ADVERTISEMENT

ಮೂರು ದಿನ ಲಾರ್ವಾ ಸಮೀಕ್ಷೆ

ಡೆಂಗೆ: ಆರೋಗ್ಯಾಧಿಕಾರಿಗಳಿಂದ ಮನೆ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಮೇ 2015, 7:15 IST
Last Updated 26 ಮೇ 2015, 7:15 IST

ಚಿತ್ರದುರ್ಗ: ಜಿಲ್ಲೆಯಾದ್ಯಂತ ಡೆಂಗೆ ಜ್ವರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಗರದ ಎಲ್ಲ ಪ್ರದೇಶಗಳಿಂದಲೂ ಲಾರ್ವಾ ಸಮೀಕ್ಷೆ ನಡೆಸುತ್ತಿದ್ದಾರೆ. ನೂರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸಹಯೋಗದೊಂದಿಗೆ ಸೋಮವಾರದಿಂದ ಮನೆ ಮನೆಗೆ ತೆರಳಿ ಐದು ದಿನಗಳ ಕಾಲ ಲಾರ್ವಾ ಸಮೀಕ್ಷೆ ಮಾಡುತ್ತಿದ್ದಾರೆ.

ಮೂರು ತಿಂಗಳ ಸಮೀಕ್ಷೆ: ನಗರದ ಪ್ರತಿ ಬಡಾವಣೆಗೂ ಭೇಟಿ ನೀಡುತ್ತಿರುವ ಆರೋಗ್ಯ ಕಾರ್ಯಕರ್ತೆಯರು, ಸಮೀಕ್ಷೆ ವೇಳೆ ಲಾರ್ವಾ ಕಂಡು ಬಂದ ಪ್ರದೇಶದಲ್ಲಿ ಹಳೆಯ ನೀರನ್ನು ತೆರವು ಗೊಳಿಸಿ, ಅಬೇಟ್ ದ್ರಾವಣ ಸಿಂಪಡಿಸಿ ನೀರಿನ ತೊಟ್ಟಿ, ತೆಂಗಿನ ಕಾಯಿ ಚಿಪ್ಪು, ಹಳೆಯ ಟೈರ್, ಪ್ಲಾಸ್ಟಿಕ್ ಕವರ್ ಗಳಲ್ಲಿ ಮನೆಯ ಸುತ್ತ ಮುತ್ತ ನೀರು ಸಂಗ್ರಹವಾ ಗದಂತೆ ನೋಡಿಕೊಳ್ಳಲು ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ ಎಲ್ಲ ಪಂಚಾಯ್ತಿಗಳ ವ್ಯಾಪ್ತಿ ಯಲ್ಲೂ ಲಾರ್ವಾ ಸಮೀಕ್ಷೆ ಕೈಗೆತ್ತಿ ಕೊಳ್ಳಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತೆ  ಯರು ಸಮೀಕ್ಷೆ ನಡೆಸಿ, ವರದಿ ಸಲ್ಲಿಸಲಿದ್ದಾರೆ. ಸಮೀಕ್ಷೆ ಮುಂದಿನ ಮೂರು ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ.

ಜಿಲ್ಲೆಯಲ್ಲಿ 25 ಪ್ರಕರಣಗಳು: ಜಿಲ್ಲೆಯಲ್ಲಿ ಈಗಾಗಲೇ 25 ಡೆಂಗೆ ಪ್ರಕರಣ ವರದಿ ಯಾಗಿವೆ. ಇದರಲ್ಲಿ ಚಿತ್ರದುರ್ಗ ನಗರದಲ್ಲಿ ಅತಿಹೆಚ್ಚು ಪ್ರಕರಣಗಳು ಕಾಣಿಸಿಕೊಂಡ ವರದಿಯಾಗಿವೆ. ಹಾಗಾಗಿ ಡೆಂಗೆ ಜ್ವರದ ಲಕ್ಷಣ, ರೋಗ ಹರಡುವ ಬಗೆ, ನಿವಾರಣಾ ಕ್ರಮಗಳ ಬಗ್ಗೆ ಕರಪತ್ರ ಮುದ್ರಿಸಿ, ಲಾರ್ವಾ ಸಮೀಕ್ಷೆಗೆ ಹೋದ ಪ್ರದೇಶದ ಜನರಲ್ಲಿ ಆರೋಗ್ಯ ಇಲಾಖೆ ಜಾಗೃತಿ ಅರಿವು ಮೂಡಿಸುತ್ತಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಜಯಮ್ಮ ತಿಳಿಸಿದ್ದಾರೆ.

