕಾಲೇಜಿನ ಉಪ ಪ್ರಾಂಶುಪಾಲ ಜಗದೀಶ್‌ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಸ್‌.ಎಸ್‌.ಕಲ್ಮಠ್‌, ಕಾರ್ಯದರ್ಶಿ ಟಿ.ರಮೇಶ್‌, ಸಹಾಯಕ ಸರ್ಕಾರಿ ಅಭಿಯೋಜಕ ಡಿ.ಪ್ರಶಾಂತಕುಮಾರ್‌, ಎಸ್‌.ಎಂ.ನದಾಫ್‌, ವಕೀಲರಾದ ಗುರುಬಸಪ್ಪ, ಅತಾವುಲ್ಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.