ADVERTISEMENT

ಮೊಳಕಾಲ್ಮುರಿಗಿಲ್ಲ ಶೇಂಗಾ ‘ಖರೀದಿ ಕೇಂದ್ರ ಭಾಗ್ಯ’

ಕೊಂಡ್ಲಹಳ್ಳಿ ಜಯಪ್ರಕಾಶ
Published 19 ಡಿಸೆಂಬರ್ 2017, 8:56 IST
Last Updated 19 ಡಿಸೆಂಬರ್ 2017, 8:56 IST
ಚಳ್ಳಕೆರೆ ಕೃಷಿ ಮಾರುಕಟ್ಟೆಯಲ್ಲಿ ಶೇಂಗಾ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಿರುವ ದೃಶ್ಯ.
ಚಳ್ಳಕೆರೆ ಕೃಷಿ ಮಾರುಕಟ್ಟೆಯಲ್ಲಿ ಶೇಂಗಾ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಿರುವ ದೃಶ್ಯ.   

ಮೊಳಕಾಲ್ಮುರು: ಕೆಒಎಫ್‌ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ನಿರ್ಲಕ್ಷ್ಯದಿಂದಾಗಿ ತಾಲ್ಲೂಕು ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಕೇಂದ್ರ ಸ್ಥಾಪನೆಯಿಂದ ಸೌಲಭ್ಯದಿಂದ ವಂಚಿತವಾಗಿದೆ.

ಜಿಲ್ಲೆಯಲ್ಲಿ ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳಲ್ಲಿ ಶೇಂಗಾ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ವರ್ಷ ತುಸು ಬೆಳೆಯೂ ಕೈಗೆ ಸಿಕ್ಕಿದೆ. ಆದರೆ ಬೆಲೆ ಕುಸಿತದಿಂದಾಗಿ ಇದರ ಫಲ ರೈತರಿಗೆ ದಕ್ಕಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು, ಇದನ್ನು ಬೆಳಗಾವಿ ಅಧಿವೇಶನದಲ್ಲಿ ಶಾಸಕ ಟಿ. ರಘುಮೂರ್ತಿ ಸರ್ಕಾರದ ಗಮನ ಸೆಳೆದ ನಂತರ ಪ್ರತಿ ಕ್ವಿಂಟಲ್‌ಗೆ ರೂ 4,450 ರಂತೆ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಲು ಸೂಚಿಸಲಾಯಿತು. ಇದರ ಅನ್ವಯ ಕೇಂದ್ರಗಳನ್ನು ಕೆಒಎಫ್‌ ಆರಂಭಿಸಿದೆ.

ಕೃಷಿ ಇಲಾಖೆ ಅಧಿಕಾರಿಗಳ ಪ್ರಕಾರ ಎರಡು ದಿನಗಳಿಂದ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಸೋಮವಾರ ಸಾಮಾನ್ಯಸಭೆಯಲ್ಲಿ ಮಾಹಿತಿ ನೀಡಿದರು. ಆದರೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಎಲ್ಲಿಯೂ ಕೇಂದ್ರ ಸ್ಥಾಪಿಸದಿರುವುದು ಕಂಡುಬಂದಿದೆ. ಈ ಬಗ್ಗೆ ಕೆಒಎಫ್‌ ಅಧಿಕಾರಿಗಳನ್ನು ವಿಚಾರಿಸಿದಾಗ ತಾಲ್ಲೂಕಿನಲ್ಲಿ ಈಗಾಗಲೇ ರೈತರು ಶೇಂಗಾ ಮಾರಿದ್ದಾರೆ, ಕೇಂದ್ರ ಆರಂಭಿಸಿದರೂ ಪ್ರಯೋಜನವಿಲ್ಲ ಎಂದು ನಮ್ಮ ನಿಗಮ ಅಧಿಕಾರಿಗಳು ವರದಿ ನೀಡಿದ್ದು ಇದನ್ನು ಆಧರಿಸಿ ಕೇಂದ್ರ ಆರಂಭಿಸಿಲ್ಲ.

ADVERTISEMENT

ಜಿಲ್ಲಾಪಂಚಾಯ್ತಿ ಸದಸ್ಯ ಡಾ.ಬಿ.ಯೋಗೇಶ್‌ಬಾಬು ಮಾತನಾಡಿ, ‘ಜಿಲ್ಲಾಪಂಚಾಯ್ತಿ ಸದಸ್ಯರ ನಿಯೋಗವೂ ಸದನ ವೇಳೆ ಬೆಂಬಲ ಬೆಲೆಗೆ ಆಗ್ರಹಿಸಿ ಮನವಿ ನೀಡಿತ್ತು. ಮೊಳಕಾಲ್ಮುರು ಕೈಬಿಟ್ಟು ಹೋಗಿರುವ ಬಗ್ಗೆ ಕೆಒಎಫ್‌ ವ್ಯವಸ್ಥಾಪಕರು ಹಾಗೂ ಕೃಷಿ ಜಂಟಿ ನಿರ್ದೇಶಕರ ಜತೆ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ . ಕೇಂದ್ರ ಆರಂಭಿಸದಿದ್ದಲ್ಲಿ ಪ್ರತಿಭಟನೆ ಮಾಡಲಾಗುವುದು’ ಎಂದು ಹೇಳಿದರು.

ತಹಶೀಲ್ದಾರ್‌ ಕೊಟ್ರೇಶ್‌ ಮಾತನಾಡಿ, ‘ಸಮಸ್ಯೆ ಗಮನಕ್ಕೆ ಬಂದಿದೆ. ಈ ಬಗ್ಗೆ ‘ಕೆಒಎಫ್‌’ ಜತೆ ಮಾತನಾಡಿದ್ದು ಬುಧವಾರ ರಾಂಪುರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದು. ಪಟ್ಟಣದ ಗುರುಭವನದಲ್ಲಿ ಕೇಂದ್ರ ಆರಂಭಕ್ಕೆ ಸ್ಥಳ ನೀಡುವುದಾಗಿ ತಿಳಿಸಿದ್ದು ಸ್ಥಳ ಭೇಟಿ ಮಾಡಿ ಆರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿ‌ದ್ದಾರೆ ಎಂದು ಹೇಳಿದರು. ಜಿಲ್ಲಾಧಿಕಾರಿ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರೈತರ ಹಿತ ಕಾಪಾಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.

* * 

ಖರೀದಿ ಕೇಂದ್ರ ಸಮರ್ಪಕ ಆರಂಭಕ್ಕೆ ಕೆಒಎಫ್‌ ಜತೆ ಚರ್ಚಿಸಲಾಗುವುದು. ಇಲ್ಲವಾದಲ್ಲಿ ಸರ್ಕಾರದ ಗಮನ ಸೆಳೆದಿದ್ದು ವ್ಯರ್ಥವಾಗುತ್ತದೆ.
ಟಿ. ರಘುಮೂರ್ತಿ, ಶಾಸಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.