ADVERTISEMENT

ಮೌಢ್ಯದಿಂದ ಹೊರಬರಲು ಕಿವಿಮಾತು

ಹಿರಿಯೂರು: ಮ್ಯಾಕ್ಲೂರಹಳ್ಳಿಗೆ ಮಂಜುಳಾ ಮಾನಸ ಭೇಟಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 11:22 IST
Last Updated 28 ಜೂನ್ 2016, 11:22 IST

ಹಿರಿಯೂರು: ಹೆರಿಗೆ ಸಂದರ್ಭದಲ್ಲಿ ಮಗು ಸಮೇತ ಊರಿಂದ ಹೊರಗೆ ಇರುವುದು ವೈಜ್ಞಾನಿಕವಾಗಿ ತಪ್ಪು. ಇಂತಹ ಆಚರಣೆಗಳಿಂದ ಭಾರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಎಚ್ಚರಿಸಿದರು. ತಾಲ್ಲೂಕಿನ ಮ್ಯಾಕ್ಲೂರಹಳ್ಳಿಗೆ ಸೋಮವಾರ ಭೇಟಿ ನೀಡಿದ್ದ ಅವರು ಕಾಡುಗೊಲ್ಲ ಜನಾಂಗದ ಮಹಿಳೆಯರ ಜತೆ ಸಂವಾದ ನಡೆಸಿದರು.

‘ಅನಾದಿ ಕಾಲದಿಂದ ಇಂತಹ ಗೊಡ್ಡು ಆಚರಣೆಗಳು ನಡೆಯುತ್ತ ಬಂದಿದ್ದು, ವೈಜ್ಞಾನಿಕವಾಗಿ ಜಗತ್ತು ಅನೂಹ್ಯ ವೇಗದಲ್ಲಿ ಮುಂದುವರಿದಿರುವ ಸಂದರ್ಭದಲ್ಲೂ ಇದು ನಿರಂತರವಾಗಿರುವುದು ಬೇಸರದ ಸಂಗತಿ. ಮುಟ್ಟು ಎಂದು ಊರಿನ ಹೊರಗೆ ಯಾವುದೇ ಸೌಲಭ್ಯಗಳಿಲ್ಲದ, ಕನಿಷ್ಠ ರಕ್ಷಣೆಯೂ ಇಲ್ಲದ ಕಡೆ ಹೋಗಿ ಇರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಹೆರಿಗೆ ಮತ್ತು ಮುಟ್ಟಿನ ಸಂದರ್ಭದಲ್ಲಿ ಸ್ವಚ್ಛತೆ ಮುಖ್ಯ ಎಂದು ಅವರು ಸಲಹೆ ನೀಡಿದರು.

ಊರಿನ ಗೌಡ ಪೂಜಾರಿಗಳು ಇಂತಹ ಅರ್ಥವಿಲ್ಲದ ಆಚರಣೆಗಳಿಗೆ ಕಡಿವಾಣ ಹಾಕಬೇಕು. ಮಹಿಳೆಯರಲ್ಲಿ ವೈಜ್ಞಾನಿಕ ಅರಿವು ಮೂಡಿಸಬೇಕು. ಹೆರಿಗೆ, ಮುಟ್ಟು ಇವೆಲ್ಲ ಸಹಜ ಪ್ರಕ್ರಿಯೆಗಳು. ಪ್ರಕೃತಿ ನಿಯಮಗಳು. ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಹೋದರೆ ಅನಾಹುತ ಕಟ್ಟಿಟ್ಟಬುತ್ತಿ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೀನಾ ತಂಡ ರಚಿಸಿ, ಹದಿಹರೆಯದ ಹೆಣ್ಣುಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ ಎಂದು ಮಂಜುಳಾ ಸಂತಸ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲೂ ಇಂತಹದ್ದೇ ಆಚರಣೆಗಳಿದ್ದವು. ಅಲ್ಲಿನ ಮಹಿಳೆಯರಿಗೆ ಅರಿವು ಮೂಡಿಸಿದ್ದರಿಂದ ಬದಲಾವಣೆಯ ಗಾಳಿ ಬೀಸಿದೆ. ಗೊಲ್ಲ ಜನಾಂಗದ ಮಹಿಳೆಯರು ಮೌಢ್ಯಾಚರಣೆಗಳಿಂದ ಹೊರಬಂದು ಶಿಕ್ಷಣ ಪಡೆಯಬೇಕು. ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿಕೊಳ್ಳಬಾರದು. ಬಯಲು ಶೌಚಕ್ಕೆ ಕಡಿವಾಣ ಹಾಕಬೇಕು.

ಕಡ್ಡಾಯವಾಗಿ ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಮನೆಯ ಹತ್ತಿರ ತಿಪ್ಪೆ, ಬಣವೆಗಳನ್ನು ಇಟ್ಟುಕೊಳ್ಳಬಾರದು. ಪರಿಸರ ಸ್ವಚ್ಛವಾಗಿದ್ದಲ್ಲಿ ಮಾತ್ರ ಮನುಷ್ಯರಿಗೆ ಆರೋಗ್ಯ ಸಿಗಲು ಸಾಧ್ಯ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜು ಮಾತನಾಡಿ, ಜಿಲ್ಲೆಯಲ್ಲಿರುವ ಯಾದವರ ಹಟ್ಟಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ರಂಗೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಹನುಮಂತರಾಯಪ್ಪ, ಸಮಾಜ ಕಲ್ಯಾಣಾಧಿಕಾರಿ ಕೃಷ್ಣಮೂರ್ತಿ, ಸರ್ಕಲ್ ಇನ್‌ಸ್ಪೆಕ್ಟರ್ ಸುದರ್ಶನ್, ಬಿಸಿಎಂ ಇಲಾಖೆ ಅಧಿಕಾರಿ ರಮೇಶ್ ಮಧುರೆ, ಸಿಡಿಪಿಒ ಮುದ್ದಪ್ಪ, ಕಾಡುಗೊಲ್ಲರ ಸಂಘದ ಅಧ್ಯಕ್ಷ ರಂಗಯ್ಯ, ಕಾರ್ಯದರ್ಶಿ ಬಸವರಾಜು, ಗ್ರಾ.ಪಂ. ಸದಸ್ಯ ಮಹಂತೇಶ್, ದಯಾನಂದ್, ಗೌರಮ್ಮ, ಪಾಂಡುರಂಗಪ್ಪ, ಕೆಂಚಮ್ಮ ದೇವರಾಜು, ನಾಗರತ್ನಮ್ಮ, ರಂಗಸ್ವಾಮಿ, ಪಾರಿಕರಿಯಪ್ಪ, ಡಾ.ಗಿರೀಶ್, ಪಿ.ಆರ್. ದಾಸ್, ಚಂದ್ರಹಾಸ, ಜೆ. ಕೃಷ್ಣಮೂರ್ತಿ, ಸಿ.ಶಿವಾನಂದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.