ಸಾವು ತರುವ ಡೆಂಗೆ, ಎಚ್ಚರ: ದಿಢೀರನೆ ಜ್ವರ ಕಾಣಿಸಿಕೊಂಡು, ಜ್ವರ ವಿಪರೀತಕ್ಕೆ ಏರುವುದು. ಜೊತೆಗೆ ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ವಿಪರೀತ ನೋವು, ಮಾಂಸ ಖಂಡ ಮತ್ತು ಕೀಲುಗಳಲ್ಲಿ ನೋವು ಕಾಣಿಸಿ ಕೊಳ್ಳುವುದು ಡೆಂಗೆಯ ಪ್ರಮುಖ ಲಕ್ಷಣಗಳು. ತೀವ್ರಗೊಂಡಾಗ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ.

ಚಿಕುನ್‌ಗುನ್ಯಾ ಮತ್ತು ಡೆಂಗೆ ರೋಗಕ್ಕೆ ನಿರ್ದಿಷ್ಟ ಔಷಧ ಅಥವಾ ಲಸಿಕೆ ಇಲ್ಲ. ಹಾಗಾಗಿ ರೋಗದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಡೆಂಗೆ ಜ್ವರ ಮಾರಣಾಂತಿಕವೂ ಆಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. 

ನಿಯಂತ್ರಣ ವಿಧಾನ: ಮೊದಲೇ  ಹೇಳಿದಂತೆ ಈ ರೋಗ ಈಡಿಸ್ ಸೊಳ್ಳೆಗಳಿಂದ ಹರಡುತ್ತದೆ. ಮನೆ ಒಳಗೆ ಹಾಗೂ ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿಗಳು, ಡ್ರಂಗಳು, ಬ್ಯಾರೆಲ್, ಮಣ್ಣಿನ ಮಡಕೆ, ಉಪಯೋಗ ಮಾಡದಿರುವ ಒರಳು ಕಲ್ಲು ಸೇರಿದಂತೆ ಬಹಳ ಕಾಲ ನೀರು ಸಂಗ್ರಹಣೆಯಾಗುವ ಸ್ಥಳಗಳಲ್ಲಿ ಇದು ಉತ್ಪತ್ತಿಯಾಗುತ್ತದೆ.

ಹಾಗಾಗಿ ನಿಲ್ಲುವ ನೀರನ್ನು ಹೊರ ಚೆಲ್ಲಿ. ನೀರಿನ ಸಂಗ್ರಹಣೆಯನ್ನು ವಾರಕ್ಕೊಮ್ಮೆ ಖಾಲಿ ಮಾಡಿ,  ಒಣಗಿಸಿಡಿ. ತೊಟ್ಟಿ ಒಳಭಾಗಕ್ಕೆ ಸುಣ್ಣ ಹಚ್ಚಿ, ನೀರಿನ ತೊಟ್ಟಿ, ಡ್ರಮ್, ಬ್ಯಾರೆಲ್, ಏರ್ ಕೂಲರ್ ಇತ್ಯಾದಿಗಳನ್ನು ಒಣಗಿಸಿ ಪುನಃ ನೀರನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.

ಇವು ನಿಮ್ಮ ಜವಾಬ್ದಾರಿ: ನೀರು ಸಂಗ್ರಹ ತೊಟ್ಟಿಗಳನ್ನು ಮುಚ್ಚಿ.  ಸೊಳ್ಳೆ ನುಸುಳ ದಂತೆ ಜಾಗೃತಿ ವಹಿಸಿ. ಬಯಲಲ್ಲಿ ಇಡುವ ಟೈರು, ಎಳೆ ನೀರು ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳ ಬೇಕು. ಸೊಳ್ಳೆ ನಿರೋಧಕ ಹಾಗೂ ಸೊಳ್ಳೆ ಪರದೆಗಳನ್ನು  ಬಳಸುವ ಮೂಲಕ ಸೊಳ್ಳೆ ಕಾಟದಿಂದ ರಕ್ಷಣೆ ಪಡೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT