ADVERTISEMENT

ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 8:31 IST
Last Updated 6 ಸೆಪ್ಟೆಂಬರ್ 2017, 8:31 IST

ಚಿಕ್ಕಜಾಜೂರು: ಕಿರಿದಾದ ಮಣ್ಣಿನ ರಸ್ತೆ, ಪಕ್ಕದಲ್ಲಿ ಜಮೀನುಗಳಿರುವ ಕಡೆ ಮಳೆಗಾಲದಲ್ಲಿ ಪಾದಚಾರಿಗಳೂ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗೊಲ್ಲರಹಟ್ಟಿ ಹಾಗೂ ಗುಂಜಿಗನೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಮೀಪದ ಗಿಂಜಿಗನೂರು ಗ್ರಾಮದಿಂದ ಗೊಲ್ಲರಹಟ್ಟಿ ಮೂಲಕ ಚಿಕ್ಕಜಾಜೂರಿಗೆ ಹೋಗುವ ಮಾರ್ಗದಲ್ಲಿ 2–3 ಕಿ.ಮೀ. ವರೆಗಿನ ರಸ್ತೆ ಸಂಪೂರ್ಣ ಹಾಳಾಗಿಹೋಗಿದೆ. ಇದರಿಂದಾಗಿ ಚಿಕ್ಕಜಾಜೂರಿಗೆ ಬರುವ ದ್ವಿಚಕ್ರ ವಾಹನ ಚಾಲಕರಿಗೆ, ಪಾದಚಾರಿಗಳಿಗೆ ಹಾಗೂ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ.

ಅಲ್ಲದೆ, ಗುಂಜಿಗನೂರು ಮತ್ತು ಗೊಲ್ಲರಹಟ್ಟಿ ಗ್ರಾಮಗಳಿಂದ ಹೊಲಗಳಿಗೆ ಎತ್ತಿನಗಾಡಿ ಮತ್ತಿತರ ವಾಹನಗಳಲ್ಲಿ ಈ ಮಾರ್ಗದಲ್ಲೇ ಸಂಚರಿಸಬೇಕಾಗಿದೆ. ಆದರೆ, ಕೆಲವು ತಿಂಗಳ ಹಿಂದೆ ರಸ್ತೆಗೆ ಹಾಕಲಾಗಿದ್ದ ಮಣ್ಣು ಮಳೆ ಕಾರಣದಿಂದ ಸಂಪೂರ್ಣವಾಗಿ ಕೆಸರಿನ ಗದ್ದೆಯಂತಾಗಿದ್ದು, ಸಂಚರಿಸಲು ತುಂಬಾ ಕಷ್ಟವಾಗಿದೆ.

ADVERTISEMENT

ಚಿಕ್ಕಜಾಜೂರಿಗೆ ಗೊಲ್ಲರಹಟ್ಟಿಯಿಂದ ಬರುವ ದ್ವಿಚಕ್ರ ವಾಹನ ಚಾಲಕರು ಹಾಗೂ ಸೈಕಲ್‌ಗಳಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಜಾರಿ ಬಿದ್ದಿರುವ ಘಟನೆಗಳೂ ನಡೆದಿವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ತಕ್ಷಣ ರಸ್ತೆಗೆ ಉತ್ತಮ ಗುಣಮಟ್ಟದ ಮಣ್ಣನ್ನು ಹಾಕಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಗುಂಜಿಗನೂರು, ಗೊಲ್ಲರಹಟ್ಟಿ ಗ್ರಾಮಸ್ಥರು, ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.