ADVERTISEMENT

ರಸ್ತೆಗಳು ಗುಂಡಿ ಬಿದ್ದಿವೆ; ಹೊಸ ರಸ್ತೆ ನಿರ್ಮಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 9:30 IST
Last Updated 9 ಸೆಪ್ಟೆಂಬರ್ 2017, 9:30 IST

ಚಿತ್ರದುರ್ಗ: ಗುಂಡಿ ತುಂಬಿರುವ ನಗರದ ರಸ್ತೆಗಳನ್ನು ಹೊಸದಾಗಿ ನಿರ್ಮಿಸಿಬೇಕು ಎಂದು ಒತ್ತಾಯಿಸಿ ಆಟೊ ಚಾಲಕರು ಗುರುವಾರ ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು

ನಗರದ ಬಹುತೇಕ ರಸ್ತೆಗಳು ನಗರದ ರಸ್ತೆಗಳ ತುಂಬ ದೊಡ್ಡ ದೊಡ್ಡ ಗುಂಡಿಗಳಿವೆ. ಚಾಲಕರಿಗೆ, ಗುಂಡಿ ತಪ್ಪಿಸುತ್ತಾ ಆಟೊ ಓಡಿಸುವುದು ಸವಾಲಿನ ಕೆಲಸವಾಗಿದೆ. ಅನೇಕ ಬಾರಿ ಚಾಲಕರ ನಿಯಂತ್ರಣ ತಪ್ಪಿ ಆಟೊಗಳು ಉರುಳಿ ಬಿದ್ದಿರುವ ಉದಾಹರಣೆಗಳಿವೆ. ಗರ್ಭಿಣಿಯರನ್ನು ಕೂರಿಸಿಕೊಂಡು, ಆಟೊ ಚಾಲನೆ ಮಾಡಲಾಗುತ್ತಿಲ್ಲ. ಗರ್ಭಿಣಿಯರಷ್ಟೇ ಅಲ್ಲ, ಅನಾರೋಗ್ಯದಿಂದ ಬಳಲುತ್ತಿರುವವರನ್ನು ಆಟೊದಲ್ಲಿ ಕರೆದೊಯ್ಯಲು ಭಯವಾಗುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ನಗರದ ರಸ್ತೆಗಳು ಹದಗೆಟ್ಟು ದಶಕವಾಗಿದೆ. ಉತ್ತಮ ರಸ್ತೆಗಳನ್ನು ನಿರ್ಮಿಸಲು ನಗರಸಭೆಯಾಗಲಿ, ಜಿಲ್ಲಾಡಳಿತವಾಗಲಿ ಗಮನಹರಿಸಿಲ್ಲ. ಈ ಕ್ಷೇತ್ರದ ಶಾಸಕ, ಸಂಸದ, ಸಚಿವರಾದಿಯಾಗಿ ಯಾರಿಗೂ ಈ ಬಗ್ಗೆ ಕಾಳಜಿಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ರಸ್ತೆ ಹದಗೆಟ್ಟಿರುವುದರಿಂದ, ನಮ್ಮ ದುಡಿಮೆಗೆ ಪೆಟ್ಟು ಬಿದ್ದಿದೆ. ಒಂದು ಕಡೆ ಆಟೊ ರಿಪೇರಿಗೆ ಹಣ ಖರ್ಚು ಮಾಡುತ್ತಿದ್ದೇವೆ. ಮತ್ತೊಂದು ಕಡೆ ಮೈ ಕೈ ನೋವಿನಿಂದ ನರಳುತ್ತಾ ಆಸ್ಪತ್ರೆಗೆ ಹಣ ತೆರುತ್ತಿದ್ದೇವೆ. ರಸ್ತೆ ಚೆನ್ನಾಗಿದ್ದಾಗ, ಹೆಚ್ಚು ಹೊತ್ತು ಆಟೊ ಓಡಿಸುತ್ತಿದ್ದೆವು. ಈಗ ಅದಕ್ಕೂ ಅಡಚಣೆಯಾಗಿದೆ. ನಮ ಚಾಲಕರ ಸಂಕಟ, ಪ್ರಯಾಣಿಕರ ಕಷ್ಟ ಅರಿತಾದರೂ, ಬೇಗ ಹೊಸ ರಸ್ತೆ ಮಾಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಹೊಸದಾಗಿ ಜಿಲ್ಲೆಗೆ ಬಂದಿರುವ ಜಿಲ್ಲಾಧಿಕಾರಿ ರಸ್ತೆ ಪರಿಸ್ಥಿತಿಯನ್ನು ಒಮ್ಮೆ ಪರಿಶೀಲಿಸಿದರೆ ನಮ್ಮ ನೋವು ಏನೆಂದು ಅರ್ಥವಾದೀತು’ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಆಟೊ ಚಾಲಕರಾದ ಎಸ್.ವೆಂಕಟೇಶ್, ಕೆ.ಮಂಜುನಾಥ್, ಟಿ.ಪ್ರೇಮ ಕುಮಾರ್, ನಾಗರಾಜ್ ಜಿ.ಒ, ವಿ.ತಿಪ್ಪೇಸ್ವಾಮಿ, ಸಿದ್ದರಾಮಪ್ಪ, ಎಸ್.ಜೆ.ಮಂಜುನಾಥ್, ಶಿವರಾಜ್, ಟಿ.ರವಿಕುಮಾರ್, ಸಿದ್ದಪ್ಪ, ಕಣುಮೇಶ್, ಹನುಮಂತ, ಆರ್.ನಾಗರಾಜ್, ಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.