ADVERTISEMENT

ರೈತಸಂಘ ಒಡೆಯಲು ಬಿಡುವುದಿಲ್ಲ: ಶಂಕರಪ್ಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 10:07 IST
Last Updated 4 ಸೆಪ್ಟೆಂಬರ್ 2015, 10:07 IST

ಚಿತ್ರದುರ್ಗ: ರಾಜ್ಯದಲ್ಲಿ ರೈತ ಸಂಘ ಒಡೆಯಬಾರದು. ಈ ಕಾರಣಕ್ಕಾಗಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಶಾಖೆ ಉದ್ಘಾಟಿಸಲು ಬರುತ್ತಿರುವ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲರು ವಾಪಸ್ ಹೋಗಬೇಕು. ಇಲ್ಲವಾದರೆ, ಅವರಿಗೆ ಘೆರಾವ್ ಹಾಕಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ನುಲೇನೂರು ಶಂಕರಪ್ಪ ಎಚ್ಚರಿಕೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಅವರು ಮಾತನಾಡಿದರು. ‘ಈಗಾಗಲೇ ಹರಿದು ಹಂಚಿ ಹೋಗಿರುವ ರೈತ ಸಂಘವನ್ನು ಒಂದು ಗೂಡಿಸಬೇಕಿದೆ. ರೈತ ಸಂಘ ಗುಂಪು ಗುಂಪುಗಳಾಗಿ ಒಡೆದು ಹೋಗಿದೆ. ಮೊದಲು ಅದನ್ನು ಸರಿಪಡಿಸಿ ಇಡೀ ರೈತ ಸಮೂಹವನ್ನು ಒಂದೆಡೆಗೆ ಸೇರಿಸುವ ಕೆಲಸವಾಗಬೇಕೆ ಹೊರತು, ಮತ್ತೊಂದು ಸಂಘ ಹುಟ್ಟುಹಾಕಿ ಗುಂಪುಗಾರಿಕೆ ಮಾಡಲು ನಮ್ಮ ಜಿಲ್ಲೆಯಲ್ಲಿ ಅವಕಾಶ ಕೊಡುವುದಿಲ್ಲ. ರೈತರ ಕುರಿತು ನಿಜವಾದ ಅನುಕಂಪವಿದ್ದರೆ, ಹೊತ್ತಿ ಉರಿಯುತ್ತಿ ರುವ ಉತ್ತರ ಕರ್ನಾಟಕದ ರೈತರಿಗೆ ನಾಯಕತ್ವ ಕೊಡಿ. ಇಲ್ಲಿಗೆ ಬಂದು ಮೋಸ ಮಾಡುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ’ ಎಂದು ಹೇಳಿದರು.

ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. 350ಕ್ಕೂ ಹೆಚ್ಚು ರೈತರು ಸಾಲದ ಭಾದೆಯಿಂದ ಹೊರಬರಲು ಸಾಧ್ಯ ವಾಗದೆ, ಆತ್ಮಹತ್ಯೆ ಮಾಡಿಕೊಂಡು ಕುಟುಂಬವನ್ನು ಬೀದಿಪಾಲು ಮಾಡಿ ದ್ದಾರೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸೆ.4 ರಂದು ನಗರದ ಎಪಿಎಂಸಿ ರೈತ ಭವನದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಎಂದು ಮತ್ತೊಂದು ಸಂಘವನ್ನು ಹುಟ್ಟು ಹಾಕುವ ಮೂರ್ಖತನದ ಕೆಲಸ ಮಾಡಬೇಡಿ ಎಂದು ಅವರು ತಿಳಿಸಿದರು.

ಆರ್.ಬಿ.ನಿಜಲಿಂಗಪ್ಪ ಮಾತನಾಡಿ, ಸೋಮಗುದ್ದರಂಗಸ್ವಾಮಿ ಮತ್ತೆ ಅಪಸ್ವರ ಎತ್ತಿ ರೈತ ಸಂಘವನ್ನು ಮುರಿಯುವ ಕೆಲಸ ಮಾಡಬಾರದು. ಅನ್ನದಾತರೆಂದು ಕರೆಸಿ ಕೊಳ್ಳುವ ರೈತ ಸಂಘವನ್ನು ಕೆಲವೇ ಜಾತಿಗೆ ಸೀಮಿತಗೊಳಿಸಬಾರದು. ಸಂಘ ಹೊಡೆಯುವುದು ಸರಿಯಲ್ಲವೆಂದು ಬಾಬಾಗೌಡ ಅವರನ್ನು ಪ್ರಶ್ನಿಸುವ ತೀರ್ಮಾನಕ್ಕೆ ಮುಖಂಡರು ಬಂದಿದ್ದಾರೆ. ಚಿತ್ರದುರ್ಗಕ್ಕೆ ಆಗಮಿಸದಂತೆ ಎಪಿಎಂಸಿ ಸಭಾಂಗಣದ ಬಳಿ ಘೋಷಣೆ ಕೂಗುವುದಾಗಿ ಹೇಳಿದರು.

ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿದರು. ರೈತ ಮುಖಂಡರಾದ ಸಿ.ಆರ್.ತಿಮ್ಮಣ್ಣ, ಡಿ.ಜಯಣ್ಣ, ಶಿವನಕೆರೆ ಮಂಜಣ್ಣ, ತಿಪ್ಪೇಸ್ವಾಮಿ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷ ರಾಮಚಂದ್ರರೆಡ್ಡಿ, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಸುರೇಶ್‌ಬಾಬು, ಕಾರ್ಯದರ್ಶಿ ಧನಂಜಯ ಪಾಲ್ಗೊಂಡಿದ್ದರು.

ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವ ಬದಲು ಮತ್ತೊಂದು ರೈತ ಸಂಘ ಹುಟ್ಟು ಹಾಕಲು ರಾಜ್ಯ ರೈತ ಸಂಘ ಬಿಡುವುದಿಲ್ಲ.
– ಟಿ.ನುಲೇನೂರು ಶಂಕರಪ್ಪ,
ರೈತಸಂಘ ಮತ್ತು ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.